ಧನ್ವಂತರಿ; ಪಂಚವಿಧ ಕಷಾಯಗಳ ಬಗ್ಗೆ ಕೇಳಿದ್ದೀರಾ?

ಕಷಾಯ
Published on
ಪ್ರತಿಯೊಬ್ಬರ ಬದುಕಿನಲ್ಲೂ ನೋವು-ನಲಿವು, ರೋಗ- ಆರೋಗ್ಯ ಎಲ್ಲವೂ ಅಲ್ಲಿ ಇಲ್ಲಿ ಬಂದು ಹೋಗಿರುತ್ತವೆ. ಆರೋಗ್ಯದ ಸಮಸ್ಯೆಗಳು ಕಾಡಿದಾಗ ತಕ್ಷಣವೇ ಚಿಕಿತ್ಸಾಲಯಗಳ ಹಾದಿಯನ್ನು ಯಾರೂ ತುಳಿಯುವುದಿಲ್ಲ. ತಮಗಿರುವ ಆರೋಗ್ಯದ ಕುರಿತಾದ ಅಲ್ಪಸ್ವಲ್ಪ ಜ್ಞಾನದ ಅನುಷ್ಠಾನಕ್ಕೆ ಮುಂದಾಗುತ್ತಾರೆ. ಅದುವೇ ಪ್ರಥಮ ಚಿಕಿತ್ಸೆ. ತಾಯಿ ಹೇಗೆ ಮೊದಲ ಗುರುವೋ ಮನೆಮದ್ದು ಹಾಗೆಯೇ ಮೊದಲ ಚಿಕಿತ್ಸೆ. ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ಸಿಗುವುದೇ ಆರಂಭಿಕ ಶುಶ್ರೂಷೆ ಎನ್ನುವುದು ತಪ್ಪು ಕಲ್ಪನೆ. ಭಾರತದ ಮಟ್ಟಿಗಂತೂ ಅಡುಗೆ ಕೋಣೆಯ ಸಾಂಬಾರ ಪದಾರ್ಥಗಳ ತಿಳಿವಳಿಕೆ, ಹಿತ್ತಲ ಗಿಡಗಳ ಮಾಹಿತಿ, ಮನೆಮದ್ದುಗಳ ಅರಿವು, ಮನೆ ಹಿರಿಯರ ವೈದ್ಯ ಪಾಂಡಿತ್ಯ ಎಲ್ಲವೂ ಸೇರಿ ಆಯುರ್ವೆದೀಯ ಪ್ರಥಮ ಚಿಕಿತ್ಸೆ ರೂಪುಗೊಳ್ಳುತ್ತದೆ. ಇವೆಲ್ಲವೂ ಪ್ರತಿಯೊಬ್ಬರ ಕೈಗೆಟಕುವ ಸುರಕ್ಷಿತ ಚಿಕಿತ್ಸಾ ವಿಧಾನಗಳು. ಒಂದು ವೇಳೆ ಇವಿಲ್ಲದೆ ಹೋಗಿದ್ದಲ್ಲಿ ದೇಶದಲ್ಲಿರುವ ವೈದ್ಯರು, ಚಿಕಿತ್ಸಾಲಯಗಳು, ಆಸ್ಪತ್ರೆಗಳು ಎಷ್ಟು ಮಾತ್ರಕ್ಕೂ ಸಾಕಾಗುತ್ತಿರಲಿಲ್ಲ.

