

ಪಾರ್ಶ್ವವಾಯು ಒಂದು ಗಂಭೀರ ಸ್ವರೂಪದ ಮಿದುಳಿನ ಕಾಯಿಲೆ. ಇದು ನಮ್ಮ ದೇಶದಲ್ಲಿ ಹೊರಹೊಮ್ಮುತ್ತಿರುವ ನರವೈಜ್ಞಾನಿಕ ತುರ್ತು ಆರೋಗ್ಯ ಸ್ಥಿತಿಗಳಲ್ಲಿ ಒಂದು. ಅರಿವಿನ ಕೊರತೆಯಿಂದಾಗಿ ಜನ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸುವ ತುರ್ತು ಅಗತ್ಯವಿದೆ ಎಂದು ನರರೋಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ಪಾರ್ಶ್ವವಾಯು ತಡೆ ದಿನ ಸಂದರ್ಭದಲ್ಲಿ ನಂ.1 ಕನ್ನಡ ದಿನ ಪತ್ರಿಕೆ ವಿಜಯವಾಣಿ ಹಮ್ಮಿಕೊಂಡಿದ್ದ ‘ಫೋನ್ ಇನ್ ಕಾರ್ಯಕ್ರಮ’ದಲ್ಲಿ ಖ್ಯಾತ ನರರೋಗ ಹಾಗೂ ಪಾರ್ಶ್ವವಾಯು ತಜ್ಞ ಡಾ. ಸೂರ್ಯನಾರಾಯಣ ಶರ್ಮ ಓದುಗರ ಪ್ರಶ್ನೆಗೆ ಉತ್ತರ ನೀಡಿದರು.
ಮಿದುಳಿನ ರಕ್ತನಾಳಗಳಲ್ಲಿ ರಕ್ತ ಹೆಪು್ಪಗಟ್ಟಿ ರಕ್ತ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿದರೆ ಅಥವಾ ರಕ್ತಸ್ರಾವ ಸಂಭವಿಸಿದರೆ ಪಾರ್ಶ್ವವಾಯು ಉಂಟಾಗುತ್ತದೆ. ಜಾಗತಿಕವಾಗಿ ಪ್ರತಿ ವರ್ಷ 13.6 ದಶಲಕ್ಷ ರೋಗಿಗಳು ಪಾಶ್ವವಾಯುವಿಗೆ ತುತ್ತಾಗುತ್ತಿದ್ದು, ಈ ಪೈಕಿ 5.5 ದಶಲಕ್ಷ ರೋಗಿಗಳು ಸಾವನ್ನಪು್ಪತ್ತಿದ್ದಾರೆ. ಜಾಗತಿಕವಾಗಿ ಅತಿ ಹೆಚ್ಚು ಸಾವುಗಳು ಸಂಭವಿಸುವ ಕಾಯಿಲೆಗಳ ಪಟ್ಟಿಯಲ್ಲಿ ಹೃದಯಾಘಾತದ ನಂತರ ಪಾರ್ಶ್ವವಾಯು 2ನೇ ಸ್ಥಾನದಲ್ಲಿದೆ. ಕಳೆದ ಎರಡು ವರ್ಷದಿಂದೀಚಿಗೆ ಭಾರತದಲ್ಲಿ ಪಾರ್ಶ್ವವಾಯು ರೋಗಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಕರ್ನಾಟಕ ಕೂಡ 9ನೇ ಸ್ಥಾನದಲ್ಲಿರುವುದು ಕಳವಳಕಾರಿ ಸಂಗತಿಯಾಗಿದೆ.
ಪಾರ್ಶ್ವವಾಯುವಿನಿಂದ ಗುಣಮುಖರಾದ ನಂತರವೂ ಉತ್ತಮ ಆಹಾರ ಪದ್ಧತಿ ಮತ್ತು ಪಥ್ಯ ಪಾಲಿಸುವ ಮೂಲಕ ಗಂಭೀರ ಕಾಯಿಲೆಗಳನ್ನು ನಿಯಂತ್ರಿಸಬಹುದಾಗಿದೆ.
