ಕಾಫಿ-ಟೀ ಕುಡಿಯುವ ಮುನ್ನ ನೀರು ಕುಡಿಯುತ್ತೀರಾ? ಈ ಬಗ್ಗೆ ವೈದ್ಯರು ಹೇಳೋದೇನು? ಇಲ್ಲಿದೆ ಹೆಲ್ದಿ ಮಾಹಿತಿ... Tea or Coffee

Tea or Coffee
Published on

Tea or Coffee : ಜಗತ್ತಿನ ಬಹುತೇಕ ಜನರ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ. ದಿನಕ್ಕೆ ಒಂದು ಕಪ್ ಕಾಫಿ-ಟೀ ಕುಡಿಯಲಿಲ್ಲ ಅಂದ್ರೆ ಆ ದಿನ ಏನೋ ಮಿಸ್​ ಮಾಡಿಕೊಂಡಂತೆ ಜನರು ಚಡಪಡಿಸುತ್ತಾರೆ. ಒಂದು ಹೊತ್ತು ಊಟ ಬೇಕಾದರೂ ಬಿಡುತ್ತೇನೆ ಆದರೆ, ಟೀ-ಕಾಫಿ ಬಿಡುವುದಿಲ್ಲ ಎಂದು ಹೇಳುವ ಜನರು ಕೂಡ ನಮ್ಮ ನಡುವೆ ಇದ್ದಾರೆ. ದಿನಕ್ಕೊಂದು ಲೋಟ ಕಾಫಿ-ಟೀ ಕುಡಿಯದಿದ್ದರೂ ಸುಸ್ತು, ಚಡಪಡಿಕೆ ಹಾಗೂ ತಲೆ ನೋವು ಅನುಭವಿಸುವವರೂ ಇದ್ದಾರೆ. ಬೆಳಗ್ಗೆ ಎದ್ದ ತಕ್ಷಣ ಸ್ವಲ್ಪ ಕಾಫಿ ಅಥವಾ ಟೀ ಅನ್ನು ಗಂಟಲಿಗೆ ಸುರಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಅಂತಾನು ಅಂತಾರೆ. ಅಷ್ಟೊಂದು ಜನಪ್ರಿಯವಾಗಿದೆ ಈ ಪಾನೀಯ.

ಅಂದಹಾಗೆ, ನೀವು ಗಮನಿಸಿರಬಹುದು ಕೆಲ ಮಂದಿ ಟೀ ಅಥವಾ ಕಾಫಿ ಕುಡಿಯುವ ಮೊದಲು ಸ್ವಲ್ಪ ನೀರು ಕುಡಿಯುತ್ತಾರೆ. ಇದು ಕೆಲವರಿಗೆ ಅಭ್ಯಾಸವಾಗಿಬಿಟ್ಟಿದೆ. ಈ ರೀತಿ ಏಕೆ ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದರೆ ಬಹುಶಃ ಅವರಿಗೇನೆ ಉತ್ತರ ಗೊತ್ತಿರುವುದಿಲ್ಲ. ಹಾಗಾದರೆ. ಟೀ/ಕಾಫಿ ಕುಡಿಯುವ ಮೊದಲು ನೀರು ಕುಡಿಯುವುದು ಒಳ್ಳೆಯದೇ? ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.

ಚಹಾ ಮತ್ತು ಕಾಫಿಯು ಆಮ್ಲೀಯ ಗುಣವನ್ನು ಹೊಂದಿವೆ. ಆದ್ದರಿಂದ, ಅವುಗಳನ್ನು ಕುಡಿಯುವ ಮೊದಲು ನೀರು ಕುಡಿಯುವುದರಿಂದ ಆಮ್ಲವು ಬಾಯಿಯ ಮೇಲೆ ಪರಿಣಾಮ ಬೀರುವುದನ್ನು ತಡೆಯುತ್ತದೆ. ಆದ್ದರಿಂದ, ಚಹಾ ಮತ್ತು ಕಾಫಿ ಕುಡಿಯುವ ಮೊದಲು ನೀವು ಖಂಡಿತವಾಗಿಯೂ ನೀರು ಕುಡಿಯಬೇಕು ಎಂದು ವೈದ್ಯರು ಹೇಳುತ್ತಾರೆ.