ಈ ಮನೆಮದ್ದುಗಳ ಬಳಕೆ ಕಾಲಕಳೆದಂತೆ ಮೂಲಸ್ವರೂಪ ಕಳೆದುಕೊಳ್ಳುತ್ತಿದೆ. ಆದರೂ ಕಾರ್ಯಕ್ಷಮತೆ, ಪರಿಣಾಮ ಮತ್ತು ಫಲಿತಾಂಶ ಗಟ್ಟಿಯಾಗಿ ಉಳಿದುಕೊಂಡು ಅವುಗಳು ಜನರಿಗೇ ಸ್ವಯಂವೇದ್ಯ ಆಗಿರುವುದರಿಂದ ಜನಮಾನಸದಲ್ಲಿ ಹಾಸು ಹೊಕ್ಕಾಗಿದೆ. ಮನೆಮದ್ದುಗಳಲ್ಲಿ ಅತಿಹೆಚ್ಚು ಜನರು ಬಳಸುವುದು ಸಸ್ಯಗಳ ರಸವನ್ನು ಅಥವಾ ಸಸ್ಯಗಳ ಕಷಾಯವನ್ನು. ಹಾಗೆ ನೋಡಿದರೆ ಜಗತ್ತಿನಲ್ಲಿಯೇ ಅತಿ ಹೆಚ್ಚು ವಿಧವಾದ ಔಷಧ ರೂಪಗಳನ್ನು ಹೇಳಿದ್ದು ಆಯುರ್ವೆದವೇ! ಚೂರ್ಣ, ಕಷಾಯ, ಮಾತ್ರೆ, ಔಷಧೀಯ ತೈಲ -ಹೀಗೆ ಐವತ್ತಕ್ಕೂ ಹೆಚ್ಚು ರೂಪಗಳ ಔಷಧಗಳನ್ನು ಹೇಳಿ, ವಿಶ್ವದಲ್ಲೇ ಅತಿಹೆಚ್ಚು ಮನೆಮದ್ದುಗಳನ್ನು ನೀಡಿದ ಕೀರ್ತಿ ಹಾಗೂ ದಾಖಲೆಗಳೂ ಆಯುರ್ವೆದಕ್ಕೆ ಸೇರಿದೆ! ಆರೋಗ್ಯ ಕ್ಷೇತ್ರದಲ್ಲಿ ಇದು ಅತಿಗಹನವಾದ ವಿಚಾರ. ಕೋಟ್ಯಂತರ ರೀತಿಯ ಪ್ರಥಮ ಚಿಕಿತ್ಸೆಗಳನ್ನು ನೇರವಾಗಿ ಜನರ ಮನೆಬಾಗಿಲಿಗೆ ತಲುಪಿಸಿರುವ ಮಹತ್ತರ ಸಾರ್ವಕಾಲಿಕ ಕೊಡುಗೆಯಿದು.

ಕಷಾಯವೆಂದಾಕ್ಷಣ ನೀರಿನಲ್ಲಿ ಔಷಧೀಯ ಸಸ್ಯವನ್ನು ಕುದಿಸಿ ಮಾಡಿದ, ಕಹಿಯಾದ, ಕುಡಿಯಲು ಕಷ್ಟಪಡಬೇಕಾದ ಔಷಧವೆಂಬ ತಪ್ಪು ಕಲ್ಪನೆ ಅನೇಕ ಜನರಿಗಿದೆ. ನಿಜಕ್ಕೂ ಕಷಾಯ ರೂಪದ ಔಷಧಗಳಲ್ಲಿ ಐದು ವಿಧಗಳಿವೆ! ಇದನ್ನೇ ಆಯುರ್ವೆದ ‘ಪಂಚವಿಧ ಕಷಾಯ ಕಲ್ಪನಾ’ ಎಂದಿದೆ. ಅವು ಸ್ವರಸ, ಕಲ್ಕ, ಕ್ವಾಥ, ಹಿಮ ಹಾಗೂ ಫಾಂಟಾ. ಹೇಗೆ ಬೇಕೋ ಹಾಗೆ ಮನಸ್ಸಿಗೆ ಬಂದಂತೆ ತಯಾರಿಸಿದರೆ ಕಷಾಯವಾಗುವುದಿಲ್ಲ. ಇವುಗಳನ್ನು ತಯಾರಿಸುವ ವಿಧಾನಗಳನ್ನು ಆಯುರ್ವೆದದ ಎಲ್ಲಾ ಗ್ರಂಥಗಳೂ ವಿವರಿಸಿವೆ.

