ಸಂಧಿವಾತ ಬಾಧಿಸುತ್ತಿದೆಯೇ? ನಿರ್ಲಕ್ಷ್ಯ ಬೇಡ, ಅರಿವಿರಲಿ: ಡಾ. ಚಂದ್ರಶೇಖರ್ ಸಲಹೆ | Arthritis

ವಿಜಯವಾಣಿ-3-3
Published on

ಪ್ರತಿವರ್ಷ ಅ.12ರಂದು ವಿಶ್ವ ಸಂಧಿವಾತ ದಿನ ಆಚರಿಸಲಾಗುತ್ತದೆ. ಈ ಬಾರಿ ‘ತಿಳಿವಳಿಕೆಯುಳ್ಳ ಆಯ್ಕೆಗಳು, ಉತ್ತಮ ಫಲಿತಾಂಶಗಳು’ ಎಂಬ ಘೋಷವಾಕ್ಯದೊಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ಬೆಂಗಳೂರು: ಬದಲಾದ ಜೀವನ ಶೈಲಿ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಅವುಗಳಲ್ಲಿ ಸಂಧಿವಾತವೂ (Arthritis) ಒಂದು. ಬಹುಕಾಲದಿಂದ ಸಂಧಿವಾತ ಜನರನ್ನು ಬಾಧಿಸುತ್ತಿದೆ. ಆದರೆ, ಅರಿವಿನ ಕೊರತೆ ಹಾಗೂ ನಿರ್ದಿಷ್ಟ ಚಿಕಿತ್ಸಕರ ಅಲಭ್ಯತೆಯಿಂದಾಗಿ ಬಹಳಷ್ಟು ಜನ ನೋವಿನೊಂದಿಗೆ ಜೀವಿಸಿ, ನೋವಿನಲ್ಲಿ ಪ್ರಾಣ ಬಿಟ್ಟಿದ್ದಾರೆ. ಈಗ ಪರಿಸ್ಥಿತಿ ಹಾಗಿಲ್ಲ. ಬಹಳಷ್ಟು ಔಷಧಗಳು, ಆಧುನಿಕ ಚಿಕಿತ್ಸಾ ಪದ್ಧತಿ ಹಾಗೂ ಅನುಭವಿ ತಜ್ಞರು ಲಭ್ಯವಿದ್ದು, ಸಂಧಿವಾತದ ಲಕ್ಷಣಗಳ ಅರಿವಿದ್ದರೆ ಆರಂಭದಲ್ಲೇ ಚಿಕಿತ್ಸೆ ಪಡೆಯುವ ಮೂಲಕ ಪರಿಹಾರ ಹೊಂದಬಹುದಾಗಿದೆ.

‘ವಿಶ್ವ ಸಂಧಿವಾತ ದಿನ’(ಅ. 12)ದ ಅಂಗವಾಗಿ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಂವಾದದಲ್ಲಿ ಚನ್​ರೇ ರುಮಟಾಲಜಿ ಮತ್ತು ಇಮ್ಯೂನಾಲಜಿ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಚಂದ್ರಶೇಖರ್, ಸಂಧಿವಾತಕ್ಕೆ ಕಾರಣ, ಲಕ್ಷಣ, ಚಿಕಿತ್ಸೆ ಮತ್ತು ಪರಿಹಾರ ಕುರಿತು ಮಾಹಿತಿ ನೀಡಿದ್ದಾರೆ.

ಸಂಧಿವಾತ ಎಂದರೆ ಎಲ್ಲರೂ ಕಾಯಿಲೆ ಎಂದು ತಿಳಿದಿದ್ದಾರೆ. ಆದರೆ, ಇದು ಕಾಯಿಲೆಯಲ್ಲ. ಹಾಗಾಗಿ ಮೊಣಕಾಲು, ಮೊಣಕೈ, ಮಣಿಕಟ್ಟುಗಳು, ಬೆರಳು ಸೇರಿ ಸಂಧುಗಳಲ್ಲಿ ನೋವು ಹಾಗೂ ಊತ ಕಾಣಿಸಿಕೊಂಡಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ನಿರ್ಲಕ್ಷಿಸಿದರೆ ಕಿಡ್ನಿ, ಲಿವರ್, ಕಣ್ಣು, ಮಿದುಳು ಸೇರಿ ಅಂಗಾಂಗಗಳಿಗೆ ಹಾನಿಯುಂಟು ಮಾಡಲಿದೆ. ಹಾಗಾಗಿ ಸಂಧುಗಳಲ್ಲಿ ನಿರಂತರ ನೋವು ಕಂಡು ಬಂದಲ್ಲಿ ತಕ್ಷಣ ಆಥೋ ವೈದ್ಯರನ್ನು ಸಂರ್ಪಸಿ ಎಂದು ಸಲಹೆ ನೀಡಿದರು.

