

ಒಂದೇ ಛಾಯಾಚಿತ್ರ ಬಳಸಿಕೊಂಡು ಬೇರೆ ಬೇರೆ ಹೆಸರುಗಳಲ್ಲಿ ಮೊಬೈಲ್ ಸಿಮ್ ಪಡೆಯುವುದನ್ನು ಪತ್ತೆ ಮಾಡುವುದಕ್ಕಾಗಿ ದೂರಸಂಪರ್ಕ ಇಲಾಖೆ ಮುಖಚರ್ಯು ಪತ್ತೆ ತಂತ್ರಜ್ಞಾನವುಳ್ಳ ಎಎಸ್ಟಿಆರ್ ಉಪಕರಣವನ್ನು ರೂಪಿಸಿದೆ. ಸೈಬರ್ ಅಪರಾಧಕ್ಕಾಗಿ ಬಳಸುವ ಸಾಧ್ಯತೆ ಇರುವ ಲಕ್ಷಾಂತರ ಸಿಮ್ಳನ್ನು ಪತ್ತೆ ಹಚ್ಚಿ ನಿರ್ಬಂಧಿಸಲಾಗಿದೆ.
ಮೋಸದ ಉದ್ದೇಶಕ್ಕಾಗಿ ಬಳಸಬಹುದಾದ ಮೊಬೈಲ್ಫೋನ್ ಸಂಪರ್ಕಗಳನ್ನು ಪತ್ತೆ ಹಚ್ಚುವ ಮತ್ತು ನಿರ್ಬಂಧಿಸುವ ನಿಟ್ಟಿನಲ್ಲಿ ಕೇಂದ್ರ ದೂರಸಂಪರ್ಕ ಇಲಾಖೆ ವಿಶಿಷ್ಟ ವ್ಯವಸ್ಥೆಯೊಂದನ್ನು ರೂಪಿಸಿದೆ. ಟೆಲಿಕಾಂ ಸಿಮ್ ಚಂದಾದಾರರ ಪರಿಶೀಲನೆಗಾಗಿ ಕೃತಕ ಬುದ್ಧಿಮತ್ತೆ ಮತ್ತು ಮುಖಚರ್ಯೆ ಗುರುತಿಸುವಿಕೆ ಚಾಲಿತ ಪರಿಹಾರ (ಎಎಸ್ಟಿಆರ್) ಉಪಕರಣವನ್ನು ಇಲಾಖೆ ಅಭಿವೃದ್ಧಿಪಡಿಸಿದೆ.
ಈ ಉಪಕರಣದ ಮೂಲಕ ಟೆಲಿಕಾಂ ಆಪರೇಟರ್ಗಳ ಚಂದಾದಾರರ ಡೇಟಾಬೇಸ್ಗಳನ್ನು ಪರಿಶೀಲಿಸಲಾಗುತ್ತದೆ ಹಾಗೂ ಒಬ್ಬನೇ ವ್ಯಕ್ತಿ ಅನೇಕ ಸಂಪರ್ಕಗಳನ್ನು ಹೊಂದಿದ್ದಾನೆಯೇ, ಅಂದರೆ ಒಬ್ಬ ವ್ಯಕ್ತಿಯೇ ಹಲವು ಸಿಮ್ ಕಾರ್ಡ್ಗಳನ್ನು ಪಡೆದುಕೊಂಡಿದ್ದಾನೆಯೇ ಎಂಬುದನ್ನು ಪತ್ತೆ ಮಾಡುತ್ತದೆ. ಒಂದು ವೇಳೆ ಒಬ್ಬನೇ ವ್ಯಕ್ತಿ ಬೇರೆ ಬೇರೆ ಹೆಸರುಗಳಲ್ಲಿ ಹಲವು ಸಿಮ್ ಪಡೆದಿರುವುದು ಕಂಡುಬಂದರೆ ಹಾಗೂ ಸೈಬರ್ ವಂಚನೆಗಾಗಿ ಇವುಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇದ್ದರೆ ಅಂತಹ ಸಿಮ್ನ್ನು ನಿರ್ಬಂಧಿಸಲಾಗುತ್ತದೆ.