ಸ್ವರಸದ ಸ್ವಾರಸ್ಯ ಕೇಳಿ. ಸ್ವರಸವೆಂದರೆ ಸಸ್ಯದ ರಸ. ಹಸಿಯಾದ ಆಗತಾನೇ ಆರಿಸಿಕೊಂಡ ಸಸ್ಯದ ಭಾಗದಿಂದ ತೆಗೆಯುವ ರಸ. ಯಂತ್ರಗಳಿಂದ ಅಥವಾ ಒತ್ತಡ ತಂತ್ರದಿಂದ ತೆಗೆದು ಶುದ್ಧ ಬಟ್ಟೆಯಲ್ಲಿ ಸೋಸಿದ ದ್ರವಭಾಗವಿದು. ಹಣ್ಣಿನರಸ ಸಿದ್ಧಪಡಿಸುವ ವಿಧಾನವನ್ನು ಇದು ಹೋಲುತ್ತದೆ. ಒಣಗಿದ ದ್ರವ್ಯವಾಗಿದ್ದಲ್ಲಿ ಅಹೋರಾತ್ರಿ ಅಂದರೆ 24 ಗಂಟೆಗಳ ಕಾಲ ಎರಡು ಪಟ್ಟು ನೀರಿನಲ್ಲಿ ನೆನೆಸಿಟ್ಟು ರಸ ತೆಗೆಯುವ ವಿಧಾನವನ್ನು ಹೇಳಲಾಗಿದೆ. ಕಲ್ಕವೆಂದರೆ ಹಸಿ ದ್ರವ್ಯವನ್ನು ಶಿಲಾಪೀಠದಲ್ಲಿ ಒತ್ತಿ ಅರೆದು ತಯಾರಿಸಿದ ಪೇಸ್ಟ್. ಸಿಹಿತಿನಿಸು ತಯಾರಿಸುವಾಗ ಕಣಕ ಮಾಡುವ ರೀತಿಯಲ್ಲಿರುತ್ತದೆ. ಕಲ್ಕ ತಯಾರಿಸುವಾಗ ಔಷಧ ದ್ರವ್ಯದೊಂದಿಗೆ ಜೇನುತುಪ್ಪ, ತುಪ್ಪ ಅಥವಾ ತೈಲಗಳನ್ನು ಸೇರಿಸುವುದಾದರೆ ಎರಡು ಪಟ್ಟು ಸೇರಿಸಿಕೊಳ್ಳಬೇಕು. ನೀರಿನೊಂದಿಗಾದರೆ ನಾಲ್ಕು ಪಟ್ಟು, ಬೆಲ್ಲ ಅಥವಾ ಕಲ್ಲುಸಕ್ಕರೆಯಾದರೆ ಸಮಪ್ರಮಾಣ ಸೇರಿಸಿ ತಯಾರಿಸಬೇಕು. ಕ್ವಾಥವೆಂದರೆ ಜನಸಾಮಾನ್ಯರು ಈಗ ಹೇಳುವ ಕಷಾಯ. ಒಂದು ಭಾಗ ದ್ರವ್ಯಕ್ಕೆ ಹದಿನಾರು ಪಟ್ಟು ನೀರು ಸೇರಿಸಿ ಒಂದನೇ ಎಂಟು ಭಾಗವಾಗುವ ತನಕ ಸಣ್ಣ ಬೆಂಕಿಯಲ್ಲಿ ಕುದಿಸಿ ಶೋಧಿಸಿದಾಗ ಸಿಗುವುದೇ ಅಷ್ಟಮಾಂಶ ಕ್ವಾಥ. ಶೃತವೆಂಬ ಹೆಸರೂ ಇದೆ. ಔಷಧವು ಸೌಮ್ಯವಾಗಬೇಕಿದ್ದರೆ ನಾಲ್ಕನೇ ಒಂದು ಭಾಗವಾಗುವ ತನಕ ಕುದಿಸಿದರೆ ಚತುರ್ಥಾಂಶ ಕ್ವಾಥ. ದ್ರವ್ಯದ ಆರುಪಟ್ಟು ನೀರು ಹಾಕಿ ರಾತ್ರಿಪೂರ್ತಿ ನೆನೆಸಿಟ್ಟು ಬೆಳಗ್ಗೆ ಸೋಸಿದಾಗ ಸಿದ್ಧವಾಗುವುದು ಹಿಮ ಅಥವಾ ಶೀತಕಷಾಯ. ಒಂದು ಭಾಗ ದ್ರವ್ಯಕ್ಕೆ ಹದಿನಾರು ಪಟ್ಟು ಬಿಸಿನೀರನ್ನು ಸೇರಿಸಿ ಸ್ವಲ್ಪ ಕಾಲವಿಟ್ಟು ಸೋಸಿಕೊಂಡರೆ ಅದು ಫಾಂಟ. ಇದನ್ನು ಬಾಯಾರಿಕೆಯಾದಾಗ ಕುಡಿಯಲು ಬಳಸುವ ಪಾನೀಯ ಎನ್ನಬಹುದು. ಸ್ವರಸವು ಅತಿಹೆಚ್ಚು ಪ್ರಬಲವಾಗಿದ್ದರೆ ಅನುಕ್ರಮವಾಗಿ ಉಳಿದೆಲ್ಲವೂ ಸೌಮ್ಯವಾಗುತ್ತಾ ಫಾಂಟವು ಅತ್ಯಂತ ಮೃದು ಸ್ವಭಾವ ಹೊಂದಿದೆ. ಎಲ್ಲವನ್ನೂ ಕ್ರಮವರಿತು ಬಳಸುವುದರಲ್ಲಿ ಜಗತ್ತಿನ ಸ್ವಾಸ್ಥ್ಯವಡಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net