

ವಕ್ರವಾಗಿರುವ ಹಲ್ಲುಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸುವುದರಿಂದ ಸುಂದರವಾಗಿ ಕಾಣುವುದು ಅಷ್ಟೇ ಅಲ್ಲ ಸಂಭಾವ್ಯ ದಂತ ಮತ್ತು ದೈಹಿಕ ಸಮಸ್ಯೆಗಳನ್ನು ದೂರಗೊಳಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೂಡ ಸಹಾಯಕ. ವಕ್ರವಾಗಿದ್ದರೇನಂತೆ, ಅದರಿಂದ ಸಮಸ್ಯೆ ಇಲ್ಲ ಎಂದುಕೊಂಡು ಉಡಾಫೆ ಮಾಡಿ ಚಿಕಿತ್ಸೆ ಪಡೆಯದೆ ಇರುವರೂ ಈ ಇದ್ದಾರೆನ್ನಿ. ಆದರೆ ಗೊತ್ತಿರಲಿ ಅಂಥವರಿಗೆ ಅಪಾಯ ತಪ್ಪಿದ್ದಲ್ಲ.
ವಕ್ರದಂತದ ಸಮಸ್ಯೆ: ಹೆಚ್ಚು ಜನರಲ್ಲಿ ವಕ್ರದಂತದಿಂದ ಉಂಟಾಗುವ ಸಾಮಾನ್ಯ ಸಮಸ್ಯೆ ಎಂದರೆ ಹಲ್ಲು ಹುಳುಕಾಗುವುದು. ಏಕೆಂದರೆ ವಕ್ರವಾದ ಹಲ್ಲುಗಳನ್ನು ಶುಚಿಗೊಳಿಸುವುದು ಸುಲಭವಲ್ಲ ಮತ್ತು ಅವುಗಳ ಸಂಧಿಯಲ್ಲಿ ಸೇರುವ ಆಹಾರ ಪದಾರ್ಥಗಳನ್ನು ತೆಗೆಯುವುದು ಕಷ್ಟ. ಹಲ್ಲುಜ್ಜುವುದು ಮತ್ತು ಫ್ಲೋಸಿಂಗ್ ಅನ್ನು ಸರಿಯಾಗಿ ಮಾಡಲಾಗದ ಕಾರಣ ಹಲ್ಲು ಹುಳುಕಾಗುವುದು ಮತ್ತು ಬಾಯಿಯ ದುರ್ವಾಸನೆಯೂ ಉಂಟಾಗುವುದು. ಇನ್ನು ವಕ್ರದಂತ ಕೆಲವು ಗಂಭೀರ ಸಮಸ್ಯೆ ಗಳನ್ನು ಉಂಟುಮಾಡುತ್ತದೆ. ಉದಾಹರಣೆಗೆ ಹಲ್ಲುಗಳಿಗೆ ದವಡೆಯಲ್ಲಿ ಸಾಕಷ್ಟು ಸ್ಥಳವಿಲ್ಲದಿದ್ದಲ್ಲಿ ಒಂದರ ಮೇಲೊಂದು ಹಲ್ಲು ಓವರ್ಲ್ಯಾಪ್ ಆಗಬಹುದು, ಅಲ್ಲದೆ ತಿರುಚಿಕೊಂಡಿರಬಹುದು. ಇಂತಹ ಸಂದರ್ಭದಲ್ಲಿ ಹಲ್ಲುಗಳ ನಡುವೆ ಒತ್ತಡ ಹೆಚ್ಚಾಗಿ ಅಸಹಜವಾಗಿ ಹಲ್ಲುಗಳ ಸವೆತ ಉಂಟಾಗಬಹುದು ಮತ್ತು ಮುಖದ ಸ್ನಾಯುಗಳು ಹಾಗೂ ದವಡೆಗಳಿಗೆ ಹಾನಿ ಉಂಟಾಗುತ್ತದೆ ಜೊತೆಗೆ ಟಿಎಂಜೆ ಸಮಸ್ಯೆಗಳು ಉಂಟಾಗಬಹುದು.
ಹಲ್ಲುಗಳ ಜೋಡಣೆಯನ್ನು ಸರಿಪಡಿಸದಿದ್ದರೆ ಅವು ಕ್ರಮೇಣ ಜರುಗಿ ಸಮಸ್ಯೆಯನ್ನು ಹೆಚ್ಚಿಸುತ್ತವೆ. ಒಂದಕ್ಕೊಂದು ಉಜ್ಜಿಕೊಳ್ಳುವುದರಿಂದ ಹಲ್ಲುಗಳಲ್ಲಿ ಬಿರುಕು ಉಂಟಾಗುವುದು, ಹಲ್ಲುಗಳು ಮುರಿತಕ್ಕೊಳಗಾಗುವುದು ಮತ್ತು ಎನಾಮೆಲ್ನ ಸವೆತವು ಉಂಟಾಗುತ್ತದೆ. ವಕ್ರದಂತವನ್ನು ಸರಿಪಡಿಸದಿದ್ದಲ್ಲಿ ಹಲ್ಲು ಮತ್ತು ದವಡೆಯ ಕಾರ್ಯಕ್ಷಮತೆಯು ಕಡಿಮೆಗೊಳ್ಳುವುದು. ಚಿಕಿತ್ಸಾ ಕ್ರಮಗಳು ಸಾಂಪ್ರದಾಯಿಕ ಬ್ರೇಸ್ ಅಥವಾ ಅಲೈನರ್ಸ್ ಅನ್ನು ಒಳಗೊಂಡಿದ್ದು ಸಮಸ್ಯೆಯ ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ. ಬ್ರೇಸ್ (ಲೋಹ ಅಥವಾ ಸೆರಾಮಿಕ್) ಗಳು ಸಾಂಪ್ರದಾಯಿಕ ಶೈಲಿಯ ಚಿಕಿತ್ಸೆಯಾಗಿರುತ್ತದೆ.
