

| ನಾಗರಾಜ ಗುಂಡಪ್ಪ
ಕರೊನಾ ಹಾವಳಿಯಿಂದಾಗಿ ಸಾಗಬೇಕಾಗಿರುವ ಕೆಲಸಗಳು ಸಾಗದೇ ಅಡೆತಡೆಗಳುಂಟಾಗಿ ಹಲವರಲ್ಲಿ ಮಾನಸಿಕ ಖಿನ್ನತೆಯೂ ಕಾಣಿಸಿಕೊಳ್ಳುತ್ತಿದೆ. ಭಾರತೀಯ ಸಂಸ್ಕೃತಿಯಲ್ಲಿ ಕಂಡುಬರುವ ಸಮತೋಲನದ ಮನೋಭಾವ ಈ ಸಮಸ್ಯೆಗೆ ಪರಿಹಾರವನ್ನು ನೀಡಬಲ್ಲದು ಎನ್ನುವುದನ್ನು ಈ ಕಥೆಯಿಂದ ತಿಳಿಯಬಹುದು. ಆತ್ಮಸಾಕ್ಷಾತ್ಕಾರವಾಗಲೆಂದು ಇಬ್ಬರು ತಪಸ್ವಿಗಳು ಬಹಳ ವರ್ಷಗಳಿಂದ ತಪಸ್ಸು ಮಾಡುತ್ತಿರುವಾಗ ಆ ದಾರಿಯಲ್ಲಿ ಸಂಚರಿಸುತ್ತಿದ್ದ ನಾರದ ಮಹರ್ಷಿಗಳು ಇವರನ್ನು ಕಂಡು ಮಾತನಾಡಿಸಲು ಬಂದರು.
ಅವರಲ್ಲಿ ಒಬ್ಬ ತಪಸ್ವಿಯು-‘ಮಹರ್ಷಿಗಳೇ, ಅನೇಕ ವರ್ಷಗಳಿಂದ ತಪಸ್ಸು ಮಾಡುತ್ತಿದ್ದೇನೆ. ನನಗೆ ಯಾವಾಗ ಸಾಕ್ಷಾತ್ಕಾರವಾಗುತ್ತದೆ ಎಂದು ತಿಳಿಸಬಹುದೇ?’ ಎಂದು ಕೇಳಿದ. ಆಗ ನಾರದರು, ‘ನಿನಗೆ ಇನ್ನು ಇಪ್ಪತ್ತು ವರ್ಷಗಳ ನಂತರ ಸಾಕ್ಷಾತ್ಕಾರವಾಗುತ್ತದೆ’ ಎಂದರು. ಆಗ ಆ ತಪಸ್ವಿ, ‘ಅಯ್ಯೋ ಇನ್ನೂ ಇಪ್ಪತ್ತು ವರ್ಷಗಳು ಬೇಕೇ’ ಎಂದು ಕೊಂಚ ನಿರಾಶನಾಗಿ, ತಪಸ್ಸನ್ನು ಮುಂದುವರಿಸಿದ.
ಇದನ್ನೂ ಓದಿ: ಶಾಂತಿಗೆ ಮತ್ತೊಂದು ಹೆಸರು ಆನೆಗಳ ಈ ಕುಟುಂಬ!
ಎರಡನೆಯ ತಪಸ್ವಿಯು ‘ನಾನು ಎಂದು ಗುರಿ ಮುಟ್ಟಬಹುದು ಮಹರ್ಷಿಗಳೇ’ ಎಂದು ಕೇಳಿದ. ಆಗ ನಾರದರು ಎದುರಿಗಿದ್ದ ಒಂದು ಮರವನ್ನು ತೋರಿಸಿ, ‘ಇದೋ ನೋಡು, ಈ ಮರದಲ್ಲಿ ಎಷ್ಟು ಎಲೆಗಳಿವೆ ಎಂಬುದನ್ನು ಲೆಕ್ಕ ಹಾಕು; ಅಷ್ಟು ಜನ್ಮಗಳಾದ ನಂತರ ನಿನಗೆ ಸಾಕ್ಷಾತ್ಕಾರವಾಗುತ್ತದೆ’ ಎಂದರು. ಎರಡನೇ ತಪಸ್ವಿಗೆ ಇದರಿಂದ ನಿರಾಶೆ ಬದಲು ಆನಂದವೇ ಆಗುತ್ತದೆ. ಏಕೆಂದರೆ, ಆತ್ಮಸಾಕ್ಷಾತ್ಕಾರವೇನೂ ಕಟ್ಟಿಟ್ಟ ಬುತ್ತಿಯಲ್ಲ. ತಪಸ್ಸು, ಸಾಧನೆ ಮಾಡುವವರೆಲ್ಲರೂ ಆ ಗುರಿಯನ್ನು ತಲುಪಿಯೇ ತಲಪುತ್ತಾರೆ ಎನ್ನುವ ಭರವಸೆಯೇನಿಲ್ಲ. ಆದುದರಿಂದ, ಈ ತಪಸ್ವಿಗೆ, ಅಷ್ಟೊಂದು ಜನ್ಮದ ನಂತರವಾದರೂ ಆತ್ಮಸಾಕ್ಷಾತ್ಕಾರವು ಖಚಿತವಾಗಿ ಆಗಿಯೇ ಆಗುತ್ತದಲ್ಲ ಎಂದು ತಿಳಿದು ಆನಂದದಿಂದ ಕುಣಿದು ಕುಪ್ಪಳಿಸಲು ಆರಂಭಿಸಿದ. ಆನಂದದಿಂದ ಕುಣಿದೂ ಕುಣಿದೂ ಅವನಲ್ಲಿ ಮುಖ್ಯವಾದ ನಾಡಿಕೇಂದ್ರಗಳು ತೆರೆದು ಒಡನೆಯೇ ಆತ್ಮಸಾಕ್ಷಾತ್ಕಾರ ಆಗಿಬಿಡುತ್ತದೆ. ಅವನು ತತ್ಕಾಲದಲ್ಲಿಯೇ ಗುರಿಯನ್ನು ತಲುಪಿಬಿಡುತ್ತಾನೆ.
ಇಲ್ಲಿ ಇಬ್ಬರಿಗೂ ಉಂಟಾದ ವಿಭಿನ್ನವಾದ ಪರಿಣಾಮದ ಹಿಂದೆ ಮನೋಧರ್ಮದ ಒಂದು ಸೂಕ್ಷ್ಮವಿದೆ. ಎರಡನೆಯ ತಪಸ್ವಿಯು ಕೂಡಲೇ ಗುರಿ ಸಾಧನೆಯಾಗಬೇಕೆಂಬ ತವಕ ಮತ್ತು ಎಷ್ಟು ಜನ್ಮಗಳಾದರೂ ತೆಗೆದುಕೊಳ್ಳಲಿ ಎನ್ನುವ ತಾಳ್ಮೆ- ಈ ಎರಡೂ ಮನೋಭಾವಗಳ ಸಮತೋಲನವನ್ನು ಕಾಪಾಡಿಕೊಂಡಿರುತ್ತಾನೆ. ಆದುದರಿಂದ ಮೊದಲನೇ ತಪಸ್ವಿಗೆ ಆದ ಹಾಗೆ ನಿರಾಶೆಯಾಗುವ ಬದಲು ಆನಂದಾತಿರೇಕ ಉಂಟಾಗಿ, ಆ ಆನಂದಾತಿರೇಕವು ಪರಮಾನಂದ ರೂಪವಾದ ಆತ್ಮಾನುಭವಕ್ಕೆ ದಾರಿ ಮಾಡಿಕೊಟ್ಟುಬಿಡುತ್ತದೆ. ಈ ಸಮತೋಲನದ ಮನೋಭಾವ ಆಧ್ಯಾತ್ಮಿಕ ತಪಸ್ಸಿಗಷ್ಟೇ ಅಲ್ಲದೆ ಸರ್ವಕಾರ್ಯ ಸಾಧನೆಗೂ ಕೀಲಿಕೈಯಂತೆ ಇದ್ದು ಕಾರ್ಯಸಾಧನೆಗೆ ಬೇಕಾದ
ಉತ್ಸಾಹವನ್ನೂ ತುಂಬುತ್ತದೆ ಮತ್ತು ದೀರ್ಘಕಾಲದ ಪರಿಶ್ರಮ ಪಡುವ ತಾಳ್ಮೆಯನ್ನೂ ತುಂಬುತ್ತದೆ. ‘ದೈವಾನುಗ್ರಹ ಮತ್ತು ಪುರುಷ ಪ್ರಯತ್ನ, ರಥದ ಎರಡು ಚಕ್ರಗಳಿದ್ದ ಹಾಗೆ’ ಎನ್ನುವ ಶ್ರೀರಂಗ ಮಹಾಗುರುಗಳ ಮಾತಿಲ್ಲಿ ಸ್ಮರಣೀಯ. ಪುರುಷಪ್ರಯತ್ನದಿಂದ ಸಂಯಮವನ್ನು ಮೆರೆಯೋಣ. ಉಳಿದುದನ್ನು ದೈವಕ್ಕೆ ಬಿಡೋಣ.
(ಲೇಖಕರು ಅಧ್ಯಾತ್ಮ ಚಿಂತಕರು)