

Body Fat : ಇತ್ತೀಚಿನ ದಿನಗಳಲ್ಲಿ ದೇಹದಲ್ಲಿನ ಅನಗತ್ಯ ಬೊಜ್ಜನ್ನು ಕರಗಿಸಲು ಜನರು ಪಡುವ ಕಸರತ್ತುಗಳು ಅಷ್ಟಿಷ್ಟಲ್ಲ. ದೇಹ ಸುಂದರವಾಗಿ ಕಾಣಬೇಕೆಂದು ಶಸ್ತ್ರಚಿಕಿತ್ಸೆಯ ಮೂಲಕ ಕೊಬ್ಬನ್ನು ಕರಗಿಸಿಕೊಳ್ಳುವುದು ಒಂದು ರೀತಿಯ ಟ್ರೆಂಡ್ ಆಗುತ್ತಿದೆ. ಅದರೆ ಈ ರೀತಿಯಾಗಿ ದೇಹದಲ್ಲಿನ ಕೊಬ್ಬನ್ನು ಒಮ್ಮೆಲೆ ತೆಗೆಯುವುದರಿಂದ ಜೀವಕ್ಕೆ ಅಪಾಯ ಆಗಬಹುದು. ಹೀಗಾಗಿ ತೂಕ ಇಳಿಕೆಗೆ ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದು ಸೂಕ್ತವಾಗಿದೆ. ದೇಹದ ತೂಕ ಇಳಿಕೆಗೆ ಶಸ್ತ್ರಚಿಕಿತ್ಸೆಯೊಂದೇ ಮಾರ್ಗವಲ್ಲ. ಯಾವುದೇ ಅಪಾಯಗಳಿಲ್ಲದೆ ಆರೋಗ್ಯಯುತವಾಗಿಯೇ ತೂಕವನ್ನು ಕಡಿಮೆ ಮಾಡಿಕೊಳ್ಳಲು ನೈಸರ್ಗಿಕವಾಗಿ ಸಾಕಷ್ಟು ವಿಧಾನಗಳಿವೆ. ಅವು ಯಾವುದು ಗೊತ್ತಾ?
ನಾವು ಆರೋಗ್ಯಕರವಾಗಿರಲು ಪ್ರತಿದಿನ ನಡಿಗೆ ಉತ್ತಮ. ನಡಿಗೆಯಿಂದ ನಿಮ್ಮ ದೇಹದ ಕೊಬ್ಬನ್ನು ಕರಗಿಸಬಹುದು ಎಂದರೆ ನೀವು ನಂಬುವುದಿಲ್ಲ. ಆದರೆ ಅದು ನಿಜ. ದಿನನಿತ್ಯದ ನಡಿಗೆಯಿಂದ ಹಂತಹಂತವಾಗಿ ನೀವು ನಿಮ್ಮ ದೇಹದ ಕೊಬ್ಬನ್ನು ಕರಗಿಸಬಹುದು. ಆದರೆ ಹೆಚ್ಚಿನ ಜನರಿಗೆ ದಿನಕ್ಕೆ ಎಷ್ಟು ನಡೆಯಬೇಕು ಎಂದು ತಿಳಿದಿಲ್ಲ. ತೂಕ ಇಳಿಸಿಕೊಳ್ಳಲು ಅಥವಾ ಆರೋಗ್ಯ ಸುಧಾರಿಸಲು ಎಷ್ಟು ಗಂಟೆಗಳ ನಡಿಗೆ ಉತ್ತಮ ಎಂದು ಕೆಲವರಿಗೆ ಗೊತ್ತಿಲ್ಲ. ಆದರೆ ಒಂದು ದಿನದಲ್ಲಿ ಎಷ್ಟು ಕಿಮೀ ನಡೆಯಬೇಕು ಎಂದು ಇಲ್ಲಿದೆ ಸೂಕ್ತ ಮಾಹಿತಿ.
