ಮಂಡಿ ಸವಕಳಿ ಶುರುವಾಗುವ ಮುನ್ನವೇ ಇರಲಿ ಎಚ್ಚರ

Knee Pain
Published on
ಧನ್ವಂತರಿ
ಚಳಿಗಾಲ ಬಂತೆಂದರೆ ಇರುವ ನೋವು ಹೆಚ್ಚಾಗುತ್ತದೆ; ಇಲ್ಲದಿರುವ ನೋವು ಬರುತ್ತದೆ. ಹಾಗಾಗಿ ತುಂಬಾ ಜನರಿಗೆ ತೊಂದರೆಯನ್ನು ಕೊಡುತ್ತಿರುವ ಸಂಧಿ ನೋವು, ಅದರಲ್ಲಿಯೂ ಮಂಡಿ ನೋವಿನ ಬಗ್ಗೆ ಇಂದು ಕೆಲವು ವಿಷಯಗಳನ್ನು ತಿಳಿದುಕೊಳ್ಳೋಣ. ನಮ್ಮ ಚಲನವನಗಳು ಸರಿಯಾಗಿ ಇರಬೇಕೆಂದರೆ ಸಂಧಿಗಳು ನೋವು ಕೊಡದೇ ಸರಿಯಾಗಿರಲೇಬೇಕು. ಅದರಲ್ಲೂ ವಿಶೇಷವಾಗಿ ಮಂಡಿನೋವು ಒಂದಿದ್ದರೆ ಸಣ್ಣಪುಟ್ಟ ಕೆಲಸಗಳೂ ದೊಡ್ಡ ಹೊರೆಯಾಗಿ ಬಿಡುತ್ತವೆ. ಏಕೆಂದರೆ ನಮ್ಮ ಇಡೀ ದೇಹವನ್ನು ಹೊತ್ತುಕೊಳ್ಳುವುದು ಮಂಡಿಯೇ. ಹಾಗಾಗಿ ಮಂಡಿ ಸವಕಳಿಗೆ ಕಾರಣಗಳು ಮತ್ತು ಪರಿಹಾರಗಳ ಬಗ್ಗೆ ರ್ಚಚಿಸೋಣ. ಸಾಮಾನ್ಯವಾಗಿ ಮಧ್ಯ ವಯಸ್ಸು ಮತ್ತು ಇಳಿ ವಯಸಿನಲ್ಲಿ ಇದು ಅತಿಯಾಗಿ ಕಾಡಿ ಹಿಂಸಿಸುತ್ತದೆ. ಇತ್ತೀಚೆಗೆ ಮಂಡಿನೋವು ಚಿಕ್ಕ ವಯಸ್ಸಿನಲ್ಲಿ ಕೂಡ ಬರುತ್ತಿದೆ. ಪೌಷ್ಟಿಕವಲ್ಲದ ಜಂಕ್​ಫುಡ್​ಗಳ ಸೇವನೆ, ಸರಿಯಾದ ಪ್ರಮಾಣದಲ್ಲಿ ಕೊಬ್ಬನ್ನು ಸೇವಿಸದೇ ಇರುವುದು, ವ್ಯಾಯಾಮ ರಹಿತ ಜೀವನ ಶೈಲಿ, ಮೆಟ್ಟಿಲು ಮುಂತಾದವುಗಳನ್ನು ಅತಿಯಾಗಿ ಹತ್ತಿ ಇಳಿಯುವ ಕೆಲಸಗಳನ್ನು ಮಾಡುವುದು ಇವೆಲ್ಲಾ ಮಂಡಿ ಸವಕಳಿ ಬೇಗ ಆಗಲು ಕಾರಣವಾಗುತ್ತವೆ. ಅತಿತೂಕ ಕೂಡಾ ಮುಖ್ಯ ಕಾರಣಗಳಲ್ಲೊಂದು. ನಿಂತಿರುವಷ್ಟು ಸಮಯವೂ ಇಡೀ ದೇಹದ ಭಾರವನ್ನು ಮಂಡಿಗಳೇ ಹೊರಬೇಕಾಗುತ್ತದೆ. ಆದ್ದರಿಂದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ಮತ್ತು ಹೆಚ್ಚಾದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಂತ ಮುಖ್ಯವಾದದ್ದು. ಹಿಂದೆ ಎಷ್ಟೆಲ್ಲಾ ಕೆಲಸಗಳನ್ನು ಮಾಡುವುದು ಅನಿವಾರ್ಯವಾಗಿದ್ದರೂ 70-80ರ ವಯಸ್ಸಿನ ಒಳಗೆ ಮೂಳೆ ಸವಕಳಿ ಆಗುತ್ತಿರಲಿಲ್ಲ. ಆದರೆ ಈಗ ನಮ್ಮ ಆಹಾರದಲ್ಲಿ ಪೋಷಕಾಂಶಗಳ ಕೊರತೆ ಅತಿಯಾಗಿ ಕಾಡುತ್ತಿರುವ ಕಾರಣ ಚಿಕ್ಕ ವಯಸ್ಸಿನಲ್ಲಿಯೇ ಸವಕಳಿಯಾಗುತ್ತಿದೆ.