ಸಂಧಿವಾತದ ಸಾಮಾನ್ಯ ಲಕ್ಷಣ: ದೇಹದ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಬದಲಾವಣೆ ಆದಾಗ ಸಂಧಿವಾತ ಕಾಣಿಸಿಕೊಳ್ಳುತ್ತದೆ. ಅಂದರೆ ಕೀಲುಗಳಲ್ಲಿ ತೀವ್ರವಾದ ನೋವು, ಸಂಧುಗಳಲ್ಲಿ ಬಿಗಿತ, ಕಾಲುಗಳು ಮತ್ತು ಕೈ ಹಾಗೂ ಬೆರಳುಗಳ ಚಲನೆ ಕಷ್ಟವಾಗುತ್ತದೆ. ಕೀಲು ಹಾಗೂ ಸಂಧುಗಳಲ್ಲಿ ನೋವು ಮತ್ತು ಊತ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕೂಡಲೇ ಚಿಕಿತ್ಸೆ ಪಡೆಯಬೇಕು. ದೀರ್ಘಕಾಲದವರೆಗೆ ಚಿಕಿತ್ಸೆ ಪಡೆಯದಿದ್ದರೆ ಸಮಸ್ಯೆ ಉಲ್ಬಣಿಸುತ್ತದೆ. ಜಂಟಿ ಬದಲಾವಣೆ ಮಾಡಿಸುವ ಅನಿವಾರ್ಯತೆ ಎದುರಾಗುತ್ತದೆ. ಇದು ಯಾವ ವಯಸ್ಸಿನಲ್ಲಿ ಬೇಕಾದರೂ ಬರಬಹುದು.

ಸಂಧಿವಾತದ ವಿಧಗಳು

ರುಮಟಾಯ್ಡ್ ಸಂಧಿವಾತ: ಇದು ಅತ್ಯಂತ ನೋವಿನಿಂದ ಕೂಡಿದ್ದು, ಗಂಭೀರ ಸ್ವರೂಪದ್ದಾಗಿರುತ್ತದೆ. ದೇಹದಲ್ಲಿ ಸ್ವಯಂ ನಿರೋಧಕ ಶಕ್ತಿಯ ಕೊರತೆಯಿಂದ ಉಂಟಾಗುತ್ತದೆ. ಮಹಿಳೆಯರಲ್ಲಿ ಇದು ಹೆಚ್ಚು. ಮುಟ್ಟು ನಿಂತ ನಂತರ ಸಮಸ್ಯೆ ಕಂಡು ಬರುವ ಸಾಧ್ಯತೆಗಳು ಹೆಚ್ಚಿದೆ. ಬೆಳಗ್ಗೆ ಎದ್ದಾಗ ಕೀಲುಗಳಲ್ಲಿ ಹೆಚ್ಚು ಬಿಗಿತ, ಶಕ್ತಿ ಕುಂದುವುದು, ಜ್ವರ, ಹಸಿವು ಆಗದಿರುವುದು ಇದರ ಸೂಚನೆಗಳಾಗಿವೆ.

