

ಪೂರ್ವ ನಿರ್ದೇಶಕರು,
ಎಸ್ಎಸ್ವೈದ್ಯಕೀಯ ಮಹಾವಿದ್ಯಾಲಯ, ದಾವಣಗೆರೆ
ಪ್ರಸ್ತುತ ಕಾಲಮಾನದಲ್ಲಿ ವೈದ್ಯ ವೃತ್ತಿಯ ವ್ಯಾಖ್ಯಾನ ಬದಲಾಗಿದೆ. ‘ವೈದ್ಯೋ ನಾರಾಯಣ ಹರಿ’ ಎಂಬ ನುಡಿಯಂತೆ ರೋಗಿಗೆ ಕೇವಲ ಚಿಕಿತ್ಸೆ ನೀಡುವ, ಸಕಾಲಕ್ಕೆ ವೈದ್ಯಕೀಯ ಉಪಚಾರ ಕೊಡಲಷ್ಟೇ ಅವರ ಸೇವೆ ಸೀಮಿತವಾಗಿಲ್ಲ. ಆತ ಬಹುಮುಖ ಪ್ರತಿಭೆಯ ಚಿಲುಮೆಯಾಗಿರಬೇಕು, ಬಹುಮುಖ ಪ್ರತಿಭೆಯ ವ್ಯಕ್ತಿತ್ವ ಹೊಂದಿರಬೇಕು. ಶಿಕ್ಷಕನಾಗಿ, ನಾಯಕನಾಗಿ, ಸ್ನೇಹಿತನಾಗಿ, ಮಾರ್ಗದರ್ಶಕನಾಗಿ, ಪಾಲಕನಾಗಿ ಸಾರ್ವಜನಿಕರ ಬದುಕಿನಲ್ಲಿ ಪಾತ್ರ ನಿರ್ವಹಿಸಬೇಕಿದೆ.
ಮನವರಿಕೆ ಮಾಡಿಕೊಡುವ ಶಿಕ್ಷಕ: ವೈದ್ಯನು ಸಾರ್ವಜನಿಕ ಬದುಕಿನಲ್ಲಿ ಶಿಕ್ಷಕನ ಪಾತ್ರ ವಹಿಸಬೇಕು. ಏಕೆಂದರೆ ಸಮಾಜದಲ್ಲಿ ಶಿಕ್ಷಕನ ಪಾತ್ರ ಅಪ್ರತಿಮವಾದದ್ದು. ಅದಕ್ಕಿರುವ ಸಮಾಜ ಪರಿವರ್ತನೆ ಶಕ್ತಿ ಬೇರೊಬ್ಬರಿಗಿಲ್ಲ ಎಂದರೆ ತಪ್ಪಾಗಲಾರದು. ಒಬ್ಬ ಜವಾಬ್ದಾರಿಯುತ ವೈದ್ಯ ತನ್ನ ಬಳಿ ಬರುವ ರೋಗಿಗಳು ಹಾಗೂ ಸಂಬಂಧಿಕರಿಗೆ Teach more than treat ಎಂಬಂತೆ ಅವರ ಕಾಯಿಲೆ ಬಗ್ಗೆ ಅತ್ಯಂತ ಸರಳವಾಗಿ ಮನವರಿಕೆ ಮಾಡಲು ಶಕ್ತನಾಗಿರಬೇಕು.