2012ರಲ್ಲಿ ಎಲ್ಲಾ ಟೆಲಿಕಾಂ ಆಪರೇಟರ್ಗಳಿಗೆ ಬಳಕೆದಾರರ ಛಾಯಾಚಿತ್ರಗಳನ್ನು ಒಳಗೊಂಡಂತೆ ತಮ್ಮಚಂದಾದಾರರ ಡೇಟಾಬೇಸ್ ಅನ್ನು ತನ್ನೊಂದಿಗೆ ಹಂಚಿಕೊಳ್ಳಬೇಕು ಎಂದು ದೂರಸಂಪರ್ಕ ಇಲಾಖೆ ಸೂಚಿಸಿತ್ತು. ಟೆಲಿಕಾಂ ಆಪರೇಟರ್ಗಳು ನೀಡುವ ಮೊಬೈಲ್ಫೋನ್ ಸಿಮ್ ಪಡೆದುಕೊಂಡವರ ಛಾಯಾಚಿತ್ರಗಳನ್ನು ಎಎಸ್ಟಿಆರ್ ಉಪಕರಣದ ಮೂಲಕ ಪರಿಶೀಲಿಸಿತು. ಎಎಸ್ಟಿಆರ್ ಯೋಜನೆಯನ್ನು ಏಪ್ರಿಲ್ 2021 ಮತ್ತು ಜುಲೈ 2021ರ ನಡುವೆ ಹರಿಯಾಣದಲ್ಲಿರುವ ದೂರಸಂಪರ್ಕ ಇಲಾಖೆಯ ಘಟಕದ ಮೂಲಕ ವಿನ್ಯಾಸಗೊಳಿಸಲಾಗಿದೆ. ಎಎಸ್ಟಿಆರ್ ಸಾಮರ್ಥ್ಯ ಹಾಗೂ ಕಾರ್ಯಸಾಧ್ಯತೆಯನ್ನು ಪರೀಕ್ಷಿಸಲು ಹರಿಯಾಣದ ಮೇವಾತ್ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಯೋಜನೆಯನ್ನು ಕೈಗೊಳ್ಳಲಾಯಿತು. ಈ ಪ್ರಾಯೋಗಿಕ ಯೋಜನೆ ಕೈಗೊಳ್ಳುವ ಮೊದಲು ಮೇವಾತ್ನಲ್ಲಿ ಅಂದಾಜು 16.69 ಲಕ್ಷ ಸಿಮ್ಗಳಿದ್ದವು. ಈ ಪೈಕಿ ಅಂದಾಜು 5 ಲಕ್ಷ ಸಿಮ್ಳನ್ನು ಮೋಸದಿಂದ ಪಡೆದುಕೊಳ್ಳಲಾಗಿದೆ ಎಂಬುದನ್ನು ಪತ್ತೆಮಾಡಲಾಯಿತು.
ದೂರಸಂಪರ್ಕ ಸಚಿವಾಲಯದ ಪ್ರಕಾರ, ಮೊದಲ ಹಂತದಲ್ಲಿ 87 ಕೋಟಿಗೂ ಹೆಚ್ಚು ಮೊಬೈಲ್ ಸಂಪರ್ಕಗಳ ವಿಶ್ಲೇಷಣೆಯನ್ನು ಎಎಸ್ಟಿಆರ್ ಉಪಕರಣ ಬಳಸಿ ನಡೆಸಲಾಗಿದೆ. ಇದರಲ್ಲಿ 40 ಲಕ್ಷಕ್ಕೂ ಹೆಚ್ಚು ಜನರು ಮೊಬೈಲ್ ಸಂಪರ್ಕಗಳನ್ನು ಪಡೆಯಲು ಒಂದೇ ಛಾಯಾಚಿತ್ರ ಬಳಸಿರುವ ಪ್ರಕರಣಗಳು ಪತ್ತೆಯಾಗಿವೆ. ಪರಿಶೀಲನೆಯ ನಂತರ, 36 ಲಕ್ಷಕ್ಕೂ ಹೆಚ್ಚು ಸಂಪರ್ಕಗಳನ್ನು ಟೆಲಿಕಾಂ ಆಪರೇಟರ್ಗಳು ಸ್ಥಗಿತಗೊಳಿಸಿದ್ದಾರೆ. ಈ ಸಂಖ್ಯೆಗಳನ್ನು ಆಯಾ ಪ್ಲಾಟ್ಫಾರ್ಮ್ಗಳಿಂದ ಬೇರ್ಪಡಿಸುವುದಕ್ಕಾಗಿ ಬ್ಯಾಂಕ್ಗಳು, ಪಾವತಿ ವ್ಯಾಲೆಟ್ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳೊಂದಿಗೆ ಈ ಪಟ್ಟಿಯನ್ನು ಹಂಚಿಕೊಳ್ಳಲಾಗಿದೆ.