ಚಹಾ ಮತ್ತು ಕಾಫಿಯಲ್ಲಿ ಟ್ಯಾನಿನ್ ಎಂಬ ಸಂಯುಕ್ತವಿದೆ. ಇದು ಹಲ್ಲುಗಳ ಬಣ್ಣವನ್ನು ಬದಲಾಯಿಸುತ್ತದೆ. ಆ ರೀತಿ ಸಂಭವಿಸದಂತೆ ತಡೆಯಲು ನೀವು ಚಹಾ ಮತ್ತು ಕಾಫಿ ಕುಡಿಯುವ ಮೊದಲು ನೀರು ಕುಡಿಯಬೇಕು. ಚಹಾ ಮತ್ತು ಕಾಫಿ ಆಮ್ಲೀಯ ಸ್ವಭಾವ ಹೊಂದಿರುವುದರಿಂದ, ಹೊಟ್ಟೆಯಲ್ಲಿ ಹುಣ್ಣುಗಳನ್ನು ಉಂಟುಮಾಡಬಹುದು. ಆ ರೀತಿ ಆಗಬಾರದೆಂದರೆ, ಮೊದಲು ನೀರು ಕುಡಿಯಬೇಕು. ಈ ರೀತಿ ಮಾಡಿದಾಗ ಚಹಾ ಅಥವಾ ಕಾಫಿ ನೀರಿನೊಂದಿಗೆ ಬೆರೆಯುತ್ತವೆ. ಆದ್ದರಿಂದ ಅವು ಹೆಚ್ಚಿನ ಪರಿಣಾಮ ಬೀರುವುದಿಲ್ಲ.

ಚಹಾ ಮತ್ತು ಕಾಫಿ ಕುಡಿಯುವುದರಿಂದ ನಮ್ಮ ದೇಹವು ನೈಸರ್ಗಿಕವಾಗಿ ನಿರ್ಜಲೀಕರಣಗೊಳ್ಳುತ್ತದೆ. ಆದ್ದರಿಂದ ಇದನ್ನು ತಪ್ಪಿಸಲು, ಚಹಾ ಮತ್ತು ಕಾಫಿ ಕುಡಿಯುವ ಮೊದಲು ನೀರು ಕುಡಿಯುವುದು ಉತ್ತಮ. ನೀರು ಕುಡಿಯದೆ ನೇರವಾಗಿ ಚಹಾ ಮತ್ತು ಕಾಫಿ ಕುಡಿದರೆ, ದೀರ್ಘಾವಧಿಯಲ್ಲಿ ಜೀರ್ಣಕಾರಿ ಸಮಸ್ಯೆಗಳ ಅಪಾಯವಿದೆ ಎನ್ನುತ್ತಾರೆ ವೈದ್ಯರು.

ಇನ್ನು ಚಹಾ ಮತ್ತು ಕಾಫಿ ಕುಡಿಯುವುದು ವಾಸ್ತವವಾಗಿ ಕೆಟ್ಟ ಅಭ್ಯಾಸ. ನೀರು ಕುಡಿಯದೇ ಅವುಗಳನ್ನು ಕುಡಿದರೆ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಹೀಗಾಗಿ ಅವುಗಳನ್ನು ಕುಡಿಯುವ ಮೊದಲು ನಿಮ್ಮ ಗಂಟಲಿಗೆ ಸ್ವಲ್ಪ ನೀರು ಸುರಿದರೆ, ಹಾನಿ ಸ್ವಲ್ಪ ಕಡಿಮೆಯಾಗುತ್ತದೆ. ಅನೇಕ ಜನರು ತಿಳಿಯದೆ ಚಹಾ ಮತ್ತು ಕಾಫಿ ಕುಡಿಯುವ ಮೊದಲು ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ನಿಮಗೆ ಈ ಅಭ್ಯಾಸವಿಲ್ಲದಿದ್ದರೆ, ನೀವು ಸಹ ಚಹಾ ಮತ್ತು ಕಾಫಿ ಕುಡಿಯುವ ಮೊದಲು ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಗಮನಿಸಿ: ಈ ಮಾಹಿತಿಯು ಜಾಗೃತಿ ಉದ್ದೇಶಕ್ಕಾಗಿ ಮಾತ್ರ. ನೀವು ಯಾವುದೇ ಮಾನಸಿಕ ಅಥವಾ ದೈಹಿಕ ಸಮಸ್ಯೆಗಳನ್ನು ಅನುಭವಿಸಿದರೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net