

Coffee: ಕಾಫಿ ಪ್ರಿಯರಿಗೆ ಇದು ನಿಜಕ್ಕೂ ಸಖತ್ ಸುದ್ದಿ. ಕಾಫಿ ಕುಡಿಯುವುದರಿಂದ ಹೃದಯದ ಆರೋಗ್ಯಕ್ಕೆ ಪ್ರಯೋಜನವಾಗುವುದಲ್ಲದೆ, ಜೀವಿತಾವಧಿಯೂ ಹೆಚ್ಚಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಅಸಲಿಗೆ ದಿನಕ್ಕೆ ನಾವೆಷ್ಟು ಬಾರಿ ಕಾಫಿ ಕುಡಿಯುತ್ತೇವೆ ಎಂಬುದು ಮುಖ್ಯ ಅಲ್ಲ. ಯಾವ ಸಮಯದಲ್ಲಿ ಕುಡಿಯುತ್ತೀವಿ ಅನ್ನೋದು ಬಹಳ ಮುಖ್ಯವಾಗಿದೆ.
ಬಹುತೇಕರ ದಿನಚರಿ ಶುರುವಾಗುವುದೇ ಒಂದು ಲೋಟ ಬಿಸಿ ಬಿಸಿ ಚಹಾ ಅಥವಾ ನೊರೆ ಭರಿತ ಕಾಫಿಯಿಂದ. ಕೆಲವರಿಗೆ ಇದು ಚಟವಾಗಿ ಮಾರ್ಪಟ್ಟರೆ ಇನ್ನೂ ಕೆಲವರಿಗೆ ಇದು ಮೂರೊತ್ತಿನ ಊಟದಂತೆ. ವರದಿಯ ಪ್ರಕಾರ, ದಿನವಿಡೀ ಕಾಫಿ ಕುಡಿಯುವವರಿಗೆ ಹೋಲಿಸಿದರೆ, ಬೆಳಗ್ಗೆ ಕಾಫಿ ಕುಡಿಯುವವರಿಗೆ ಹೃದಯ ಸಮಸ್ಯೆಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳು ಅಷ್ಟಾಗಿ ಕಾಡುವುದಿಲ್ಲ. ಇವರಿಗೆ ಸಾವಿನ ಅಪಾಯ ಕೂಡ ಕಡಿಮೆ ಎಂದೇ ಹೇಳಲಾಗಿದೆ.
ಅಂದಹಾಗೆ ಚಹಾ ಮತ್ತು ಕಾಫಿಯನ್ನು ಕುಡಿಯದೆ ಬದುಕುವುದು ಅಸಾಧ್ಯವೆಂದು ಹೇಳಿದರೂ ಅದರ ದುಷ್ಪರಿಣಾಮಗಳ ಬಗ್ಗೆ ಜಗತ್ತಿನಲ್ಲಿ ಅನೇಕ ಅಧ್ಯಯನಗಳು ಹೊರಬರುತ್ತಿವೆ. ಕಾಫಿ ಕುಡಿಯುವುದರಿಂದ ಮಾರಕ ಕಾಯಿಲೆಗಳು ಉಂಟಾಗಬಹುದು ಮತ್ತು ಕಾಫಿ ಕುಡಿಯುವವರಲ್ಲಿ ಹೃದಯ ಕಾಯಿಲೆಯ ಅಪಾಯ ಕಡಿಮೆಯಾಗುತ್ತದೆ ಎಂದು ಹೇಳುವ ವಿವಿಧ ಅಧ್ಯಯನಗಳು ಈಗಾಗಲೇ ಪ್ರಕಟವಾಗಿವೆ. ಆದಾಗ್ಯೂ, ಈ ಅಧ್ಯಯನವು ಕಾಫಿಗಿಂತ ಕಾಫಿ ಕುಡಿಯುವ ಸಮಯವು ಮುಖ್ಯ ಎಂಬುದನ್ನು ಬಹಿರಂಗಪಡಿಸಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಬೆಳಗ್ಗೆ ಕಾಫಿ ಸೇವಿಸುವುದರಿಂದ ಹೃದಯ ಕಾಯಿಲೆಯ ಅಪಾಯ ಸಮೀಪಿಸುವುದಿಲ್ಲ ಎಂದು ಸಮೀಕ್ಷಾ ವರದಿ ಹೇಳಿದೆ. ಇದಲ್ಲದೆ, ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕೂಡ ಕಾಫಿ ಸೇವನೆ ನಿಯಂತ್ರಿಸುತ್ತದೆ. ಕೆಫೀನ್ ಅಂಶ ದೇಹದ ಮೇಲೆ ಬೀರುವ ಪರಿಣಾಮಗಳನ್ನು ಪರಿಶೀಲಿಸುವುದರ ಜತೆಗೆ, ನೀವು ಕಾಫಿ ಕುಡಿಯುವ ಸಮಯವು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ.
40,725 ಜನರನ್ನು ಸಮೀಕ್ಷೆಗೆ ಒಳಪಡಿಸಿದ ಯುಎಸ್ ರಾಷ್ಟ್ರೀಯ ಆರೋಗ್ಯ ಮತ್ತು ಪೌಷ್ಟಿಕಾಂಶ ಪರೀಕ್ಷಾ ಸಮೀಕ್ಷೆಯು, ಸುಮಾರು ಹತ್ತು ವರ್ಷಗಳ ಕಾಲ ಅವರ ದೈನಂದಿನ ಆಹಾರ ಸೇವನೆಯನ್ನು ಪರಿಶೀಲಿಸಿ, ಈ ವಿಚಾರವನ್ನು ಬಹಿರಂಗಪಡಿಸಿದೆ. ಇದರ ಪರಿಣಾಮವಾಗಿ, ಬೆಳಗ್ಗೆ ಕಾಫಿ ಕುಡಿಯುವವರಲ್ಲಿ ಸಾವಿನ ಅಪಾಯವು ಶೇ.16ರಷ್ಟು ಕಡಿಮೆ ಮತ್ತು ಕಾಫಿ ಕುಡಿಯದವರಿಗೆ ಹೋಲಿಸಿದರೆ ಹೃದಯ ಕಾಯಿಲೆಯಿಂದ ಸಾವಿನ ಅಪಾಯವು ಶೇ.31ರಷ್ಟು ಕಡಿಮೆ ಎಂದು ತಿಳಿದುಬಂದಿದೆ. ಆದಾಗ್ಯೂ, ದಿನವಿಡೀ ಆಗಾಗ್ಗೆ ಕಾಫಿ ಸೇವಿಸುವರಲ್ಲಿ ಈ ಪ್ರಯೋಜನಗಳು ಅಷ್ಟಾಗಿ ಕಂಡುಬಂದಿಲ್ಲ ಎಂಬುದೂ ಅಚ್ಚರಿಯ ಸಂಗತಿಯೇ ನಿಜ,(ಏಜೆನ್ಸೀಸ್).