ಇದಕ್ಕೆ ಅಸ್ತಮಾ ರೋಗಿ ಉತ್ತಮ ಉದಾಹರಣೆಯಾಗಬಲ್ಲ. ಏಕೆಂದರೆ ರೋಗಿಯು ಔಷಧ ಸೇವಿಸಿ ಗುಣಮುಖವಾಗಬಹುದು. ಆದರೆ, ತನ್ನ ಜೀವನಶೈಲಿಯಿಂದ ಮತ್ತೆ ಆ ಕಾಯಿಲೆಗೆ ತುತ್ತಾಗಬಹುದು ಅಥವಾ ಅದರ ತೀವ್ರತೆಯ ಗುಣಗಳಿಂದ ಆರೋಗ್ಯ ಕ್ಷೀಣಿಸಬಹುದು. ಅಲ್ಲದೆ ಆ ಕಾಯಿಲೆ ಹರಡುವಿಕೆಯಲ್ಲಿ ಮುಖ್ಯ ಪಾತ್ರಧಾರಿಯಾಗಬಹುದು. ಮನೆಯಲ್ಲಿ ಮಾಡಬೇಕಾದ ಔಷಧೋಪಚಾರದ ಅರಿವಿಲ್ಲದಿದ್ದರೆ ಆಸ್ಪತ್ರೆಗೆ ಬರುವಾಗ ರೋಗಿ ಪ್ರಜ್ಞಾಹೀನನಾಗಿ ತೊಂದರೆಗೆ ಒಳಗಾಗಬಹುದು. ಆದರೆ, ಒಬ್ಬ ವೈದ್ಯನಿಗೆ ಶಿಕ್ಷಕನಂತೆ ಕಲಿಸುವ ಕಲೆ ಇದ್ದರೆ ಕಾಯಿಲೆಯ ಸಂಪೂರ್ಣ ರೋಗ ಲಕ್ಷಣ, ತೀವ್ರತೆಯಿಂದಾಗುವ ಪರಿಣಾಮ ಮತ್ತು ಅದನ್ನು ತಡೆಗಟ್ಟುವಿಕೆ ವಿಧಾನಗಳನ್ನು ತಿಳಿಹೇಳಬಲ್ಲರು.
Education's responsibility is to replace an empty mind with an open one. | Malcolm Forbes
ಬೇಕು ನಾಯಕನ ಗುಣ: ಕಾಯಿಲೆ ಯಾವುದೇ ವ್ಯಕ್ತಿ ಅಥವಾ ಜಾತಿಯವನಿಗೆ ಸೀಮಿತವಾಗಿರದೆ ಎಲ್ಲರೂ ಒಂದೇ ರೀತಿ ಬಳಲುವಂತೆ ಮಾಡುತ್ತದೆ. ವೈದ್ಯ ಸಮಾಜ ಎಲ್ಲ ವರ್ಗ, ಎಲ್ಲ ಜಾತಿ-ಮತಗಳೂ ಹಾಗೂ ವಯಸ್ಸಿನವರನ್ನು ಒಂದೇ ಮಾರ್ಗದಲ್ಲಿ, ಒಂದೇ ಭಾವನೆಯಿಂದ ಮತ್ತು ಮಮತೆಯಿಂದ ನೋಡಬೇಕು. ಸರ್ವರನ್ನು ಒಂದೇ ಮನಸ್ಸಿನಿಂದ ಉಪಚರಿಸುವ ನಾಯಕನ ಗುಣ ಬೇಕು. ಇಂಥ ಸಂದರ್ಭದಲ್ಲಿ ಸಾಕಷ್ಟು ತ್ಯಾಗ ಮನೋಭಾವ ತೋರ್ಪಡಿಸಬೇಕಾಗುತ್ತದೆ. ದಿನಂಪ್ರತಿ ಸಾವಿರಾರು ಜನರು ಸಂಪರ್ಕಕ್ಕೆ ಬರುವುದರಿಂದ ನಿತ್ಯ ಜೀವನದಲ್ಲಿ ಇಡುವ ಪ್ರತಿ ಹೆಜ್ಜೆಯೂ ಇತರರಿಗೆ ಮಾದರಿಯಾಗಿರಬೇಕು.
