ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಉಪಾಯಗಳು

Sudina 2 vvani
Published on

ನಮ್ಮ ದೇಹವು ಪಂಚಮಹಾಭೂತಗಳಿಂದ ನಿರ್ಮಾಣವಾಗಿದೆ. ಸರಿಯಾದ ಆಹಾರ, ವ್ಯಾಯಾಮ, ನಿದ್ರೆ ಮತ್ತು ಆಹಾರ-ಔಷಧಗಳ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಸೂರ್ಯನ ಬೆಳಕು: ಪ್ರತಿನಿತ್ಯ ಎಳೆಬಿಸಿಲಿಗೆ ಮೈಯೊಡ್ಡುವುದರಿಂದ ದೇಹಕ್ಕೆ ಅಗತ್ಯವಾದ ಡಿ ವಿಟಮಿನ್ ಲಭ್ಯವಾಗುತ್ತದೆ. ಇದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನುಕೂಲ. ಪ್ರತಿನಿತ್ಯ ಕನಿಷ್ಠ 6ರಿಂದ 7 ಗಂಟೆ ನಿದ್ರೆ ಬಹಳ ಮುಖ್ಯ. ದೇಹದಲ್ಲಿ ಶೇ. 70ರಷ್ಟು ನೀರು ತುಂಬಿರುವುದರಿಂದ ನಮ್ಮ ದೇಹಕ್ಕೆ ಅಗತ್ಯ ಪ್ರಮಾಣದಲ್ಲಿ ನೀರನ್ನು ಒದಗಿಸಬೇಕು. ಇಲ್ಲದಿದ್ದಲ್ಲಿ ಉರಿಮೂತ್ರ, ಅಸಿಡಿಟಿ, ಮಲಬದ್ಧತೆ, ಮೂಲವ್ಯಾಧಿ, ತಲೆನೋವು ಇವೆಲ್ಲ ಕಂಡುಬರುತ್ತದೆ. ಆದ್ದರಿಂದ ಪ್ರತಿನಿತ್ಯ 3ರಿಂದ 4 ಲೀಟರ್ ನೀರು ಕುಡಿಯುವುದು ಪ್ರಾಮುಖ್ಯತೆಯನ್ನು ಪಡೆಯುತ್ತದೆ.

ಅಭ್ಯಂಗ: ಶುದ್ಧ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ಸ್ನಾನಕ್ಕೆ ಮೊದಲು ಇಡೀ ದೇಹಕ್ಕೆ ಹಚ್ಚಿ ಮಾಲಿಶ್ ಮಾಡಿಕೊಳ್ಳುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನುಕೂಲವಾಗುತ್ತದೆ.

ಹಣ್ಣು, ತರಕಾರಿ, ಗೋಡಂಬಿ, ಮೊಳಕೆ ಕಾಳುಗಳು, ಬಾದಾಮಿ, ಪಿಸ್ತಾ, ವಾಲ್​ನಟ್(ಅಕ್ರೂಟ್), ತೆಂಗಿನಕಾಯಿ ತುರಿ, ತೆಂಗಿನಕಾಯಿ ಹಾಲು, ಎಳನೀರು, ಜ್ಯೂಸ್, ಸಲಾಡ್​ಗಳು, ವರ್ಜಿನ್ ಕೋಕೋನಟ್ ಆಯಿಲ್​ನಂತಹ ಪದಾರ್ಥಗಳನ್ನು ದೈನಂದಿನ ಆಹಾರಕ್ರಮದಲ್ಲಿ ಹೆಚ್ಚು ಮಾಡುವುದು ಬಹಳ ಸಹಕಾರಿ. ಪ್ರತಿನಿತ್ಯ ಯೋಗ, ವ್ಯಾಯಾಮ ಮಾಡುವುದು ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಬಹಳ ಸಹಕಾರಿ. ವೇಗವಾಗಿ ಸೂರ್ಯನಮಸ್ಕಾರ ಮಾಡುವುದು, ವೇಗ ನಡಿಗೆ, ಜಾಗಿಂಗ್, ವೇಗವಾಗಿ ಗುಡ್ಡ ಹತ್ತುವುದು, ನಿಧಾನವಾಗಿ ಇಳಿಯುವುದು, ಪುನಃ ವೇಗವಾಗಿ ಹತ್ತುವುದು, ನಿಧಾನವಾಗಿ ಇಳಿಯುವುದು - ಈ ತರಹದ ಚಲನವಲನಗಳನ್ನು ಮಾಡುವುದರಿಂದ ರಕ್ತಸಂಚಾರ ಸುಗಮವಾಗುತ್ತದೆ.

ಅಡುಗೆಮನೆಯೇ ಆಸ್ಪತ್ರೆ, ಆಹಾರವೇ ಔಷಧ ಎಂಬುದು ಬಹಳ ಹಳೆಯ ಮಾತಾದರೂ ನಿತ್ಯನೂತನ. ಮಸಾಲೆಪದಾರ್ಥಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಲು ಬಹಳ ಸಹಕಾರಿ. ಜೀರಿಗೆ, ಕೊತ್ತಂಬರಿ, ಅರಿಶಿಣ, ಶುಂಠಿ, ಜಾಯಿಕಾಯಿ, ಚಕ್ರಮೊಗ್ಗೆ, ಲವಂಗ, ಓಮಕಾಳು (ಅಜವಾನ) ಇತ್ಯಾದಿ. ಆದಷ್ಟು ಹೊರಗಡೆ ಆಹಾರ ಸೇವನೆಯನ್ನು ತ್ಯಜಿಸಿ ಮನೆಯಲ್ಲಿಯೇ, ಹಿತಮಿತವಾದ, ಋತುಮಾನಕ್ಕೆ ಸರಿದೂಗುವಂತಹ ಆಹಾರಪದಾರ್ಥಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ಚೆನ್ನಾಗಿ ಕಾಯ್ದುಕೊಳ್ಳಬಹುದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಹತ್ತು ಕರಿಬೇವಿನ ಎಲೆಗಳು, ಹತ್ತು ಕಹಿಬೇವಿನ ಎಲೆಗಳು, ಅರ್ಧ ಚಮಚ ಅರಿಶಿಣ ಪುಡಿ, 4-5 ಕಾಳುಮೆಣಸು, ಒಂದರಿಂದ ಎರಡು ಚಮಚ ವರ್ಜಿನ್ ಕೋಕೋನಟ್ ಆಯಿಲ್, ಒಂದು ಎಸಳು ಬೆಳ್ಳುಳ್ಳಿ ಹಾಗೂ ಹತ್ತು ತುಳಸಿ ಎಲೆಗಳನ್ನು ಸೇರಿಸಿ ಜಜ್ಜಿ ಉಂಡೆಯ ರೀತಿ ಮಾಡಿ ಸೇವಿಸುವುದರಿಂದ ದೇಹವು ವೈರಸ್​ನ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಪಡೆಯುತ್ತದೆ. ಇದನ್ನು ಸತತ 15ರಿಂದ 20 ದಿನ ಮಾಡಬೇಕು. ಬಿಸಿನೀರಿಗೆ ಉಪ್ಪು ಹಾಕಿ ಗಂಟಲಲ್ಲಿ ಗಳಗಳ (ಗಾರ್ಗಲ್) ಮಾಡುವುದರಿಂದ ಸೋಂಕುಗಳ ವಿರುದ್ಧ ದೇಹವನ್ನು ರಕ್ಷಿಸಿಕೊಳ್ಳಲು ಬಹಳ ಸಹಾಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net