ಕೆಲ ತಿಂಗಳ ಹಿಂದೆ ಒಂದು ಕುಟುಂಬ ನನ್ನ ಬಳಿಗೆ ತಪಾಸಣೆಗೆ ಬಂದಿತ್ತು. ಕುಟುಂಬದ ಹಿರಿಯ ಸುಮಾರು 80 ವರ್ಷ ವಯಸ್ಸಿನವರು. ಹಿಂದಿನ ದಿನದಿಂದ ಅವರ ಎಡಗೈ ಅದುರುತ್ತಿತ್ತು. ಅವರ ಮಗಳು ನನ್ನನ್ನು ಉದ್ದೇಶಿಸಿ ಸಾರ್, ನಿನ್ನೆ ಸಂಜೆ ನಾವೆಲ್ಲ ಕಾಂತಾರ ಸಿನಿಮಾ ನೋಡಲು ಹೋಗಿದ್ವಿ. ಅಲ್ಲೇ ನಮ್ಮ ತಂದೆಗೆ ಎಡಗೈ ಅದುರಲು ಶುರುವಾಯಿತು. ನಾವು ಸಿನಿಮಾ ನೋಡಿ ಭಯ ಬಿದ್ದು ಅಥವಾ ದೈವ ಭಕ್ತಿಗೆ ಈ ರೀತಿ ಆಗಿದೆ ಎಂದುಕೊಂಡೆವು. ಬೆಳಗಾದರೂ ಅದುರುವಿಕೆ ಕಡಿಮೆಯಾಗಲೇ ಇಲ್ಲ. ಹಾಗಾಗಿ ನಿಮ್ಮ ಬಳಿ ತೋರಿಸಲು ಬಂದೆವು ಎಂದು ಹೇಳಿದರು. ನಾನು ರೋಗಿಯನ್ನು ತಪಾಸಣೆ ಮಾಡಿ, ಪಾರ್ಶ್ವವಾಯು ಇರುವ ಸಾಧ್ಯತೆಯನ್ನು ಮನಗಂಡು ಎಂಆರ್ಐ ಪರೀಕ್ಷೆ ಮಾಡಿಸಿದೆ. ನನ್ನ ಊಹೆಯಂತೆ ಅಧಿಕ ರಕ್ತದೊತ್ತಡದಿಂದ ಅವರ ಬಲ ಮೆದುಳಿನ ರಕ್ತನಾಳವೊಂದು ಕಟ್ಟಿಕೊಂಡು ಮಿದುಳಿನ ಬೇಸಲ್ ಗ್ಯಾಂಗ್ಲಿಯ ಪ್ರದೇಶದ ಒಂದು ಭಾಗ ಹಾನಿಗೀಡಾಗಿ ಕೈ ಅದುರುವಿಕೆ ಆಗುತ್ತಿತ್ತು. ಅದನ್ನು ವೈದ್ಯಕೀಯ ಭಾಷೆಯಲ್ಲಿ ಕೋರಿಫಾಮ್ರ್ ಮೂಮೆಂಟ್ಸ್ ಎಂದು ಕರೆಯುತ್ತಾರೆ. ಅದನ್ನು ರೋಗಿಗೆ ಮತ್ತು ಕುಟುಂಬಸ್ಥರಿಗೆ ತಿಳಿಸಿ ಚಿಕಿತ್ಸೆ ಪ್ರಾರಂಭಿಸಿದ ಮೇಲೆ 3 ದಿನಗಳಲ್ಲಿ ಮೊದಲಿನಂತಾದರು ಎಂದು ವೈದ್ಯರು ಘಟನೆಯೊಂದರ ಮಾಹಿತಿ ಹಂಚಿಕೊಂಡರು.
ಅನುವಂಶೀಯತೆ, ರಕ್ತನಾಳದ ಉರಿಯೂತ, ರಕ್ತನಾಳದಲ್ಲಿ ರಕ್ತ ಹೆಪು್ಪಗಟ್ಟುವಿಕೆ (ತ್ರಾಂಬೋಫೀಲಿಯ) ಸಮಸ್ಯೆ, ಸೋಂಕುಗಳು, ಮೈಗ್ರೇನ್, ಕ್ಯಾನ್ಸರ್, ವ್ಯಾಸ್ಕುಲೋಪತಿ ಸಮಸ್ಯೆ, ರಿವರ್ಸಿಬಲ್ ಸೆರೆಬ್ರಲ್ ವ್ಯಾಸೋ ಕನ್ಸಟ್ರಕ್ಷನ್ ನಂತರ ಅಪರೂಪದ ಕಾರಣಗಳಿಂದ ಪಾರ್ಶ್ವವಾಯು ಸಂಭವಿಸುತ್ತದೆ.
