ಜೀವನದಲ್ಲಿ ಗಳಿಸುವ ಅಂಕವೇ ಅಭೂತಪೂರ್ವ ಯಶಸ್ಸಿಗೆ ಕಾರಣನಾ?
ಮಕ್ಕಳಲ್ಲಿರುವ ಕೌಶಲ್ಯ ಮತ್ತು ಪ್ರತಿಭೆಗೆ ಪ್ರೋತ್ಸಾಹ ನೀಡುವುದು ಮುಖ್ಯ
ತಪ್ಪುಗಳಾದಾಗ ಟೀಕಿಸಿ, ಬೆದರಿಸುವ ಬದಲು ಆತ್ಮವಿಶ್ವಾಸ, ಧೈರ್ಯ ತುಂಬಿ
ಓದಿನ ಜತೆ ಜತೆಗೆ ಕ್ರೀಡೆ, ಸಂಗೀತ, ನೃತ್ಯ, ಚಿತ್ರಕಲೆಗಳಿಗೆ ಆದ್ಯತೆ ಕೊಡಿ
Skills: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಪರೀಕ್ಷೆ ಫಲಿತಾಂಶ ಹೊರಬಂದಾಗ ಎಲ್ಲರೂ ಮೊದಲಿಗೆ ಕೇಳುವುದೇ ಎಷ್ಟು ಬಂತು ಅಂಕ ಎಂದು. ನಿಮ್ಮ ಮಗ/ ಮಗಳಿಗೆ ಎಷ್ಟನೇ ಸ್ಥಾನ? ಯಾವ ಗ್ರೇಡ್ನಲ್ಲಿ ಉತ್ತೀರ್ಣ ಆಗಿದ್ದಾರೆ ಎಂದೆಲ್ಲ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸುತ್ತಾರೆ. ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು ಸಂತೋಷದಿಂದ ನನಗೆ ಇಷ್ಟು ಬಂದಿದೆ, ಅಷ್ಟು ಬಂದಿದೆ ಅಂತ ಹೇಳಿಕೊಳ್ಳುತ್ತಾರೆ. ಆದ್ರೆ, ಅದೇ ಕೆಲವು ವಿದ್ಯಾರ್ಥಿಗಳು ಕಡಿಮೆ ಅಂಕಗಳಿಂದ ತಲೆತಗ್ಗಿಸಿ ಮೌನಕ್ಕೆ ಶರಣಾಗುತ್ತಾರೆ.
ಅಲ್ಲಿಗೆ, ಜೀವನದಲ್ಲಿ ಅಂಕಗಳೇ ಅಂತಿಮವೇ? ಉತ್ತಮ ಅಂಕ ಗಳಿಸದಿದ್ದರೆ ಯಶಸ್ಸು ನೋಡಲು ಸಾಧ್ಯವೇ ಇಲ್ವಾ? ಎಂಬುದು ಒಂದು ಕೌತುಕದ ಪ್ರಶ್ನೆಯಾಗಿದೆ. ಉತ್ತಮ ಅಂಕ ಗಳಿಸಬೇಕು, ತರಗತಿಯಲ್ಲಿ ಮೊದಲ ಸ್ಥಾನ ಪಡೆಯಬೇಕು, ಉತ್ತಮ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು ಎಂಬ ನಿರೀಕ್ಷೆಯೊಂದಿಗೆ ವಿದ್ಯಾರ್ಥಿಗಳು ಹಗಲು-ರಾತ್ರಿ ಓದಿನಲ್ಲಿ ತೊಡಗುತ್ತಾರೆ. ಇನ್ನೂ ಕೆಲ ಮಕ್ಕಳು ಪೋಷಕರ ನಿರೀಕ್ಷೆ, ಶಿಕ್ಷಕರ ಒತ್ತಡ ಮತ್ತು ಸ್ಪರ್ಧಾತ್ಮಕ ವಾತಾವರಣದ ನಡುವೆಯೇ ಹೆಚ್ಚು ಅಂಕಗಳನ್ನು ಗಳಿಸಲು ಹೆಚ್ಚು ಶ್ರಮ ವಹಿಸುತ್ತಾರೆ. ಇದರ ಪರಿಣಾಮವಾಗಿ, ವಿದ್ಯಾರ್ಥಿಯ ಆಸಕ್ತಿ, ಪ್ರತಿಭೆ ಮತ್ತು ಇತರ ಸಾಮರ್ಥ್ಯಗಳಿಗಿಂತ ಪರೀಕ್ಷೆಯಲ್ಲಿ ಗಳಿಸುವ ಅಂಕಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ ಎಂಬುದು ಇಲ್ಲಿ ಗಮನಾರ್ಹ.