ಅಸ್ಥಿ ಸಂಧಿವಾತ: ಇದು ಸಾಮಾನ್ಯ ರೂಪವಾಗಿದೆ. ವಯಸ್ಸಾದಂತೆ ಮೂಳೆಗಳಲ್ಲಿನ ಶಕ್ತಿ ಕುಂದುವುದರಿಂದ ಸಂಭವಿಸುತ್ತದೆ. ಇದು ಕೀಲಿನಲ್ಲಿ ನೋವು, ಬಿಗಿತ ಮತ್ತು ಊತ ಉಂಟುಮಾಡುತ್ತದೆ. ಹೆಚ್ಚಾಗಿ ಕೈಗಳು, ಸೊಂಟ ಮತ್ತು ಮೊಣಕಾಲುಗಳಲ್ಲಿ ಕಾಣಿಸಿಕೊಳ್ಳುತ್ತದೆ. 50 ವರ್ಷಕ್ಕಿಂತ ಮೇಲ್ಪಟ್ಟವರು (ಮಹಿಳೆಯರಲ್ಲಿ ಹೆಚ್ಚು) ಅಧಿಕ ತೂಕ ಹೊಂದಿರುವವರಲ್ಲಿ ಕಾಲುಗಳ ಮೇಲೆ ಭಾರ ಬೀಳುವುದರಿಂದ ಹಾಗೂ ಸಣ್ಣಕ್ಕಿರುವವರಲ್ಲಿ ಮೂಳೆಯ ಗುಣಮಟ್ಟ ಕುಸಿಯುವಿಕೆಯಿಂದ ಅಸ್ಥಿ ಸಂಧಿವಾತ ಉಂಟಾಗುತ್ತದೆ.

ಜುವೆನೈಲ್ ಆರ್ಥ್ರೈಟಿಸ್​

ಮಕ್ಕಳಲ್ಲಿ (16 ವರ್ಷದ ಒಳಗಿನವರಲ್ಲಿ) ಕಂಡು ಬರುವ ಸಮಸ್ಯೆ. ಇದು ಕೀಲುಗಳಲ್ಲಿ ನೋವು ಮತ್ತು ಉರಿಯೂತ ಲಕ್ಷಣಗಳನ್ನು ಹೊಂದಿರುತ್ತದೆ. ಮಕ್ಕಳಲ್ಲಿ ಜುವೆನೈಲ್ ಆರ್ಥ್ರೖರ್ೆಟಿಸ್ ಪ್ರಮಾಣ ಶೇ.1 -2 ಇದೆ ಅಂದರೆ ಪ್ರತಿ 10 ಸಾವಿರ ಮಕ್ಕಳಲ್ಲಿ ಒಂದಿಬ್ಬರಲ್ಲಿ ಕಂಡು ಬರುತ್ತದೆ.

ಸೋರಿಯಾಟಿಕ್ ಸಂಧಿವಾತ

ಇದು 30ರಿಂದ 50 ವರ್ಷ ವಯಸ್ಸಿನವರಲ್ಲಿ ಕಂಡುಬರುತ್ತವೆ. ಸೌಮ್ಯವಾದ ಅಥವಾ ದೀರ್ಘಕಾಲದ ಉರಿಯೂತ ಹೊಂದಿರುತ್ತದೆ. ನೆತ್ತಿ, ಮೊಣಕೈಗಳು ಅಥವಾ ಮೊಣಕಾಲುಗಳ ಮೇಲೆ ಹೆಚ್ಚಾಗಿ ಚರ್ಮದ ಊತ, ಚರ್ಮದಲ್ಲಿ ಗಾಯಗಳು, ಕೀಲುಗಳಲ್ಲಿ ಬಿಗಿತ ಮತ್ತು ಊತ ಕಾಣಿಸಿಕೊಳ್ಳುತ್ತದೆ. ಇದು ಅನುವಂಶಿಕವಾಗಿಯೂ ಬರುವ ಸಾಧ್ಯತೆ ಹೆಚ್ಚಿದೆ.