ಪಾರ್ಶ್ವವಾಯುವಿನ ರೋಗ ಲಕ್ಷಣಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ‘ಬಿ-ಫಾಸ್ಟ್’ ಎಂಬ ಸಂಕ್ಷಪ್ತ ರೂಪ ಬಳಸಲಾಗುತ್ತದೆ. ಅದೆಂದರೆ ಬಿ-ಬ್ಯಾಲೆನ್ಸ್ (ದೇಹದ ಸಮತೋಲನ), ಇ- ಐಸ್ (ಕಣ್ಣಿನ ಸಮಸ್ಯೆಯಿಂದ ಹಠಾತ್ ಕುರುಡುತನ), ಎಫ್- ಫೇಶಿಯಲ್ ಡ್ರೂಪಿಂಗ್ (ಮುಖ ವಕ್ರವಾಗುವುದು), ಎ- ಆಮ್ರ್ ಲಿಫ್ಟ್ (ಕೈಗಳ ಚಲನೆ ಶಕ್ತಿ ಸ್ವಾಧೀನ ಕಳೆದುಕೊಳ್ಳುವುದು), ಎಸ್- ಸ್ಪೀಚ್ (ಮಾತಿನಲ್ಲಿ ತೊದಲುವಿಕೆ), ಟಿ- ಟೈಮ್ ಆಫ್ ಆನ್ಸೆಟ್ (ಪಾರ್ಶ್ವವಾಯು ಸಂಭವಿಸಿದಾಗ ಸುವರ್ಣ ಸಮಯದಲ್ಲಿ ಆಸ್ಪತ್ರೆಗೆ ತಲುಪುವುದು) ಇವಲ್ಲದೆ ತಲೆಸುತ್ತು, ಮೂರ್ಛೆರೋಗ, ಪ್ರಜ್ಞಾಹೀತ ಸ್ಥಿತಿ, ಮರೆವು ವರ್ತನೆಯಲ್ಲಿ ಬದಲಾವಣೆ ಸಹ ರೋಗಲಕ್ಷಣಗಳಾಗಿವೆ.
ಪಾರ್ಶ್ವವಾಯು ಮಕ್ಕಳಿಂದ ವೃದ್ಧರವರೆಗೂ ಯಾರಿಗೆ ಬೇಕಾದರೂ ಕಾಣಿಸಿಕೊಳ್ಳಬಹುದು. ಇದಕ್ಕೆ ಕೆಲವು ಅಪಾಯಕಾರಿ ಅಂಶಗಳನ್ನು ಕಾರಣವೆಂದು ಗುರುತಿಸ ಲಾಗಿದೆ. ಸಾಮಾನ್ಯವಾಗಿ ವಯೋಸಹಜವಾಗಿ ರೋಗಿಯ ವಯಸ್ಸು 65 ಮೇಲ್ಪಟ್ಟವರಲ್ಲಿ ಪಾರ್ಶ್ವವಾಯು ಸಾಧ್ಯತೆ ಹೆಚ್ಚು. ಋತುಚಕ್ರ ನಿಂತ ಮೇಲೆ ಮಹಿಳೆಯರಿಗೆ ಹೆಚ್ಚಿದ್ದರೂ, ಪುರುಷರಿಗೆ ಹೋಲಿಸಿದರೆ ಅವರಲ್ಲಿ ಕಡಿಮೆ ಪ್ರಮಾಣದಲ್ಲಿದೆ. ಏಷ್ಯಾ ಮೂಲದ ವ್ಯಕ್ತಿಗಳಲ್ಲಿ ಈ ಪ್ರಮಾಣ ಹೆಚ್ಚು. ಅನುವಂಶೀಯತೆಯಿಂದಲೂ ಪಾರ್ಶ್ವವಾಯು ಬರುವುದುಂಟು. ಈ ಅಂಶಗಳಲ್ಲದೆ ಅಧಿಕ ರಕ್ತದೊತ್ತಡ, ಅನಿಯಂತ್ರಿತ ಮಧುಮೇಹ, ಏಟ್ರಿಯಲ್ ಫಿಬ್ರಿಲೇಶನ್ (ಹೃದಯ ಬಡಿತದ ಏರುಪೇರು), ಅಧಿಕ ಕೊಲೆಸ್ಟ್ರಾಲ್ ಪ್ರಮಾಣ, ಧೂಮಪಾನ, ಮದ್ಯಪಾನ, ಕೆರೋಟಿಡ್ ರಕ್ತನಾಳದ ಕಾಯಿಲೆ (ಕತ್ತಿನ ರಕ್ತನಾಳದಲ್ಲಿ ಕೊಬ್ಬು ಶೇಖರಣೆ) ಮತ್ತು ಬೊಜ್ಜು ಹಾಗೂ ವ್ಯಾಯಾಮರಹಿತ ಜೀವನಶೈಲಿ ಸ್ಟ್ರೋಕ್ಗೆ ಪ್ರಮುಖ ಕಾರಣಗಳಾಗಿವೆ.
