

ಯಾವುದೇ ಮಂಗಳಕಾರ್ಯ ನಡೆಯುವಾಗಲೂ ಕನಿಷ್ಠ ಎರಡು ವೀಳ್ಯದೆಲೆ, ಒಂದು ಅಡಿಕೆ ಬೇಕೇ ಬೇಕು. ಆದರೆ ತಂಬಾಕಿನ ಸ್ನೇಹದಿಂದಾಗಿ ವಿಶೇಷ ಔಷಧೀ ಗುಣಗಳನ್ನು ಹೊಂದಿರುವ ತುಂಬಾ ಪ್ರಯೋಜನಕಾರಿಯಾಗಿರುವ ವೀಳ್ಯದೆಲೆಯ ಹೆಸರು ಕೂಡ ಹಾಳಾಗಿದೆ. ಆಯುರ್ವೆದ ಗ್ರಂಥಗಳು ವೀಳ್ಯದೆಲೆಯನ್ನು ವಿವಿಧ ರೀತಿಯ ಗುಣಗಳನ್ನು ಹೊಂದಿರುವ ವಿಶೇಷ ಔಷಧವೆಂದು ಹೊಗಳಿವೆ. ‘ಭಾವಪ್ರಕಾಶ ನಿಘಂಟು’ವಿನ ಪ್ರಕಾರ ಇದಕ್ಕೆ ತೀಕ್ಷ್ಣ ಮತ್ತು ಉಷ್ಣ ಗುಣಗಳಿದ್ದು, ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ ಬಾಯಿಯ ರುಚಿಯನ್ನು ಹೆಚ್ಚಿಸುತ್ತದೆ. ಕಫ ಮತ್ತು ವಾತ ದೋಷಗಳನ್ನು ನಿವಾರಿಸಿ ಬಾಯಿಯ ದುರ್ಗಂಧವನ್ನು ತೆಗೆಯುತ್ತದೆ. ಉತ್ತಮವಾದ ಸ್ವರವನ್ನು ಕೊಡಲು ಮತ್ತು ಅಜೀರ್ಣ ಸಮಸ್ಯೆ ನಿವಾರಿಸಲು ಉಪಕಾರಿ. ಹಾಗಾಗಿಯೇ ಇದನ್ನು ಊಟವಾದ ನಂತರ ಮೆಲ್ಲುವ ರೂಢಿ ಇರುವುದು. ಆದರೆ ಅತಿಯಾದ ಸೇವನೆಯಿಂದ ಉಷ್ಣ ಹೆಚ್ಚಾಗಿ ರಕ್ತ ಮತ್ತು ಪಿತ್ತಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಬರುತ್ತವೆ ಎಂದು ಆಯುರ್ವೆದ ಗ್ರಂಥಗಳು ಹೇಳುತ್ತವೆ.
ಇದು ಬಾಯಿಯಲ್ಲಿನ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಿ ಹಲ್ಲು, ವಸಡು, ಗಂಟಲಿಗೆ ಸಂಬಂಧಪಟ್ಟ ತೊಂದರೆಗಳು ಬರದಂತೆ ನೋಡಿಕೊಳ್ಳಲು -ಮೌತ್ ಫ್ರೆಶ್ನರ್ ಥರ - ಕೆಲಸಮಾಡುತ್ತದೆ. ಅತಿಯಾಗಿ ಸಿಹಿಯನ್ನು ಸೇವಿಸಿದ ನಂತರ, ಹೊಟ್ಟೆ ತುಂಬಾ ಊಟ ಮಾಡಿದ ನಂತರ ಮತ್ತು ಜೀರ್ಣಕ್ಕೆ ಕಷ್ಟವಾಗುವಂತಹ ಆಹಾರಗಳನ್ನು ಸೇವಿಸಿದ ನಂತರ ಇದನ್ನು ಸೇವಿಸುವುದು ಹಿತಕಾರಿ. ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುವುದು, ಮಲಬದ್ಧತೆಯಂತಹ ತೊಂದರೆಗಳನ್ನು ಇದು ನಿವಾರಿಸುತ್ತದೆ. ಇದರಲ್ಲಿ ಆಂಟಿಆಕ್ಸಿಡೆಂಟ್ ಗಳು ಹೇರಳವಾಗಿವೆ, ಆದ್ದರಿಂದ ಹಲವಾರು ರೀತಿಯ ಕಾಯಿಲೆಗಳು ಬರುವುದನ್ನು ತಡೆಯುತ್ತದೆ. ವಿಶೇಷವಾಗಿ ಡಯಾಬಿಟೀಸ್ ಮತ್ತು ಕ್ಯಾನ್ಸರ್ ಬರದಂತೆ ತಡೆಯುವಲ್ಲಿ ಇದು ಸಹಕಾರಿ. ಇದರಲ್ಲಿ ಯುಜೆನಾಲ್ನಂತಹ ಉರಿಯೂತ ನಿರೋಧಕ ಅಂಶಗಳು ಇರುವ ಕಾರಣದಿಂದ ಸಂಧಿಗಳಲ್ಲಿ ನೋವು, ಬಾವು, ತಲೆನೋವು, ಮೈಕೈ ನೋವು, ದೇಹದಲ್ಲಿ ಭಾರವೆನಿಸುವುದು ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ.