ಪರೀಕ್ಷೆಯಲ್ಲಿ ಪಡೆದ ಅಂಕಗಳು ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆಯನ್ನು ಅಳೆಯುವ ಪ್ರಮುಖ ಮಾನದಂಡವಾಗಿವೆ. ಆದರೆ, ಪದವಿ ಮುಗಿಸಿ ಉದ್ಯೋಗದ ಜಗತ್ತಿಗೆ ಕಾಲಿಟ್ಟಾಗಲೇ ತಿಳಿಯೋದು ಅಂಕಗಳಷ್ಟೇ ಸಾಕಾ ಅಥವಾ ಇನ್ನೂ ವಿಶೇಷ ಕೌಶಲ್ಯಗಳು ಬೇಕಾ ಎಂಬುದು. ವಿಷಯದ ಜ್ಞಾನವನ್ನು ಪ್ರಾಯೋಗಿಕವಾಗಿ ಬಳಸುವ ಸಾಮರ್ಥ್ಯ, ಸಂವಹನ ಕೌಶಲ್ಯ, ಸಮಸ್ಯೆಗಳನ್ನು ಪರಿಹರಿಸುವ ಗುಣ, ತಂತ್ರಜ್ಞಾನವನ್ನು ಬಳಸುವ ಅರಿವು, ಸೃಜನಶೀಲತೆ ಮತ್ತು ತಂಡದೊಂದಿಗೆ ಕೆಲಸ ಮಾಡುವ ಸಾಮರ್ಥ್ಯವು ಗಳಿಸಿದ ಅಂಕಗಳಿಗಿಂತ ಅತ್ಯವಶ್ಯಕ.
ಅಂಕಗಳು ಅವಕಾಶಗಳ ಬಾಗಿಲು ತೆರೆಯಬಹುದು. ಆದರೆ, ಆ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದನ್ನು ನಮ್ಮ ಜ್ಞಾನ, ಕೌಶಲ್ಯ, ಪರಿಶ್ರಮ ಮತ್ತು ನಿರಂತರ ಕಲಿಕೆಯ ಮನೋಭಾವ ನಿರ್ಧರಿಸುತ್ತದೆ. ಹಾಗಾದರೆ, ಯಶಸ್ಸಿನ ಪಯಣದಲ್ಲಿ ಅಂಕಗಳ ಪಾತ್ರ ಎಷ್ಟು? ಕೌಶಲ್ಯ ಮತ್ತು ಅನುಭವದ ಪಾತ್ರವೇನು? ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯ.
ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ವಿಶೇಷ ಪ್ರತಿಭೆ ಇದ್ದೇ ಇರುತ್ತದೆ. ಇದನ್ನು ಗುರುತಿಸಿ ಬೆಳೆಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ. ಪ್ರತಿಯೊಬ್ಬ ಮಗುವಿನ ಆಸಕ್ತಿ ಒಂದೇ ರೀತಿ ಇರೋದಿಲ್ಲ. ಕೆಲವರಿಗೆ ಓದಿನಲ್ಲಿ ಹೆಚ್ಚು ಆಸಕ್ತಿಯಿದ್ದರೆ, ಇನ್ನೂ ಕೆಲವರಿಗೆ ಕ್ರೀಡೆ, ಸಂಗೀತ, ನೃತ್ಯ, ಚಿತ್ರಕಲೆ, ಬರವಣಿಗೆ ಅಥವಾ ಹೊಸ ವಿಷಯಗಳನ್ನು ಕಲಿಯುವುದರಲ್ಲಿ ಆಸಕ್ತಿ ಇರಬಹುದು. ಪೋಷಕರು ಮಕ್ಕಳ ಆಸಕ್ತಿಯನ್ನು ಅರ್ಥಮಾಡಿಕೊಂಡು, ಅವರಿಗೆ ಸೂಕ್ತವಾದ ಅವಕಾಶ ಮತ್ತು ಪ್ರೋತ್ಸಾಹ ನೀಡುವುದು ಅಗತ್ಯ.
