ನೆನಪಿನ ಶಕ್ತಿ ಹೆಚ್ಚಿಸಲು ಸುಲಭ ದಾರಿಗಳು

mind
Published on
ಧನ್ವಂತರಿ
ಮಕ್ಕಳಿಗೆ ಪರೀಕ್ಷೆ ಹತ್ತಿರ ಬರುತ್ತಿದೆ. ಓದಿದ್ದೆಲ್ಲ ನೆನಪಿದ್ದರೆ ಸಾಕು ಎಂಬ ಭಾವನೆ ಎಲ್ಲರಿಗೂ ಇರುತ್ತದೆ. ಹಾಗಾಗಿ ಇಂದು ನಾವು ನೆನಪಿನ ಶಕ್ತಿಯನ್ನು ಹೆಚ್ಚಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ. ಈ ಕ್ರಮಗಳಿಂದ ಕೇವಲ ನೆನಪಿನ ಶಕ್ತಿ ಹೆಚ್ಚುವುದಷ್ಟೇ ಅಲ್ಲ ಮಿದುಳಿನ ಆರೋಗ್ಯದ ವೃದ್ಧಿಯೂ ಕೂಡ ಆಗುತ್ತದೆ. ಮನಸ್ಸು ಧನಾತ್ಮಕ ರೀತಿಯಲ್ಲಿ ಬದಲಾಗಲು ಸಹಾಯವಾಗುತ್ತದೆ. ಈ ವಿಷಯದಲ್ಲಿ ಆಹಾರ, ಕೆಲವು ದಿನಚರಿಯ ಕ್ರಿಯೆಗಳು, ಜೀವನ ಶೈಲಿ ಮತ್ತು ಕೆಲವು ಔಷಧಗಳು ತುಂಬ ಸಹಕಾರಿಯಾಗುತ್ತವೆ.

ನೆನಪಿನ ಶಕ್ತಿಯನ್ನು ಹೆಚ್ಚಿಸುವ ಆಹಾರಗಳ ಬಗ್ಗೆ ಹೇಳುವಾಗ ಮೊದಲನೆಯ ಸ್ಥಾನವನ್ನು ಪಡೆದುಕೊಳ್ಳುವುದು ತುಪ್ಪ. ಶುದ್ಧ ದೇಸಿ ಹಸುವಿನ ಹಾಲಿನ ತುಪ್ಪವಾದರಂತೂ ಅಮೃತ ಸಮಾನವೇ ಸರಿ. ಹಾಗಾಗಿ ಮಕ್ಕಳಿಗೆ ನಿತ್ಯವೂ ಒಂದೆರಡು ಚಮಚವಾದರೂ ತುಪ್ಪವನ್ನು ಉಳಿದ ಆಹಾರದ ಜೊತೆಗೆ ಕೊಡಬೇಕು. ವಾಲ್ನಟ್, ಬಾದಾಮಿ, ಗೋಡಂಬಿಯಂತಹ ನಟ್​ಗಳು ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ತುಂಬ ಸಹಕಾರಿ. ಬೂದುಗುಂಬಳಕಾಯಿ ಅತ್ಯಂತ ಮೇಧ್ಯವೆಂದು ಆಯುರ್ವೆದ ಹೇಳುತ್ತದೆ. ಹಾಗಾಗಿ ಬೂದುಗುಂಬಳಕಾಯಿಯ ಹಲ್ವಾ ಅಥವಾ ಲೇಹ್ಯ ಮಾಡಿ ನಿತ್ಯವೂ ಮಕ್ಕಳಿಗೆ ರುಚಿಯಾದ ಒಂದು ಖಾದ್ಯದ ರೀತಿಯಲ್ಲಿ ಕೊಡಬಹುದು.

ನಿತ್ಯವೂ ಬ್ರಾಹ್ಮಿ ಅಥವಾ ಒಂದೆಲಗದ ಜ್ಯೂಸನ್ನು ಅರ್ಧ ಲೋಟದಷ್ಟು ಪ್ರಮಾಣದಲ್ಲಿ ಮಕ್ಕಳಿಗೆ ಕೊಡಬಹುದು. ಆದರೆ ನಿಮ್ಮ ವೈದ್ಯರ ಸಲಹೆ ಇಲ್ಲದೇ ಒಂದು ದಿನದಲ್ಲಿ ಐದಕ್ಕಿಂತ ಹೆಚ್ಚು ಎಲೆಗಳನ್ನು ಕೊಡುವುದು ಬೇಡ.

ದಿನಕ್ಕೆ ಕನಿಷ್ಠ 20 ನಿಮಿಷಗಳ ಕಾಲ ಆಸನ, ಪ್ರಾಣಾಯಾಮಗಳನ್ನು ಅಭ್ಯಾಸ ಮಾಡುವಂತೆ ಮಕ್ಕಳಿಗೆ ಹೇಳಬೇಕು. ಹೆಬ್ಬೆರಳು ಮತ್ತು ತೋರುಬೆರಳುಗಳ ತುದಿಗಳನ್ನು ಸೇರಿಸಿ ಮಾಡುವ ಚಿನ್ಮುದ್ರೆಯನ್ನು ದಿನದಲ್ಲಿ ಹತ್ತೇ ನಿಮಿಷ ಹಾಕಿ ಕುಳಿತುಕೊಂಡರೂ ಮಾನಸಿಕ ಒತ್ತಡ ಕಡಿಮೆಯಾಗಿ ನೆನಪಿನ ಶಕ್ತಿ ಹೆಚ್ಚುತ್ತದೆ.