ಸಾಮಾನ್ಯವಾಗಿ ಎಲ್ಲರೂ ಮಂಡಿನೋವು ಪ್ರಾರಂಭವಾದ ನಂತರ ಮಂಡಿಯ ಬಗ್ಗೆ ಗಮನಹರಿಸುತ್ತಾರೆ. ಆದರೆ ಮೊದಲಿನಿಂದಲೇ ಕಾಳಜಿ ವಹಿಸಿದರೆ ಮಾತ್ರ ಮಂಡಿ ಹಾಳಾಗದಂತೆ ತಡೆಯಬಹುದು. ಒಮ್ಮೆ ಮಂಡಿ ಸವಕಳಿ ಪ್ರಾರಂಭವಾದರೆ ಅದು ನಿಧಾನವಾಗಿ ಆಗುವಂತೆ ಮಾಡಬಹುದೇ ಹೊರತು ನೂರಕ್ಕೆ ನೂರರಷ್ಟು ಸರಿ ಮಾಡುವುದು ಕಷ್ಟವಾಗುತ್ತದೆ. ಹಾಗಾಗಿ ನಮ್ಮ ಆಹಾರದಲ್ಲಿ ಸಂಧಿಗಳಿಗೆ ಪುಷ್ಟಿಕೊಡುವಂತಹ ಪೋಷಕಾಂಶಗಳು ಇರುವಂತೆ ನೋಡಿಕೊಳ್ಳಬೇಕು. ವಿಟಮಿನ್ ಡಿ, ವಿಟಮಿನ್ ಬಿ ಗುಂಪುಗಳು, ವಿಟಮಿನ್ ಸಿ, ಕೆ, ಕ್ಯಾಲ್ಸಿಯಂ, ಮೆಗ್ನಿಸಿಯಂ, ಝಿಂಕ್ ಮುಂತಾದ ಪೋಷಕಾಂಶಗಳು ಅತ್ಯಂತ ಅಗತ್ಯವಾದವು. ಇನ್ನೂ ವಿಶೇಷವಾಗಿ ಒಳ್ಳೆಯ ಕೊಬ್ಬು ಸಂಧಿಗಳಿಗೆ ಅತಿ ಅವಶ್ಯ. ಒಳ್ಳೆಯ ಕೊಬ್ಬನ್ನು ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡುವವರಿಗೆ ಮಾತ್ರ ನೂರು ಕಾಲ ಸಂಧಿಗಳು ಚೆನ್ನಾಗಿರಲು ಸಾಧ್ಯ. ಹಾಗಾಗಿ ಗಾಣದಲ್ಲಿ ತೆಗೆದ ಕೊಬ್ಬರಿ ಎಣ್ಣೆ, ಶೇಂಗಾ ಎಣ್ಣೆ, ಎಳ್ಳೆಣ್ಣೆಗಳನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಬೇಕು. ಮನೆಯಲ್ಲಿ ತಯಾರಿಸಿದ ತುಪ್ಪ ಕೂಡಾ ಸಂಧಿಗಳಿಗೆ ಶಕ್ತಿಯನ್ನು ಕೊಡುತ್ತದೆ. ಹಾಲು, ಎಳ್ಳು, ಹಸಿರು ಸೊಪ್ಪು-ತರಕಾರಿಗಳು, ಹಣ್ಣುಗಳು, ಒಣಹಣ್ಣುಗಳು ಮತ್ತು ನಟ್​ಗಳನ್ನು