ಅಲೈನರ್ಸ್ ಸಾಮಾನ್ಯವಾಗಿ ಪಾರದರ್ಶಕ ಟ್ರೇ ಗಳಂತಿದ್ದು ಹಲ್ಲುಗಳಿಗೆ ಸರಿಯಾಗಿ ಹೊಂದಿಕೊಂಡಿರುತ್ತವೆ. ಇವುಗಳನ್ನು ಹಾಕಿ ತೆಗೆಯಬಹುದು. ಚಿಕಿತ್ಸೆಯೂ ಹೆಚ್ಚು ಆರಾಮದಾಯಕ, ಆದರೆ ಸಾಂಪ್ರದಾಯಿಕ ಬ್ರೇಸ್ಗಳು ಸಮಸ್ಯೆಯ ಪ್ರಮಾಣ ಹೆಚ್ಚಿದ್ದಲ್ಲಿ ಅನುಕೂಲಕರ. ಅಲೈನರ್ಸ್ ಚಿಕಿತ್ಸಾ ಪದ್ಧತಿ ಸುಲಭ ಮತ್ತು ಅನುಕೂಲಕರವಾಗಿದ್ದು ಟ್ರೇ ಗಳ ಸೆಟ್ ಕೊಡಲಾಗುತ್ತದೆ. ಪ್ರತಿಯೊಂದು ಟ್ರೇ ಅನ್ನು ನಿಗದಿತ ಅವಧಿಗೆ ಧರಿಸಬೇಕು ಮತ್ತು ಇವು ಹಲ್ಲುಗಳನ್ನು ಕ್ರಮೇಣವಾಗಿ ಜರುಗಿಸುವುದರ ಮೂಲಕ ವಕ್ರದಂತ ಸಮಸ್ಯೆಯನ್ನು ಸರಿಪಡಿಸುತ್ತದೆ.
ಏಕೆ ಅಲೈನರ್ಸ್?: ಬಹುತೇಕ ವಕ್ರದಂತ ಸಮಸ್ಯೆಗಳಿಗೆ ಅಲೈನರ್ಸ್ ಚಿಕಿತ್ಸೆ ನೀಡಬಹುದು. ಆದರೆ ಕೆಲವು ಸಮಸ್ಯೆಗಳಿಗೆ ಬ್ರೇಸ್ಗಳನ್ನೇ ಉಪಯೋಗಿಸಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಎರಡೂ ಆಯ್ಕೆಗಳು ಲಭ್ಯವಿದ್ದು ಜೀವನಶೈಲಿ ಮತ್ತು ಯಾವುದು ಹೆಚ್ಚು ಸೂಕ್ತ ಎಂಬುದನ್ನು ದಂತ ವೈದ್ಯರೊಂದಿಗೆ ರ್ಚಚಿಸಿ ನಿರ್ಧರಿಸಬೇಕಾಗುತ್ತದೆ. ಅಲೈನರ್ಸ್ಗಳು ಬಾಯಿಯಲ್ಲಿ ಗೋಚರಿಸದ ಕಾರಣ ಯುವ ಜನತೆ ಹೆಚ್ಚಿನ ಒಲವು ತೋರಿಸುತ್ತಾರೆ. ಆಹಾರ ಸೇವಿಸುವಾಗ ಅಲೈನರ್ಸ್ ಅನ್ನು ತೆಗೆದು ತಿನ್ನುವುದರಿಂದ ಯಾವುದೇ ರೀತಿಯ ಆಹಾರವನ್ನು ಸೇವಿಸಬಹುದು. ಎಂದಿನಂತೆ ಹಲ್ಲುಗಳನ್ನು ಶುಚಿಗೊಳಿಸಲು ಯಾವುದೇ ತೊಂದರೆ ಇರುವುದಿಲ್ಲ. ಹಾಗಾಗಿ ಹಲ್ಲುಗಳ ಹುಳುಕಿನ ಸಮಸ್ಯೆಯನ್ನು ತಡೆಯಬಹುದು.
ಚಿಕಿತ್ಸೆಯು ಪೂರ್ವ ನಿಯೋಜಿತವಾಗಿರುವುದರಿಂದ ವೈದ್ಯರೊಂದಿಗಿನ ಭೇಟಿಗಳು ತುಂಬಾ ಕಡಿಮೆಯಾಗಿರುತ್ತವೆ. ಹಾಗಾಗಿ ಚಿಕಿತ್ಸೆಗೆಂದು ಹೆಚ್ಚು ಸಮಯ ಮೀಸಲಿಡುವುದು ತಪ್ಪುತ್ತದೆ. ಇದನ್ನು ಬಿಟ್ಟು ಸ್ವಲ್ಪ ಮಟ್ಟಿಗೆ ನೋವು ಉಂಟಾಗಬಹುದು. ಆದರೆ ತುಟಿ ಅಥವಾ ಕೆನ್ನೆಗಳ ಒಳಭಾಗದಲ್ಲಿ ಹೆಚ್ಚು ಕಿರಿಕಿರಿ ಇರುವುದಿಲ್ಲ. ಅಲೈನರ್ಸ್ ಆಗಲಿ ಬ್ರೇಸ್ಗಳಾಗಲಿ ಬಾಯಿಯ ಆರೋಗ್ಯ, ಸೌಂದರ್ಯ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದು ಚಿಕಿತ್ಸೆಯು ಯಶಸ್ವಿಯಾಗಲು ವೈದ್ಯರು ನೀಡುವ ಸೂಚನೆಯನ್ನು ಸರಿಯಾಗಿ ಪಾಲಿಸುವುದು ಮುಖ್ಯ.