ಪ್ರತಿದಿನ ನಡೆಯಲು ಪ್ರಾರಂಭಿಸುತ್ತಿರುವವರಿಗೆ ದಿನಕ್ಕೆ 2 ರಿಂದ 3 ಕಿಮೀ ನಡೆಯುವುದು ಒಳ್ಳೆಯ ಗುರಿಯಾಗಿದೆ. ನಂತರ ನಡಿಗೆಯ ವೇಗವೂ ಹೆಚ್ಚಾಗುತ್ತದೆ. ಪ್ರತಿದಿನ 30 ನಿಮಿಷಗಳ ನಿಯಮಿತ ನಡಿಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ನಿಮ್ಮ ನಡಿಗೆ ಹೆಚ್ಚಾದಾಗ ನೀವು 45 ನಿಮಿಷದಿಂದ ಒಂದು ಗಂಟೆಯೊಳಗೆ 5 ರಿಂದ 7 ಕಿಮೀ ನಡೆಯಬಹುದು.
ತಜ್ಞರು 10,000 ಹೆಜ್ಜೆಗಳ ನಡಿಗೆ ಸೂಕ್ತ ಎಂದು ಹೇಳುತ್ತಾರೆ. ಇದು ಸುಮಾರು 8 ಕಿಲೋಮೀಟರ್‌ಗಳಿಗೆ ಸಮಾನವಾಗಿರುತ್ತದೆ. ಆದರೂ ಇತ್ತೀಚಿನ ಅಧ್ಯಯನಗಳು ದಿನಕ್ಕೆ 7,000 ರಿಂದ 8,000 ಹೆಜ್ಜೆಗಳು ನಡೆಯುವುದರಿಂದ ಸುಧಾರಿತ ಹೃದಯ ಆರೋಗ್ಯ, ಉತ್ತಮ ಮನಸ್ಥಿತಿ ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವಂತಹ ಗಮನಾರ್ಹ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ ಎಂದು ತಿಳಿಸಿದೆ.
ಚುರುಕಾದ ನಡಿಗೆಯಿಂದ ಹೃದಯ ಬಡಿತ ಹೆಚ್ಚಾಗುತ್ತದೆ, ಆದರೆ ಉಸಿರಾಟದ ತೊಂದರೆ ಇರುವುದಿಲ್ಲ. ಇದರಿಂದಾಗಿ ನೀವು ಸುಲಭವಾಗಿ ನಡೆಯಲು ಸಾಧ್ಯವಾಗುತ್ತದೆ. ಅಲ್ಲದೆ ಚುರುಕಾದ ನಡಿಗೆಯಿಂದ ಕ್ಯಾಲೊರಿಗಳು ವೇಗವಾಗಿ ಕರಗುತ್ತವೆ. ಸುಮಾರು 45 ನಿಮಿಷಗಳ ಕಾಲ ಚುರುಕಾದ ನಡಿಗೆಯಿಂದ ತೂಕ ಕಡಿಮೆಯಾಗುವುದಲ್ಲದೆ, ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಪ್ರತಿದಿನ ನಡೆಯುವುದರಿಂದ ತೂಕ ಕಡಿಮೆಯಾಗುವುದಲ್ಲದೆ ಹೃದಯದ ಆರೋಗ್ಯವೂ ಸುಧಾರಿಸುತ್ತದೆ ಮತ್ತು ಮಧುಮೇಹ ಮತ್ತು ಆಸ್ಟಿಯೊಪೊರೋಸಿಸ್‌ನಂತಹ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ನಡೆಯುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ, ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಮನಸ್ಥಿತಿ ಸುಧಾರಣೆಯಾಗುತ್ತದೆ. ದೈಹಿಕ ಆರೋಗ್ಯದ ಜೊತೆಗೆ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಮಾನಸಿಕವಾಗಿಯೂ ಆರೋಗ್ಯದಿಂದಿರಲು ನಡಿಗೆ ಸಹಕಾರಿಯಾಗಿದೆ.