ಈರುಳ್ಳಿ ಸಿಪ್ಪೆಯನ್ನು ಬಿಸಾಡದೇ ಈ ರೀತಿ ಟ್ರೈ ಮಾಡಿ ಆಮೇಲೆ ಅದರ ಚಮತ್ಕಾರ ನೋಡಿ!

Onion peels
Published on

ಈರುಳ್ಳಿ ಬಳಸದ ಜನರೇ ಇಲ್ಲ ಎಂದು ಹೇಳಬಹುದು. ಅಡುಗೆ ಅಂತ ಬಂದಾಗ ಪ್ರಮುಖವಾಗಿ ಈರುಳ್ಳಿ ಬೇಕೆ ಬೇಕು. ದಿನಕ್ಕೆ ಕನಿಷ್ಠ ಒಂದು ಈರುಳ್ಳಿಯಾದರೂ ಸೇವಿಸಲೇಬೇಕು. ಈರುಳ್ಳಿ ಇಲ್ಲದ ಅಡುಗೆಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅದರಲ್ಲೂ ನಾನ್​ವೆಜ್​ ವಿಚಾರಕ್ಕೆ ಬಂದಾಗ ಈರುಳ್ಳಿ ಅದರ ರುಚಿಯನ್ನು ಡಬಲ್​ ಮಾಡುತ್ತದೆ. ಹೀಗಾಗಿ ಈರುಳ್ಳಿ ಎಲ್ಲರ ನೆಚ್ಚಿನ ಆಹಾರ ಪದಾರ್ಥವಾಗಿದೆ.

ಅಂದಹಾಗೆ ಈರುಳ್ಳಿ ಕೇವಲ ತಿನ್ನಲು ಮಾತ್ರವಲ್ಲದೆ ಕೂದಲಿನ ಆರೋಗ್ಯಕ್ಕೂ ಬಳಸಲಾಗುತ್ತದೆ. ಬಹುತೇಕರು ಈರುಳ್ಳಿ ಸಿಪ್ಪೆಯನ್ನು ಸುಲಿದು ಕಸದ ಬುಟ್ಟಿಗೆ ಬೀಸಾಡುತ್ತಾರೆ. ಆದರೆ, ಸಿಪ್ಪೆಯಲ್ಲಿರುವ ಆರೋಗ್ಯಕರ ಅಂಶಗಳು ಕೂದಲಿಗೆ ತುಂಬಾ ಉಪಕಾರಿ ಎಂಬುದು ಅನೇಕರಿಗೆ ತಿಳಿದಿಲ್ಲ. ಒಂದು ವೇಳೆ ಇದರ ಉಪಯೋಗವೇನಾದರೂ ನಿಮಗೆ ಗೊತ್ತಾದರೆ ಯಾವುದೇ ಕಾರಣಕ್ಕೂ ನೀವು ಈರುಳ್ಳಿಯನ್ನು ಬೀಸಾಡುವುದೇ ಇಲ್ಲ.

ಈರುಳ್ಳಿ ಸಿಪ್ಪೆಯಲ್ಲಿ ವಿಟಮಿನ್ ಎ, ಸಿ, ಇ ಮತ್ತು ಉತ್ಕರ್ಷಣ ನಿರೋಧಕಗಳ ಹೆಚ್ಚಿನ ಪ್ರಮಾಣದಲ್ಲಿದೆ. ಇದಲ್ಲದೆ, ಈ ಸಿಪ್ಪೆಗಳಲ್ಲಿ ಕ್ವೆರ್ಸೆಟಿನ್ ಎಂದು ಕರೆಯಲ್ಪಡುವ ಫ್ಲೇವನಾಯ್ಡ್‌ಗಳ ಉತ್ತಮ ಮೂಲವನ್ನು ಹೊಂದಿದೆ. ಇದು ಮೂಲತಃ ಉತ್ಕರ್ಷಣ ನಿರೋಧಕವಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಈರುಳ್ಳಿ ಸಿಪ್ಪೆಯನ್ನು ಬೀಸಾಡಬೇಡಿ. ಇದರ ನಿಯಮಿತ ಬಳಕೆಯಿಂದ ಕೂದಲು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಉತ್ತಮ ಟೋನರನ್ನು ತಯಾರಿಸಲು ಈರುಳ್ಳಿ ಸಿಪ್ಪೆಯನ್ನು ಬಳಸಬಹುದು. ಅದಕ್ಕಾಗಿ ನೀವು ಏನು ಮಾಡಬೇಕೆಂದರೆ, ಈರುಳ್ಳಿ ಸಿಪ್ಪೆಯನ್ನು ಹತ್ತು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಬೇಕಾದರೆ, ರಾತ್ರಿಯಿಡೀ ನೀರಿನಲ್ಲಿ ನೆನೆಸಬಹುದು. ಬೆಳಿಗ್ಗೆ ಈರುಳ್ಳಿ ಸಿಪ್ಪೆಯ ನೀರನ್ನು ತೆಗೆದುಕೊಂಡು ನಿಮ್ಮ ತಲೆಗೆ ಸಿಂಪಡಿಸಿ. ನೀರು ನೆತ್ತಿಯನ್ನು ತಲುಪಬೇಕು. ಉಳಿದ ನೀರನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ಫ್ರಿಡ್ಜ್​ನಲ್ಲಿ ಕೆಲವು ದಿನ ಇಡಿ.

ಅಂದಹಾಗೆ ಈರುಳ್ಳಿ ಸಿಪ್ಪೆಯನ್ನು ತೆಗೆದು ಸ್ವಲ್ಪ ನೀರು ಹಾಕಿ ಹದಿನೈದು ನಿಮಿಷಗಳ ಕಾಲ ಕುದಿಸಬಹುದು. ನಂತರ ಒಲೆಯಿಂದ ತೆಗೆದು, ಬೆಚ್ಚಗಾದ ನಂತರ ಅದನ್ನು ತಲೆಯ ಮೇಲೆ ಸಿಂಪಡಿಸಬಹುದು. ನಿತ್ಯವು ಈ ರೀತಿ ಮಾಡಿದರೆ ಉತ್ತಮ ಕೂದಲನ್ನು ಪಡೆಯಬಹುದು ಎನ್ನುತ್ತಾರೆ ತಜ್ಞರು.

ಈರುಳ್ಳಿ ರಸ ಕೂಡ ಕೂದಲು ಉದುರುವುದನ್ನು ತಡೆಯುತ್ತದೆ. ಈರುಳ್ಳಿಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಂಡು, ಅದರ ರಸವನ್ನು ತೆಗೆದು ತಲೆಗೆ ಹಚ್ಚಿ ಮಸಾಜ್ ಮಾಡಿ. ಅರ್ಧ ಗಂಟೆಯ ನಂತರ ಸ್ನಾನ ಮಾಡಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಕೂದಲು ಉದುರುವುದನ್ನು ತಡೆಯಬಹುದು. ಇದಿಷ್ಟೇ ಅಲ್ಲದೆ, ಈರುಳ್ಳಿ ಅಕಾಲಿಕ ಬಿಳಿ ಕೂದಲನ್ನು ತಡೆಯಲು ಸಹಾಯ ಮಾಡುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net