The language of friendship is not words but meaning. | Henry David Thomas
ವೈದ್ಯ ತನ್ನ ಬದುಕು, ವೃತ್ತಿ ಜೀವನ ಹಾಗೂ ಸಮಾಜದಲ್ಲಿ ಎಲ್ಲರೊಂದಿಗೆ ಶ್ರೇಷ್ಠ ಸ್ನೇಹಿತನಂತಿರಬೇಕು. ಏಕೆಂದರೆ ವೈದ್ಯರು ತನ್ನ ಸ್ನೇಹಿತನಂತೆ ವರ್ತಿಸಲಿ ಎಂದು ರೋಗಿಗಳು ಬಯಸುತ್ತಾರೆ. ಎಲ್ಲರಿಗೂ ಸ್ನೇಹಿತನ ಭರವಸೆ, ಅವರಲ್ಲಿ ಕಾಣುವ ವಿಶ್ವಾಸ ಮತ್ತು ಬಾಂಧವ್ಯ ಬೇರೆ ಇನ್ನೆಲ್ಲೂ ಸಿಗದು. ವೈದ್ಯನಾದವನು ರೋಗಿಗಳು, ಅವರ ಸಂಬಂಧಿಕರು ಹಾಗೂ ವೈದ್ಯ ವಿದ್ಯಾರ್ಥಿಗಳೊಂದಿಗೆ ಸ್ನೇಹಿತನಂತೆ ನಡೆದುಕೊಂಡರೆ ಉತ್ತಮ ಫಲ ಸಿಗುವುದು ಖಚಿತ. ಈ ಗುಣ ಅಳವಡಿಸಿಕೊಂಡಿದ್ದೇ ಆದಲ್ಲಿ ಆತನ ವೃತ್ತಿ ಜೀವನದ ಬದುಕು ಬಹಳ ಸುಂದರಮಯ ಮತ್ತು ಅರ್ಥಪೂರ್ಣವಾಗಿರುತ್ತದೆ.
ಮಾರ್ಗದರ್ಶನದ ಬಯಕೆ: ಎಲ್ಲ ರೋಗಿಗಳ ವಿಚಾರ ಆಲಿಸುವ ಮತ್ತು ಸಮಯೋಚಿತವಾಗಿ ಪರೀಕ್ಷಿಸುವ ಸಂವೇದನಾಶೀಲ ಗುಣ ವೈದ್ಯನ ಮತ್ತೊಂದು ಅರ್ಹತೆ. ರೋಗಿಯ ಎಲ್ಲ ರೀತಿಯ ತೊಂದರೆಗೆ ಸೂಕ್ತ ಪರಿಹಾರ ನೀಡುವ ಮನಸ್ಥಿತಿ ಇರಬೇಕು. ತಮ್ಮ ಮಾರ್ಗದರ್ಶಕರೆಂದು ಒಪ್ಪಿಕೊಳ್ಳುವ ವೈದ್ಯನಲ್ಲಿ ತಾಳ್ಮೆ, ತ್ಯಾಗ ಮನೋಭಾವ ಮತ್ತು ಜವಾಬ್ದಾರಿ ತೆಗೆದುಕೊಳ್ಳುವ ಗುಣಗಳನ್ನು ರೋಗಿಗಳು ನಿರೀಕ್ಷಿಸುತ್ತಾರೆ. ಹಾಗಿದ್ದಲ್ಲಿ ಮಾತ್ರ ಎಲ್ಲರೂ ಆತನ ಮಾರ್ಗದಲ್ಲಿ ನಡೆಯಲು, ಆತನ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನ ಪಡುತ್ತಾರೆ.
