ಮಾನವ ಕಲ್ಯಾಣಕ್ಕೆ ಧರ್ಮರಥ

LordRam
Published on
Vinay
ವಿನಯ್ ಎಂ.ಎನ್

ಶ್ರೀರಾಮ-ರಾವಣರ ಯುದ್ಧ ಶುರುವಾಗುವುದರಲ್ಲಿತ್ತು. ವಿಭೀಷಣನು ರಣಭೂಮಿಯಲ್ಲಿ ಇವರಿಬ್ಬರ ಯುದ್ಧ ಸಿದ್ಧತೆಗಳನ್ನು ಗಮನಿಸಿದನು. ಒಂದು ಕಡೆ ಮೂರುಲೋಕಗಳನ್ನೂ ಗೆದ್ದು, ನವಗ್ರಹಗಳನ್ನೇ ಬಂಧಿಸಿ ತನ್ನ ಸಿಂಹಾಸನದ ಮೆಟ್ಟಿಲುಗಳನ್ನಾಗಿಸಿ, ಭೂತಗಳ ಬಲಿ ನೀಡಿ ತನ್ನ ಶಕ್ತಿಯನ್ನು ಮತ್ತಷ್ಟು ವೃದ್ಧಿಸಿಕೊಂಡು, ಭುವನ ಭಯಂಕರನಾದ ದಶಕಂಠ ರಾವಣ. ಆತ ಅಭೇದ್ಯವಾದ ಕವಚವನ್ನು ತೊಟ್ಟು ದಿವ್ಯವಾದ ರಥವನ್ನೇರಿ ಅನೇಕ ವಿಧವಾದ ಶಸ್ತ್ರಾಸ್ತ್ರಗಳಿಂದ ಸುಸಜ್ಜಿತನಾಗಿ ಪರ್ವತಗಳನ್ನೇ ಸೀಳಿಹಾಕುವಂಥ ರಣಕೇಕೆಯನ್ನು ಹಾಕುತ್ತ ನುಗ್ಗಿ ಬರುತ್ತಿದ್ದಾನೆ. ಮತ್ತೊಂದು ಕಡೆ ಶಾಂತಮೂರ್ತಿಯಾದ ಶ್ರೀರಾಮನು ಕವಚ-ಕಿರೀಟಗಳಿಲ್ಲದೆ, ರಥವೂ ಇಲ್ಲದೆ ಅಷ್ಟೇ ಏಕೆ ಕಾಲುಗಳಿಗೆ ಪಾದರಕ್ಷೆಯೂ ಇಲ್ಲದೆ ನೆಲದ ಮೇಲೆ ನಿಂತು ಯುದ್ಧ ಮಾಡಲು ಸಿದ್ಧನಾಗುತ್ತಿದ್ದಾನೆ. ಈ ಅಸಮಾನತೆಯನ್ನು ಕಂಡು ದುಃಖಿತನಾದ ವಿಭೀಷಣನು ಆತಂಕದಿಂದ ಶ್ರೀೕರಾಮನನ್ನು ಪ್ರಶ್ನಿಸಿದನು.

‘ಪ್ರಭು, ರಥ, ಕವಚಗಳಿಲ್ಲದೆ ಮಹಾಬಲಶಾಲಿಯಾದ ರಾವಣನೊಂದಿಗೆ ಹೇಗೆ ಯುದ್ಧ ಮಾಡುತ್ತೀರಿ?’