ನಾವು ಮಿದುಳನ್ನು ಎಷ್ಟು ಹೆಚ್ಚು ಬಳಸುತ್ತೇವೋ ಅಷ್ಟು ಶಕ್ತಿಯುತವಾಗುತ್ತಾ ಹೋಗುತ್ತದೆ. ಹಾಗಾಗಿ ನೆನಪಿನ ಶಕ್ತಿಯನ್ನು ಬಳಸಿ ಆಡುವ ಆಟಗಳು ಅಥವಾ ವಿವಿಧ ರೀತಿಯ ಮನೋರಂಜನೆಗಳಿಗಾಗಿ ದಿನದಲ್ಲಿ ಕೆಲಸಮಯವನ್ನಾದರೂ ಮೀಸಲಿಡಬೇಕು. ಆದರೆ ಯಾವುದೇ ಕಾರಣಕ್ಕೂ ನೆನಪಿನ ಶಕ್ತಿ ಎಷ್ಟಿದೆ ಎಂದು ಅಳೆಯುವುದಾಗಲೀ, ಪರೀಕ್ಷೆ ಮಾಡುವುದಾಗಲೀ ಮಾಡಬಾರದು. ನಿಮ್ಮ ಮಕ್ಕಳ ಎದುರಿಗೆ ನಿನಗೆ ನೆನಪಿನ ಶಕ್ತಿ ಕಡಿಮೆ ಎಂದು ಅಥವಾ ಯಾರದಾದರೂ ಜೊತೆ ಮಾತನಾಡುವಾಗ ನನ್ನ ಮಗ ಅಥವಾ ಮಗಳಿಗೆ ನೆನಪಿನ ಶಕ್ತಿ ಕಡಿಮೆ ಇದೆ ಎಂದು ಯಾವುದೇ ಕಾರಣಕ್ಕೂ ಹೇಳಬೇಡಿ. ಇದರಿಂದ ಆತ್ಮವಿಶ್ವಾಸ ಹೊರಟುಹೋಗಿ ನಿಮ್ಮ ಮಗು ಎಲ್ಲದರಲ್ಲೂ ಸೋಲುವಂತಾಗುತ್ತದೆ.

ಮಕ್ಕಳಿಗೆ ಒಳ್ಳೆಯ ಪ್ರಮಾಣದಲ್ಲಿ ಸುಖಕರವಾದ ನಿದ್ದೆ ಆಗುವಂತೆ ನೋಡಿಕೊಳ್ಳಬೇಕು. ಕನಿಷ್ಠ ಏಳು ತಾಸು ನಿದ್ದೆ ಮಾಡಲೇಬೇಕು. ನೆನಪಿನ ಶಕ್ತಿ ಅಥವಾ ಏಕಾಗ್ರತೆಯನ್ನು ಹಾಳು ಮಾಡುವ ಅತ್ಯಂತ ದೊಡ್ಡ ಅಸ್ತ್ರವೆಂದರೆ ಗಮನಭಂಗ. ಅಂದರೆ ಹೋಂವರ್ಕ್ ಅಥವಾ ಅಭ್ಯಾಸ ಮಾಡುವಾಗ ಗಮನ ಒಂದು ಕ್ಷಣವೂ ಬೇರೆ ಕಡೆ ಹೋಗದೇ ಇರುವಂತೆ ಟಿವಿ ಅಥವಾ ಮೊಬೈಲುಗಳ ಬಳಕೆ ಮಾಡದಿರುವುದು ಒಳ್ಳೆಯದು. ಹಾಗಾಗಿ ನಿಮ್ಮ ಮಕ್ಕಳಿಗೆ ಮೊಬೈಲ್ ಕೊಡುವುದಾದರೂ ಇಷ್ಟು ಸಮಯ ಎಂದು ನಿರ್ಧಾರ ಮಾಡಿ ದಿನಕ್ಕೊಮ್ಮೆ ಆ ಸಮಯದಲ್ಲಿ ಮಾತ್ರ ಕೊಡಿ. ಅಧ್ಯಯನದ ಸಮಯದಲ್ಲಿ ಮೊಬೈಲ್ ಅಥವಾ ಟಿವಿ ಅಕ್ಕಪಕ್ಕದಲ್ಲಿ ಯಾವುದೇ ಕಾರಣಕ್ಕೂ ಇರಬಾರದು.

ಎಷ್ಟೋ ರೀತಿಯ ಔಷಧಗಳು ಅಥವಾ ಆಹಾರೌಷಧಗಳು ನೆನಪಿನ ಶಕ್ತಿ ಹೆಚ್ಚಾಗಲು ಅನುಕೂಲ ಮಾಡಿಕೊಡುತ್ತವೆ. ಉದಾಹರಣೆಗೆ ನಾವು ನಿಸರ್ಗ ಮನೆಯಲ್ಲಿ ಕೊಡುವ ಸ್ಮಾರ್ಟ್ 3 ಎಂಬ ಮಾತ್ರೆಯನ್ನು ದಿನಕ್ಕೆರಡು ಬಾರಿಯಂತೆ ಮೂರು ತಿಂಗಳುಗಳ ಕಾಲ ಸೇವಿಸಿದರೆ ಮಕ್ಕಳ ಮಿದುಳಿನ ಶಕ್ತಿ ಹೆಚ್ಚಲು ಮತ್ತು ನೆನಪಿನ ಶಕ್ತಿ ಹೆಚ್ಚಾಗಲು ತುಂಬಾ ಅನುಕೂಲವಾಗುತ್ತದೆ.

ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಅಧ್ಯಯನ ಮಾಡಿದರೆ ಒಳ್ಳೆಯದು. ಆಗ ಎದ್ದು ಅಧ್ಯಯನ ಮಾಡಿದ್ದು ಚೆನ್ನಾಗಿ ನೆನಪಿನಲ್ಲಿ ಇರುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ.

(ಪ್ರತಿಕ್ರಿಯಿಸಿ: vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net