

ಭಾರತದ ಬಹುಮುಖ್ಯ ಸಾಂಬಾರ ಪದಾರ್ಥಗಳಲ್ಲಿ ಏಲಕ್ಕಿಯೂ ಒಂದು. ಏಷ್ಯಾಖಂಡದ ಉಷ್ಣವಲಯವೇ ಇದರ ಮೂಲಸ್ಥಾನ. ಕೇರಳವನ್ನು ಪೂರ್ವಪ್ರಾಂತ್ಯದ ಏಲಕ್ಕಿ ನಾಡು ಎಂದು ಕರೆಯಲಾಗುತ್ತಿತ್ತು. ಕಾಫಿ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯಲಾಗುವ ಇದನ್ನು ಔಷಧವಾಗಿಯೂ ಉಪಯೋಗಿಸುತ್ತಾರೆ.
ಹಿರಿಯರು ಮನೆಗಳಲ್ಲಿ ಏಲಕ್ಕಿಯ ಬಳಕೆಯನ್ನು ಪ್ರತಿದಿನವೂ ಕಡ್ಡಾಯಗೊಳಿಸಿದ್ದರ ಹಿಂದೆ ಆರೋಗ್ಯದ ಬಗ್ಗೆ ಅವರಿಗಿರುವ ಕಾಳಜಿಯನ್ನು ಗಮನಿಸಬಹುದು. ಇಂದಿಗೂ ಕೆಲವರು ಉಟವಾದ ತಕ್ಷಣ ವೀಳ್ಯದೆಲೆಯ ಬದಲಾಗಿ ನಾಲ್ಕು ಏಲಕ್ಕಿಕಾಳನ್ನು ಅಗಿಯುವ ರೂಢಿ ಇಟ್ಟುಕೊಂಡಿರುವುದನ್ನು ಕಾಣಬಹುದು.
ಏಲಕ್ಕಿಯಲ್ಲಿ ಪೊಟ್ಯಾಷಿಯಂ, ಮೆಗ್ನೀಷಿಯಂ, ವಿಟಮಿನ್ ಬಿ 1, ಬಿ 6 ಮತ್ತು ವಿಟಮಿನ್ ಸಿ ಅಂಶಗಳು ಹೇರಳವಾಗಿವೆ. ಇದರಲ್ಲಿನ ಫೈಬರ್, ಕ್ಯಾಲ್ಸಿಯಂ ತೂಕವನ್ನು ನಿಯಂತ್ರಿಸುತ್ತದೆ.
ಏಲಕ್ಕಿಯಲ್ಲಿರುವ ಪೊಟ್ಯಾಷಿಯಂ ಮತ್ತು ಫೈಬರ್ ಅಂಶಗಳು ದೇಹದ ರಕ್ತ ಪರಿಚಲನೆಯನ್ನು ಹೆಚ್ಚಿಸುವುದರಿಂದ ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿರುತ್ತದೆ. ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಬಿಸಿನೀರಿನೊಂದಿಗೆ ಒಂದು ಏಲಕ್ಕಿಯನ್ನು ತಿನ್ನುವುದರಿಂದ ನೈಸರ್ಗಿಕವಾಗಿ ಹೊಟ್ಟೆಯ ಕೊಬ್ಬನ್ನು ಕ್ರಮೇಣ ಕರಗಿಸಬಹುದು.
ಏಲಕ್ಕಿಯನ್ನು ನಿತ್ಯ ಸೇವಿಸುವುದರಿಂದ ಜೀರ್ಣಕ್ರಿಯೆ ಸರಾಗವಾಗುವುದಲ್ಲದೆ, ಮೂತ್ರದ ಸೋಂಕನ್ನು ದೂರ ಮಾಡಬಹುದು. ಫ್ಲೂ ಜ್ವರಕ್ಕೆ ಔಷಧವಾಗಿ ಬಳಸುತ್ತಾರೆ.
ಮಕ್ಕಳ ಬಿಕ್ಕಳಿಕೆಗೆ ಇದನ್ನು ಸಕ್ಕರೆಯೊಂದಿಗೆ ಬಳಸಬಹುದು. ಅಜೀರ್ಣ ಮತ್ತು ವಾಕರಿಕೆಗೂ ಇದು ಔಷಧವಾಗಿ ಬಳಕೆಯಾಗುತ್ತದೆ. ಅನಾರೋಗ್ಯದ ಸಂದರ್ಭದಲ್ಲಿ ಬಾಯಿಯ ದುರ್ವಾಸನೆ ತಡೆಗೆ ಏಲಕ್ಕಿಯನ್ನು ಬಾಯಿಯಲ್ಲಿ ಇಟ್ಟುಕೊಳ್ಳಬಹುದು.
ನೆಗಡಿ ಮತ್ತು ಕೆಮ್ಮನ್ನು ನಿವಾರಿಸುವ ಶಕ್ತಿಯುಳ್ಳ ಏಲಕ್ಕಿಯು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಸಹಕಾರಿ. ಏಲಕ್ಕಿ ಸೇವನೆಯಿಂದ ಅಸಿಡಿಟಿಯಿಂದ ಬರುವ ತೇಗು, ಶ್ವಾಸಕೋಶದಲ್ಲಿ ನೋವು ಕಡಿಮೆಯಾಗುತ್ತದೆ. ರಕ್ತ ಹೆಪ್ಪುಗಟ್ಟುವ ಅಪಾಯವನ್ನು ತಡೆಗಟ್ಟುವ ಏಲಕ್ಕಿ ಸರಾಗ ರಕ್ತಸಂಚಾರಕ್ಕೆ ಸಹಾಯ ಮಾಡುತ್ತದೆ. ಹೃದಯದ ಆರೋಗ್ಯವನ್ನೂ ಸಮಸ್ಥಿತಿಯಲ್ಲಿಡಲು ಸಹಕರಿಸುವ ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಅಸ್ತಮಾ ಪೀಡಿತರು ಏಲಕ್ಕಿಯನ್ನು ಹೆಚ್ಚಾಗಿ ಉಪಯೋಗಿಸುವುದು ಉತ್ತಮ.