ಪಾರ್ಶ್ವವಾಯುವಿನಲ್ಲಿ ಹಲವು ವಿಧಗಳಿವೆ. ಮಿದುಳಿನ ಯಾವುದೇ ಭಾಗಕ್ಕೆ ರಕ್ತ ಸಂಚಾರದಲ್ಲಿ ತಕ್ಷಣ ತಡೆಯುಂಟಾದಾಗ (ಇಶ್ಕಿಮಿಕ್ ಪಾರ್ಶ್ವವಾಯು) ಅಥವಾ ಮಿದುಳಿನ ರಕ್ತನಾಳವೊಂದು ಸ್ಪೋಟಗೊಂಡಾಗ (ಹೆಮೊರೇಜ್ ಪಾರ್ಶ್ವವಾಯು) ಮಿದುಳಿನಲ್ಲಿ ಆಘಾತ ಸಂಭವಿಸುತ್ತದೆ. ಒಟ್ಟಾರೆ ಪ್ರಕರಣಗಳಲ್ಲಿ ಶೇ.80 ರಕ್ತನಾಳದ ಹೆಪು್ಪಗಟ್ಟುವಿಕೆ ರಕ್ತ ಹೆಪು್ಪಗಟ್ಟುವಿಕೆಯಿಂದ ಸಂಭವಿಸುತ್ತವೆ. ಇನ್ನು ರೋಗದ ಲಕ್ಷಣಗಳು ಮಿದುಳಿನ ಯಾವ ಪ್ರದೇಶದ ರಕ್ತ ಸಂಚಾರಕ್ಕೆ ಅಡ್ಡಿಯಾಗಿದೆ ಎಂಬುದರ ಮೇಲೆ ಅವಲಂಭಿಸಿರುತ್ತದೆ. ಹಾಗಾಗಿ ರೋಗಿಯು ಮತ್ತು ಸಂಬಂಧಿಕರು ಹೆಚ್ಚು ತಡ ಮಾಡದೆ ಆಸ್ಪತ್ರೆಗೆ ತೆರಳಬೇಕು. ಅದೇ ರೀತಿ ವೈದ್ಯರೂ ಕೂಡ ಪಾರ್ಶ್ವವಾಯು ಪೀಡಿತ ರೋಗಿಗಳಿಗೆ ಪ್ರಾಥಮಿಕ ಹಂತದಲ್ಲಿ ತಪಾಸಣೆ ನಡೆಸಿ, ಪಾರ್ಶ್ವವಾಯು ದೃಢಪಟ್ಟಲ್ಲಿ, ಸಮಯ ವ್ಯರ್ಥ ಮಾಡದೆ ಸಿಟಿ ಸ್ಕಾ್ಯನ್ ಅಥವಾ ಎಂಆರ್ಐ ಸೌಲಭ್ಯ ದೊರೆಯುವ ಆಸ್ಪತ್ರೆಗೆ ದಾಖಲು ಮಾಡಬೇಕು ಎಂದು ಸಲಹೆ ನೀಡಿದರು.
ಗ್ರಹಿಕೆಯ ಸಾಮರ್ಥ್ಯ ಕಡಿಮೆಯಾಗುವುದು, ಓದುವುದು ಮತ್ತು ಬರೆಯುವುದರಲ್ಲಿ ಏರುಪೇರು ಆಗುವುದು, ಲೆಕ್ಕಾಚಾರ ತಪು್ಪವುದು, ಮಾಹಿತಿ ಸಂಸ್ಕರಿಸುವ ಸಾಮರ್ಥ್ಯ ಕಳೆದುಕೊಳ್ಳುವುದು, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದನ್ನು ನಿಲ್ಲಿಸುವುದು ಇತ್ಯಾದಿ ಪರಿಣಾಮಗಳು ಬೀರಲಿವೆ.
ಆರ್.ಕೆ. ಹೃದಯ ಮತ್ತು ನರರೋಗ ಚಿಕಿತ್ಸಾ ಕೇಂದ್ರ, ನಂ.61, ಎಸ್.ಎನ್.ಕಾಂಪ್ಲೆಕ್ಸ್, 50 ಅಡಿ ರಸ್ತೆ, ಹನುಮಂತನಗರ, ಬೆಂ-19. ಹಾಗೂ ಅಪೋಲೋ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು. ದೂ: 7760 291482