

ಸಾಮಾನ್ಯವಾಗಿ ಎಲ್ಲ ಭಾರತೀಯರಿಗೂ ವೀಳ್ಯದೆಲೆಯ ಬಗ್ಗೆ ಗೊತ್ತು. ಅನಾದಿಕಾಲದಿಂದಲೂ ತಾಂಬೂಲವಾಗಿ ಅದನ್ನು ಬಳಸಲಾಗುತ್ತದೆ. ಧಾರ್ವಿುಕ ವಿಧಿಗಳಲ್ಲಿಯೂ ಅದಕ್ಕೆ ಪ್ರಾಶಸ್ಱವಿದೆ. ಫಲತಾಂಬೂಲ ಕೊಡುವಾಗ ತೆಂಗಿನಕಾಯಿಯ ಜತೆ ವೀಳ್ಯದೆಲೆ ಇಡಲೇಬೇಕಾಗುತ್ತದೆ. ಜತೆಗೆ ಹಲವಾರು ಔಷಧೀಯ ಗುಣಗಳನ್ನು ಕೂಡ ಅದು ಹೊಂದಿದೆ. ತಂಬಾಕನ್ನು ಬಳಸದೆ ಅಡಕೆ-ಸುಣ್ಣ ಮಾತ್ರ ಹಾಕಿ ತಿನ್ನುವ ವೀಳ್ಯದೆಲೆಯಿಂದ ಬಹಳ ಪ್ರಯೋಜನಗಳು ದೊರೆಯುತ್ತವೆ. ವೀಳ್ಯದೆಲೆಯ ರಸವನ್ನು ಲೇಪಿಸಿ ಬಳಿಕ ವೀಳ್ಯದೆಲೆಯಿಂದಲೇ ಮುಚ್ಚಿ ಬ್ಯಾಂಡೇಜ್ ಹಾಕಿದರೆ ಗಾಯವು ಬೇಗ ಮಾಯುತ್ತದೆ. ವೀಳ್ಯದೆಲೆಯ ರಸವನ್ನು ಉರಿಯೂತ ಪೀಡಿತ ಜಾಗದಲ್ಲಿ ಲೇಪಿಸಿದರೆ ಕೀಲುಗಳ ಉರಿಯೂತವನ್ನು ಕಡಿಮೆಯಾಗುತ್ತದೆ. ವೀಳ್ಯದೆಲೆಯು ಬಾಯಿಯಲ್ಲಿ ಕೆಟ್ಟವಾಸನೆ ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ನಿಮೂಲನ ಮಾಡುವ ಮೂಲಕ ಉಸಿರಿನ ದುರ್ವಾಸನೆಯನ್ನು ನಿವಾರಿಸಿ ಬಾಯಿಯ ಆರೋಗ್ಯವನ್ನು ಕಾಪಾಡುತ್ತದೆ. ನಿಯತವಾಗಿ ವೀಳ್ಯದೆಲೆ ಸೇವಿಸುವುದರಿಂದ ಶರೀರದ ಚಯಾಪಚಯ ಕ್ರಿಯೆ ಹೆಚ್ಚುತ್ತದೆ. ವೀಳ್ಯದೆಲೆಯನ್ನು ಜಗಿಯುವುದರಿಂದ ಗಂಟಲು ಕೆರೆತ ಶಮನಗೊಳ್ಳುತ್ತದೆ. ಒಂದು ವೀಳ್ಯದೆಲೆ, ಸ್ವಲ್ಪ ಕರಿತುಳಸಿ ಹಾಗೂ ಒಂದು ಲವಂಗವನ್ನು ಅರೆದು ದಿನಕ್ಕೆ ಎರಡು ಬಾರಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ. ಹೊಟ್ಟೆ ಉಬ್ಬರದಿಂದ ನರಳುತ್ತಿರುವ ಮಗುವಿನ ಹೊಟ್ಟೆಗೆ ಹರಳೆಣ್ಣೆ ಹಚ್ಚಿ ತುಸು ಬಿಸಿ ಮಾಡಿದ ವೀಳ್ಯದೆಲೆಯ ಕಾವು ಕೊಟ್ಟರೆ ನೋವು ಮಾಯವಾಗುವುದು. ವೀಳ್ಯದೆಲೆ ರಸ, ತುಳಸಿರಸ, ದೊಡ್ಡಪತ್ರೆ ರಸಕ್ಕೆ ಜೇನುತುಪ್ಪ ಸೇರಿಸಿ ನೀಡಿದರೆ ಮಕ್ಕಳಲ್ಲಿ ನೆಗಡಿ, ಕೆಮ್ಮು, ಕಫ ಶೀಘ್ರ ಗುಣವಾಗುತ್ತದೆ. ಎರಡು ಕಪ್ ಕೊಬ್ಬರಿ ಎಣ್ಣೆಗೆ ಅರ್ಧ ಕಪ್ ವೀಳ್ಯದೆಲೆ ರಸ ಮತ್ತು ಅರ್ಧ ಕಪ್ ಒಂದೆಲಗದ ರಸ ಬೆರೆಸಿ ಚೆನ್ನಾಗಿ ಕುದಿಸಿ ನಿತ್ಯ ತಲೆಗೂದಲಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ. ವೀಳ್ಯದೆಲೆಗಳನ್ನು ಕತ್ತರಿಸಿ ನೀರಿನಲ್ಲಿ ಕುದಿಸಿ, ಸೋಸಿ ತುಸು ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿದರೆ ವಸಡಿನ ನೋವು, ಊತ ಗುಣವಾಗುತ್ತದೆ.