ಆಗ ಶ್ರೀರಾಮನು ಮುಗುಳ್ನಕ್ಕು- ‘ವಿಭೀಷಣ, ರಾವಣನು ಬಹಳ ಪ್ರಬಲನಂತೆ ಕಂಡರೂ ಅವನು ಅಧರ್ಮದ ರಥದಲ್ಲಿ ಕುಳಿತಿದ್ದಾನೆ. ಅದೇ ಅವನ ಅವನತಿಗೆ ಕಾರಣವಾಗುತ್ತದೆ. ವಾಸ್ತವವಾಗಿ, ಮನುಷ್ಯನು ಚಲಿಸುವ ರಥವು ಮರದ ತುಂಡು ಮತ್ತು ಲೋಹಗಳಿಂದ ಮಾಡಿರುವಂಥದಲ್ಲ, ಬದಲಾಗಿ ಅದು ಧರ್ಮದ ರಥವಾಗಿರಬೇಕು. ಅದು ಹೇಗಿರಬೇಕೆಂದರೆ- ಶೌರ್ಯ ಮತ್ತು ಧೈರ್ಯಗಳೇ ಆ ರಥದ ಎರಡು ಚಕ್ರಗಳು. ಸತ್ಯ, ಸಹನಶೀಲತೆ ಆ ರಥದ ವಿಜಯಪತಾಕೆಯಾಗಿರಬೇಕು. ಬಲ, ವಿವೇಕ, ಆತ್ಮವಿಶ್ವಾಸ ಮತ್ತು ಪರೋಪಕಾರಗಳೇ ಆ ರಥದ ನಾಲ್ಕು ಕುದುರೆಗಳು. ಅವು ಕ್ಷಮೆ, ದಯೆ, ಸಮಾನತೆಯ ಆಧಾರದ ಮೇಲೆ ರಥಕ್ಕೆ ಜೋಡಿಸಲ್ಪಟ್ಟಿರಬೇಕು. ಈಶ್ವರನ ಮೇಲೆ ನಂಬಿಕೆಯೇ ಆ ರಥದ ಸಾರಥಿ. ಶಮ, ದಮ, ಯಮ, ನಿಯಮಗಳು ಆ ಕುದುರೆಗಳ ಲಗಾಮುಗಳು. ತಾಯಿ-ತಂದೆಯರು, ಗುರು-ಹಿರಿಯರ ಪೂಜೆ-ಸೇವೆಯೇ ಅಭೇದ್ಯ ಕವಚ.

ಇಂತಹ ಧರ್ಮಮಯವಾದ, ದೃಢಸಂಕಲ್ಪದಿಂದ ಕೂಡಿರುವ ರಥವು ಯಾರ ಬಳಿ ಇರುತ್ತದೆಯೋ ಅಂಥವರು ರಾವಣನೇ ಏನು, ಸಂಸಾರ ಸಾಗರವೆಂಬ ಭವ ಸಾಗರವನ್ನೇ ಗೆಲ್ಲುತ್ತಾರೆ. ಆದ್ದರಿಂದ ನೀನು ಚಿಂತೆಯನ್ನು ಬಿಟ್ಟು ಧರ್ಮದ ಗೆಲುವಿಗೆ ಪ್ರಾರ್ಥಿಸು’ ಎಂದು ಹೇಳುತ್ತಾನೆ.

ನಿಜ, ಧರ್ಮದ ಹಾದಿಯಲ್ಲಿ ಸಾಗಿದರೆ ಜಯ ನಿಶ್ಚಿತ. ಆದರೂ, ಕೆಲವೊಮ್ಮೆ ಅಧರ್ಮದ ಹಾದಿ ಆಕರ್ಷಕ ಎನಿಸಿ ಮನುಷ್ಯನನ್ನು ಪಥಭ್ರಷ್ಟ ಮಾಡುತ್ತದೆ. ಆರಂಭದಲ್ಲಿ ಅಧರ್ಮ ವಿಜೃಂಭಿಸುವಂತೆ ಕಂಡರೂ, ಅದು ಸತ್ಯವಲ್ಲ. ಏಕೆಂದರೆ ಅಂತಿಮ ಗೆಲುವು ಧರ್ಮಕ್ಕೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಹಾಗಾಗಿ, ನ್ಯಾಯ, ಪ್ರಾಮಾಣಿಕತೆ, ಸಹನೆ, ತಾಳ್ಮೆ, ಪರೋಪಕಾರದ ಮೌಲ್ಯಗಳನ್ನು ಅಳವಡಿಸಿಕೊಂಡು ಧರ್ಮರಥದಲ್ಲಿ ಸಾಗುತ್ತ ಜೀವನವನ್ನು ಸಾರ್ಥಕವಾಗಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸೋಣ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net