ಸೇವಿಸಬೇಕು. ಆಯುರ್ವೆದದಲ್ಲಿ ನಿತ್ಯವೂ ಅಭ್ಯಂಗ ಮಾಡಿಕೊಳ್ಳುವವರಿಗೆ ವಾತಾವ್ಯಾಧಿಗಳು ಕಾಡುವುದಿಲ್ಲ ಎಂದು ಹೇಳಿದ್ದಾರೆ. ಅಭ್ಯಂಗವೆಂದರೆ ಬೆಚ್ಚನೆಯ ಎಣ್ಣೆಯಿಂದ ಇಡೀ ದೇಹಕ್ಕೆ ಮಸಾಜ್ ಮಾಡಿಕೊಳ್ಳುವುದು ಎಂದು ಸಂಕ್ಷಿಪ್ತವಾಗಿ ಹೇಳಬಹುದು. ಹೀಗೆ ಮಾಡುವುದರಿಂದ ಮುಪ್ಪು ದೂರವಾಗುವುದಲ್ಲದೇ ಸಂಧಿಗಳ ನೋವು ಕೂಡಾ ಬರುವುದಿಲ್ಲ; ಬಂದಿದ್ದರೆ ಸವಕಳಿ ಶೀಘ್ರವಾಗಿ ಆಗುವುದಿಲ್ಲ. ಮಂಡಿ ನೋವು ಇರುವವರು ಕನಿಷ್ಠ ಮಂಡಿಗಳಿಗಾದರೂ ಎಣ್ಣೆಯ ಮಸಾಜ್ ಅನ್ನು ನಿತ್ಯವೂ ಮಾಡಿಕೊಳ್ಳಬೇಕು. ಹಾಗೆ ಮಸಾಜ್ ಮಾಡಿಕೊಂಡ ನಂತರ ಮಂಡಿಗಳ ಮೇಲೆ ಬಿಸಿ ನೀರನ್ನು ಸುರಿಯುವುದು ಅಥವಾ ಬಿಸಿ ನೀರಿನ ಪಟ್ಟಿ ಇಡುವುದನ್ನು ಮಾಡಬಹುದು. ಹುತ್ತದ ಮಣ್ಣು ಮತ್ತು ಸಾಸಿವೆಯ ಪುಡಿಗಳನ್ನು ಸೇರಿಸಿ ನೀರಿನಲ್ಲಿ ಕಲಸಿ ಬಿಸಿ ಮಾಡಿ ಲೇಪ ಮಾಡಿಕೊಂಡರೆ ತುಂಬಾ ಅನುಕೂಲವಾಗುತ್ತದೆ. ಸಂಧಿಗಳ ಸವಕಳಿ ಆಗಷ್ಟೇ ಪ್ರಾರಂಭವಾಗಿದ್ದರೆ ಈ ಸಮಸ್ಯೆಗೆಂದೇ ಇರುವ ಹಲವು ರೀತಿಯ ವ್ಯಾಯಾಮಗಳು ತುಂಬಾ ಅನುಕೂಲಕರ. ಸವಕಳಿ ಹೆಚ್ಚಾಗಿದ್ದರೆ ಸಂಧಿಗಳಿಗೆ ಪುಷ್ಟಿ ನೀಡುವಂತಹ ಆಹಾರೌಷಧಿಗಳು, ಪ್ರಕೃತಿ ಚಿಕಿತ್ಸೆ ಮತ್ತು ಪಂಚಕರ್ಮ ಚಿಕಿತ್ಸೆಗಳು ತುಂಬಾ ಅನುಕೂಲಕರ ಎಂಬುದರಲ್ಲಿ ಎರಡನೇ ಮಾತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net