

Fever : ಜನರಲ್ಲಿ ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಜ್ವರವು ಕೂಡ ಒಂದು. ಅನೇಕ ಕಾರಣಗಳಿಗಾಗಿ ಜ್ವರವು ಸಂಭವಿಸಬಹುದು. ಮುಖ್ಯವಾಗಿ ವೈರಲ್ ಸೋಂಕಿನಿಂದ ಇದು ಉಂಟಾಗುತ್ತದೆ.
ಈ ಚಳಿಗಾಲದಲ್ಲಿ ಬಹುತೇಕ ಮಂದಿ ಈ ಸಮಸ್ಯೆಯನ್ನು ಎದುರಿಸುತ್ತಾರೆ. ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗಲೂ ಜ್ವರ ಜನರನ್ನು ಬಾಧಿಸುತ್ತದೆ. ಹೀಗಾಗಿ ಜ್ವರ ಬಂದಾಗ ನೀವು ಮನೆಯಲ್ಲಿಯೇ ವಿಶ್ರಾಂತಿಯನ್ನು ಪಡೆಯಬೇಕು. ಈ ಸಂದರ್ಭದಲ್ಲಿ ಉತ್ತಮ ಆಹಾರ ಸೇವಿಸಬೇಕು ಮತ್ತು ನಿರ್ಜಲೀಕರಣವನ್ನು ತಪ್ಪಿಸಬೇಕು.
ಆದಾಗ್ಯೂ, ನೀವು ನಿರಂತರ ಕೆಮ್ಮು, ಎದೆ ನೋವು, ಉಸಿರಾಟದ ತೊಂದರೆ, ತೀವ್ರ ತಲೆನೋವು, ತಲೆತಿರುಗುವಿಕೆ ಸೇರಿದಂತೆ ಮುಂತಾದ ರೋಗ ಲಕ್ಷಣಗಳನ್ನು ಅನುಭವಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ಅನೇಕ ಜನರು ಜ್ವರದ ಲಕ್ಷಣಗಳನ್ನು ಗಮನಿಸಿದ ತಕ್ಷಣ ಪ್ಯಾರಸಿಟಮಾಲ್ ಅಥವಾ ಆಸ್ಪಿರಿನ್ ತೆಗೆದುಕೊಳ್ಳುತ್ತಾರೆ. ಇದು ಕೆಲವು ಜನರಲ್ಲಿ ತೀವ್ರ ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು. ಯಕೃತ್ತು ಅಥವಾ ಮೂತ್ರಪಿಂಡದ ಕಾಯಿಲೆ ಇರುವವರು ವೈದ್ಯರ ನಿರ್ದೇಶನದಂತೆ ಮಾತ್ರ ಔಷಧಿಗಳನ್ನು ತೆಗೆದುಕೊಳ್ಳಬೇಕು.
ಇನ್ನು ಜ್ವರ ಬಂದ ನಂತರ ಸ್ನಾನ ಮಾಡಬಹುದೇ ಎಂಬ ಪ್ರಶ್ನೆ ವ್ಯಾಪಕವಾಗಿದೆ. ಬಹುತೇಕರು ಜ್ವರ ಬಂದಾಗ ಸ್ನಾನ ಮಾಡಲು ಹಿಂದೇಟು ಹಾಕುತ್ತಾರೆ. ಸ್ನಾನ ಮಾಡಿದರೆ, ಜ್ವರ ಇನ್ನಷ್ಟು ಹೆಚ್ಚಾಗುತ್ತದೆ ಎಂಬ ಭಾವನೆ ಇದೆ. ಆದರೆ, ಜ್ವರ ಬಂದಾಗ ನೀವು ಖಂಡಿತ ಸ್ನಾನ ಮಾಡಬಹುದು ಎಂದು ವೈದ್ಯರೇ ಹೇಳುತ್ತಾರೆ.
ಉಗುರು ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡುವುದು ನಿಮ್ಮ ಶಕ್ತಿಯನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ. ಅದೇ ರೀತಿ ಆಹಾರದ ವಿಷಯದಲ್ಲಿಯೂ ವಿಶೇಷ ಬದಲಾವಣೆ ಮಾಡುವ ಅಗತ್ಯವಿಲ್ಲ. ತಣ್ಣನೆಯ ಆಹಾರವನ್ನು ಹೊರತುಪಡಿಸಿ ನೀವು ಮನೆಯಲ್ಲಿ ತಯಾರಿಸಿದ ಯಾವುದನ್ನಾದರೂ ತಿನ್ನಬಹುದು. ಆಹಾರವನ್ನು ಸೇವಿಸದಿರುವುದು ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.