ಜೀವನದ ಪಯಣದಲ್ಲಿ ಸೋಲು- ಗೆಲುವುಗಳು ತೀರ ಸಾಮಾನ್ಯ. ಆದರೆ, ಯಾವುದು ಅಂತಿಮವಲ್ಲ. ಮಕ್ಕಳು ಪ್ರಯತ್ನಿಸುವಾಗ ಸಣ್ಣ ತಪ್ಪುಗಳು ಅಥವಾ ವೈಫಲ್ಯಗಳು ಎದುರಾಗಬಹುದು. ಅಂತಹ ಸಂದರ್ಭದಲ್ಲಿ ಅವರನ್ನು ಟೀಕಿಸಿ ಅವರ ಆತ್ಮವಿಶ್ವಾಸವನ್ನು ಕುಗ್ಗಿಸುವ ಬದಲು ಪ್ರಯತ್ನವನ್ನು ಮೆಚ್ಚಿ, ಮತ್ತೆ ಪ್ರಯತ್ನಿಸುವ ಧೈರ್ಯ ನೀಡಬೇಕು. ಇತರ ಮಕ್ಕಳೊಂದಿಗೆ ಹೋಲಿಕೆ ಮಾಡದೆ, ಅವರ ಸ್ವಂತ ಬೆಳವಣಿಗೆಯನ್ನು ಗಮನಿಸುವುದು ಅತೀ ಮುಖ್ಯ. ಪೋಷಕರಿಂದ ಸಿಗುವ ಪ್ರೋತ್ಸಾಹವು ಮಕ್ಕಳಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ, ಸ್ವತಂತ್ರ ಚಿಂತನೆ ಮತ್ತು ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ ಬೆಳೆಯುತ್ತದೆ.
ಇದನ್ನೂ ಓದಿ: ಈ ವಾರ ಒಂದಲ್ಲ, ಎರಡಲ್ಲ 11 ಸೌತ್ ಸಿನಿಮಾಗಳು ತೆರೆಗೆ; 8 ಚಿತ್ರಗಳು ಒಟಿಟಿಯಲ್ಲಿ ರಿಲೀಸ್! ಇಲ್ಲಿದೆ ನೋಡಿ ಪಟ್ಟಿ | OTT Films
ಅನೇಕ ಬಾರಿ ಶಾಲಾ-ಕಾಲೇಜಿನಲ್ಲಿ ಅಥವಾ ಇತರೆ ಶೈಕ್ಷಣಿಕ ವಿಷಯಗಳಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾದಿದ್ದವರು ಸಹ ಬೇರೆ ಬೇರೆ ಕೌಶಲ್ಯಗಳಿಂದ ಸಾಧನೆಗೈದಿದ್ದಾರೆ. ಅಂಕಗಳು ಮತ್ತು ಕೌಶಲ್ಯವನ್ನು ಪರಸ್ಪರ ವಿರುದ್ಧವಾಗಿ ನೋಡುವುದಕ್ಕಿಂತ ಎರಡರ ಪಾತ್ರವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಅಂಕಗಳು ಶಿಕ್ಷಣದ ಸಾಧನೆಯನ್ನು ತೋರಿಸಿದರೆ, ಕೌಶಲ್ಯವು ಕಲಿತ ಜ್ಞಾನವನ್ನು ಕಾರ್ಯರೂಪಕ್ಕೆ ತರುವ ಸಾಮರ್ಥ್ಯವನ್ನು ಎತ್ತಿಹಿಡಿಯುತ್ತದೆ. ಅಂತಿಮವಾಗಿ ವ್ಯಕ್ತಿಯ ಯಶಸ್ಸಿಗೆ ಕೌಶಲ್ಯವು ಹೇಗೆ ಕೊಡುಗೆ ನೀಡುತ್ತದೆ ಮತ್ತು ಅದನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ ಎಂಬುದು ಅವರವರ ಸಕ್ಸಸ್ನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ,(ಏಜೆನ್ಸೀಸ್).