ಗೌಟ್

ನಿರಂತರವಾಗಿ ಎರಡು ದಿನ ಇಲ್ಲವೆ ಒಂದು ವಾರ ಕೀಲುಗಳಲ್ಲಿ ನೋವು, ಊತ, ಉರಿಯಂತಹ ಲಕ್ಷಣಗಳು ಕಾಣಿಸಿಕೊಂಡು ನಂತರ ಹೋಗಬಹುದು. ಹೆಬ್ಬೆರಳಿನಲ್ಲಿ ನೋವು ಆರಂಭವಾಗಿ ದೇಹದ ಎಲ್ಲ ಕೀಲುಗಳಲ್ಲೂ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾದಾಗ ಇದು ಸಂಭವಿಸುತ್ತದೆ. ಈ ಸಮಸ್ಯೆ ಹೊಂದಿರುವವರಲ್ಲಿ ಹೃದಯ ಅಥವಾ ಮೂತ್ರಪಿಂಡಗಳಿಗೆ ತೊಂದರೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

ಲೂಪಸ್: ದೀರ್ಘಕಾಲ ಕಾಡುವ ಈ ಸಮಸ್ಯೆಗೆ ನಿಖರ ಕಾರಣ ತಿಳಿದಿಲ್ಲ. ಆದರೆ ಅನುವಂಶಿಕ ಅಂಶಗಳು ವಿಶೇಷ ಪಾತ್ರ ವಹಿಸುತ್ತವೆ. ದೇಹದ ಯಾವುದೇ ಭಾಗದಲ್ಲಿ ನೋವು ಬರಬಹುದು. ಸಾಮಾನ್ಯವಾಗಿ ಚರ್ಮ, ಕೀಲುಗಳು, ಮೂತ್ರಪಿಂಡಗಳು, ಹೃದಯದಂತಹ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. 15-44 ವಯಸ್ಸಿನವರಲ್ಲಿ ಇದು ಕಂಡು ಬರುತ್ತದೆ.

ಆರೋಗ್ಯ ವಿಮೆಯಲ್ಲಿ ಸೇರಿಸಬೇಕು

ಸಂಧಿವಾತ ಚಿಕಿತ್ಸೆಯು ದೀರ್ಘಕಾಲ ಬಾಧಿಸುವ ಸಮಸ್ಯೆ ಯಾಗಿದ್ದು, ಇದಕ್ಕೆ ವೈದ್ಯಕೀಯ ವೆಚ್ಚಗಳು ದುಬಾರಿ. ಹಾಗಾಗಿ ಅನೇಕರು ಹೆಚ್ಚು ಹಣ ಖರ್ಚು ಮಾಡಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಪಡೆಯಲು ಆರೋಗ್ಯ ವಿಮೆಯಲ್ಲಿ ಅವಕಾಶ ಕಡಿಮೆ. ಹಾಗಾಗಿ ಆರೋಗ್ಯ ವಿಮೆಯಲ್ಲಿ ಸಂಧಿವಾತ ಚಿಕಿತ್ಸೆಯನ್ನು ಸೇರಿಸಿದಲ್ಲಿ ರೋಗಿಗಳಿಗೆ ಅನುಕೂಲವಾಗಲಿದೆ.

ಸಂಧಿವಾತಕ್ಕೆ ಕಾರಣ

  • ವಯಸ್ಸಿನ ಕಾರಣ
  • ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಬದಲಾವಣೆ
  • ಕೀಲುಗಳಲ್ಲಿ ಹೆಚ್ಚಿನ ಯೂರಿಕ್ ಆಮ್ಲ
  • ವೈರಾಣು ಜ್ವರ ಮತ್ತು ಸೋಂಕು ರೋಗಗಳು
  • ಬೊಜ್ಜು ಅಥವಾ ದೇಹ ತೂಕ ಹೆಚ್ಚಳ
  • ಧೂಮಪಾನ ಹಾಗೂ ಇತರೆ ತಂಬಾಕು ಬಳಕೆ
  • ಅನುವಂಶಿಕ ಶೇ.5

ಎಚ್ಚರಿಕೆ ಕ್ರಮಗಳು

  • ಆರೋಗ್ಯಕರ ದೇಹದ ತೂಕ
  • ನಿಯಮಿತ ದೈಹಿಕ ಚಟುವಟಿಕೆ
  • ಧೂಮಪಾನದಿಂದ ದೂರ
  • ಆರೋಗ್ಯಕರ ಆಹಾರ ಸೇವನೆ
  • ಗಾಯ ಆಗದಂತೆ ಎಚ್ಚರಿಕೆ
  • ಸಮಯಕ್ಕೆ ಊಟ ಮತ್ತು ನಿದ್ರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net