ಪಾಲಕನ ಪಾತ್ರ ನಿಭಾವಣೆಯಲ್ಲಿ ಜವಾಬ್ದಾರಿ: ಸುಖಸಂಸಾರದಲ್ಲಿ ವೈದ್ಯನು ಪಾಲಕನ ಪಾತ್ರ ವಹಿಸುವುದು ಮುಖ್ಯ. ಮನೆಯಲ್ಲಿ ನೆಮ್ಮದಿಯ ಬದುಕು, ವೃತ್ತಿಯಲ್ಲಿ ಮಹತ್ತರವಾದ ಪರಿಣಾಮ ಬೀರುತ್ತದೆ. ಆದ್ದರಿಂದ ವೈದ್ಯ ತನ್ನ ಬದುಕಿನಲ್ಲಿ ಪಾಲಕನ ಪಾತ್ರವನ್ನು ಅತ್ಯಂತ ಕಾಳಜಿ, ಜವಾಬ್ದಾರಿ ಮತ್ತು ಚಾಣಾಕ್ಷತನದಿಂದ ನಿಭಾಯಿಸಬೇಕಾಗುತ್ತದೆ. ಇಲ್ಲದೆ ಹೋದರೆ ಬದುಕು ಗಾಲಿ ಮುರಿದ ಬಂಡಿಯಂತಾಗುತ್ತದೆ. ಮಕ್ಕಳಿಗೆ ಅರ್ಥಪೂರ್ಣ ತಂದೆಯಾಗಿ, ಹೆಂಡತಿಗೆ ಜವಾಬ್ದಾರಿಯುತ ಗಂಡನಾಗಿ, ವೃದ್ಧರಿಗೆ ಪ್ರೀತಿಯ ಮಗನಾಗಿ ಕಾಲ ಕಳೆಯುವಂತಾದರೆ ಸಾರ್ಥಕವಾದ ವೃತ್ತಿಪರತೆ ಹೊಂದಲು ಸಾಧ್ಯವಾಗುತ್ತದೆ.
ವೈದ್ಯನ ಬದುಕು ಒಂದು ಸಂಸ್ಥೆಯಾದಾಗ..: ವೈದ್ಯ ತನ್ನ ಜೀವನದ ಪ್ರತಿ ಹೆಜ್ಜೆಯಲ್ಲೂ ಉತ್ತಮ ನಡತೆ ಹೊಂದಿರಬೇಕು, ಆಗ ಆತನನ್ನು ಎಲ್ಲರೂ ಹಿಂಬಾಲಿಸುತ್ತಾರೆ. ಆತನಂತೆ ಬದುಕಲು, ವರ್ತಿಸಲು ಮತ್ತು ಜೀವನ ಕಟ್ಟಿಕೊಳ್ಳಲು ಮುಂದಾಗುತ್ತಾರೆ. ತ್ಯಾಗ, ಜವಾಬ್ದಾರಿ, ಸ್ವಾಭಿಮಾನ ಮತ್ತು ಸತ್ಯಮಾರ್ಗ ಅಳವಡಿಸಿಕೊಂಡ ವೈದ್ಯನ ಬದುಕು ಒಂದು ಸಂಸ್ಥೆಯಂತಾಗಿ ಬೆಳೆಯುತ್ತದೆ. ಇವರ ಸಂಪರ್ಕಕ್ಕೆ ಬಂದವರೆಲ್ಲ ಹೆಜ್ಜೆಹೆಜ್ಜೆಗೂ ಅವರನ್ನು ಅನುಕರಿಸುತ್ತಾರೆ.
ವೈದ್ಯನ ತ್ಯಾಗ ಮನೋಭಾವದಿಂದ ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ, ಸಾಮಾಜಿಕ ಜವಾಬ್ದಾರಿಯಿಂದ ಎಷ್ಟೋ ನಿರ್ಗತಿಕರಿಗೆ ಬದುಕುವ ಅವಕಾಶ ದೊರೆಯುತ್ತದೆ. ಸ್ವಾಭಿಮಾನ ಹಾಗೂ ಸತ್ಯಮಾರ್ಗದ ಜೀವನ ನವ ಪೀಳಿಗೆಗೆ ಹಾಗೂ ವೈದ್ಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗುತ್ತದೆ. ಎಲ್ಲ ಘಟ್ಟಗಳಲ್ಲಿ ಜವಾಬ್ದಾರಿಯಿಂದ ತೊಡಗಿಸಿಕೊಂಡರೆ ವೃತ್ತಿ ಜೀವನದಲ್ಲಿ ಅತ್ಯಂತ ಶ್ರೇಷ್ಠತೆಯನ್ನು ಕಾಣುವುದರಲ್ಲಿ ಸಂದೇಹವಿಲ್ಲ.
Some succeed because they are destined to, but most succeed because they are determined to, success is a journey not a destination. | Ben Sweetland