ದೂರಸಂಪರ್ಕ ಇಲಾಖೆಯ ನವೀನ್ ಜಾಖರ್ ಅವರು ರಚಿಸಿದ ಕೇಸ್ ಸ್ಟಡಿ ಪೇಪರ್ ಪ್ರಕಾರ, ಸಿಮ್ ಚಂದಾದಾರರ ಛಾಯಾಚಿತ್ರಗಳಲ್ಲಿನ ಮುಖದ ಓರೆ ಮತ್ತು ಕೋನ, ಅಪಾರದರ್ಶಕತೆ ಮತ್ತು ಚಿತ್ರಗಳ ಗಾಢ ಬಣ್ಣವನ್ನು ಲೆಕ್ಕಹಾಕಲು ಕನ್ವಲ್ಯೂಷನಲ್ ನ್ಯೂರಲ್ ನೆಟ್ವರ್ಕ್ ಮಾದರಿಗಳನ್ನು ಬಳಸಿಕೊಂಡು ಎನ್ಕೋಡ್ ಮಾಡಲಾಗುತ್ತದೆ. ಅದರ ನಂತರ, ಡೇಟಾಬೇಸ್ನಲ್ಲಿರುವ ಎಲ್ಲಾ ಮುಖಗಳಿಗೆ ಹೋಲಿಕೆ ಕೈಗೊಳ್ಳಲಾಗುತ್ತದೆ. ಒಂದೇ ರೀತಿಯ ಮುಖಗಳನ್ನು ಒಂದು ಡೈರೆಕ್ಟರಿ ಅಡಿಯಲ್ಲಿ ಗುಂಪು ಮಾಡಲಾಗುತ್ತದೆ. ಎರಡು ಮುಖಗಳು ಕನಿಷ್ಠ 97.5 ಪ್ರತಿಶತದಷ್ಟು ಹೊಂದಿಕೆಯಾಗುವುದಾದರೆ ಎಎಸ್ಟಿಆರ್ ಮೂಲಕ ಒಂದೇ ಎಂದು ತೀರ್ವನಿಸಲಾಗುತ್ತದೆ. ಈ ಸ್ಟಡಿ ಪೇಪರ್ ಪ್ರಕಾರ, 1 ಕೋಟಿ ಚಿತ್ರಗಳ ಡೇಟಾಬೇಸ್ನಿಂದ 10 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಶಂಕಿತ ಒಂದು ಮುಖದ ಎಲ್ಲಾ ಸಿಮ್ಳನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಎಎಸ್ಟಿಆರ್ ಹೊಂದಿದೆ. ಮುಖಗಳ ಹೋಲಿಕೆ ಪರಿಶೀಲಿಸಿದ ನಂತರ, ಚಂದಾದಾರರ ಹೆಸರುಗಳಿಗೆ ಹೋಲಿಕೆ ಅಥವಾ ಅಂದಾಜು ಹೊಂದಾಣಿಕೆಗಳನ್ನು ಕಂಡುಹಿಡಿಯಲಾಗುತ್ತದೆ.
ಒಂದೇ ಗುರುತಿನ ಪುರಾವೆಯನ್ನು ಬಳಸಿಕೊಂಡು ಒಬ್ಬ ವ್ಯಕ್ತಿಯು ಕಾನೂನುಬದ್ಧವಾಗಿ ಒಂಬತ್ತು ಮೊಬೈಲ್ ಫೋನ್ ಸಂಪರ್ಕಗಳನ್ನು ತೆಗೆದುಕೊಳ್ಳಲು ದೂರಸಂಪರ್ಕ ಇಲಾಖೆ ಅನುಮತಿ ನೀಡಿದೆ. ಹೀಗಾಗಿ, ಎಎಸ್ಟಿಆರ್ ಉಪಕರಣವು ಮೊದಲನೆಯದ್ದಾಗಿ ಒಬ್ಬ ವ್ಯಕ್ತಿಯ ಛಾಯಾಚಿತ್ರವುಳ್ಳ ಒಂಬತ್ತಕ್ಕಿಂತ ಹೆಚ್ಚು ಸಂಪರ್ಕಗಳಿವೆಯೇ ಎಂದು ಹುಡುಕುತ್ತದೆ. ಒಬ್ಬನೇ ವ್ಯಕ್ತಿ ಬೇರೆ ಬೇರೆ ಹೆಸರುಗಳಲ್ಲಿ ಸಿಮ್ಳನ್ನು ತೆಗೆದುಕೊಂಡಿದ್ದಾನೆಯೇ ಎಂದು ನೋಡಲು ಡೇಟಾಬೇಸ್ ಮೂಲಕ ಹುಡುಕಾಟ ನಡೆಸುತ್ತದೆ. ಮೋಸದ ವಿಧಾನಗಳ ಮೂಲಕ ಮೊಬೈಲ್ಫೋನ್ ಸಂಖ್ಯೆಗಳನ್ನು ಪಡೆದಿದ್ದಾರೆ ಎಂದು ಕಂಡುಬಂದರೆ, ಅಂತಹ ಫೋನ್ಗಳನ್ನು ನಿರ್ಬಂಧಿಸಲು ಟೆಲಿಕಾಂ ಆಪರೇಟರ್ಗಳಿಗೆ ಪಟ್ಟಿಯನ್ನು ನೀಡಲಾಗುತ್ತದೆ.
ಒಬ್ಬ ವ್ಯಕ್ತಿಯ ಛಾಯಾಚಿತ್ರ ಬಳಸಿ 6,800 ಮೊಬೈಲ್ಫೋನ್ ಸಂಪರ್ಕ ಪಡೆದಿರುವುದನ್ನು ಎಎಸ್ಟಿಆರ್ ಉಪಕರಣವು ಪತ್ತೆ ಮಾಡಿದೆ. ಇನ್ನೊಂದು ಪ್ರಕರಣದಲ್ಲಿ, ಒಂದೇ ಛಾಯಾಚಿತ್ರ ಬಳಸಿಕೊಂಡು 5,300 ಸಂಪರ್ಕಗಳನ್ನು ಪಡೆದುಕೊಂಡಿರುವುದನ್ನು ಪತ್ತೆ ಮಾಡಲಾಗಿದೆ.