ಕಫವನ್ನು ಹೊರಹಾಕುವ ಗುಣವಿರುವ ಕಾರಣ ಇದು ಪದೇ ಪದೇ ಕಾಡುವ ನೆಗಡಿ, ಕೆಮ್ಮು, ಅಸ್ತಮಾದಂತಹ ಸಮಸ್ಯೆಗಳಲ್ಲಿ ಅನುಕೂಲಕರ. ಕೆಲವು ಸಂಶೋಧನೆಗಳ ಪ್ರಕಾರ ಇದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸುತ್ತದೆ. ಹೀಗಾಗಿ ಪ್ರತಿದಿನ ಊಟವಾದ ನಂತರ ಇದನ್ನು ಸೇವಿಸುವುದರಿಂದ ಅನುಕೂಲವಾಗುತ್ತದೆ. ಕೆಲ ವರ್ಷಗಳ ಹಿಂದೆ ನಡೆದ ಒಂದು ಸಂಶೋಧ ನೆಯ ಪ್ರಕಾರ ನಮ್ಮ ಕರುಳಿನಲ್ಲಿ ಕೆಟ್ಟ ಕೊಬ್ಬನ್ನು ಹೀರಿಕೊಳ್ಳುವಿಕೆಯನ್ನು ನಿಯಂತ್ರಿಸುತ್ತದೆ. ಗುಣವಾಗದ ಗಾಯಗಳು ಮತ್ತು ಚರ್ಮ ರೋಗಗಳನ್ನು ಕಡಿಮೆ ಮಾಡಲು ಇದು ಸಹಾಯಮಾಡುತ್ತದೆ. ಇದರ ಸೇವನೆಯಿಂದ ಆಮದೋಷ ಕಡಿಮೆಯಾಗುವ ಕಾರಣ ಜೀರ್ಣಾಂಗವ್ಯೂಹ, ಶ್ವಾಸಾಂಗವ್ಯೂಹ, ಮಾಂಸಖಂಡಗಳು, ಮೂಳೆಗಳು, ಸಂಧಿಗಳು ಮತ್ತು ನರಗಳಿಗೆ ಸಂಬಂಧಪಟ್ಟ ಬೇರೆ ರೀತಿಯ ಸಮಸ್ಯೆಗಳಲ್ಲಿ ಇದು ಅನುಕೂಲಕರ.
ಹೇಗೆ ಸೇವಿಸಬೇಕು?
ಆರೋಗ್ಯವಾಗಿರುವವರು ಅಥವಾ ಕಫ ಮತ್ತು ವಾತದೋಷಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಅನುಭವಿಸುತ್ತಿರುವವರು ದಿನಕ್ಕೊಮ್ಮೆ ಊಟವಾದ ನಂತರ ವೀಳ್ಯದೆಲೆಯ ಜೊತೆಗೆ ಸ್ವಲ್ಪ ಸುಣ್ಣ, ಅಡಿಕೆ, ಸೋಂಪು, ಚಿಕ್ಕ ಚೂರು ಜ್ಯೇಷ್ಠಮಧು, ಕಾಚು, ಸಣ್ಣ ಚೂರು ಲವಂಗ ಮುಂತಾದವುಗಳನ್ನು ಹಾಕಿ ಸೇವಿಸಬಹುದು. ತಂಬಾಕು ಸೇರಿದರೆ ಮಾತ್ರ ಇದು ವಿಷ ಹಾಗೂ ಕ್ಯಾನ್ಸರ್ ಕಾರಕವಾಗುವುದು. ಆದರೆ ವೀಳ್ಯದೆಲೆಯ ಉಷ್ಣ, ತೀಕ್ಷ್ಣ ಗುಣಗಳ ಕಾರಣದಿಂದ ಇದನ್ನು ದುರ್ಬಲರು, ಗರ್ಭಿಣಿಯರು, ಕೃಶದೇಹಿಗಳು, ಬೇರೆ ಬೇರೆ ರೀತಿಯ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಸೇವಿಸುವ ಮೊದಲು ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು ಒಳ್ಳೆಯದು. ಆದರೆ, ಅತಿಯಾದ ಸೇವನೆ ಬೇಡ. ವೀಳ್ಯದೆಲೆಯಲ್ಲಿ ವಿಟಮಿನ್ ಸಿ ನಮಗೆ ಉತ್ತಮ ಪ್ರಮಾಣದಲ್ಲಿ ದೊರೆಯುತ್ತದೆ. ಬೀಟಾ ಕೆರೋಟಿನ್ (ಇದೇ ಮುಂದೆ ವಿಟಮಿನ್ ಎ ಆಗುವುದು) ಕೂಡ ಸಾಕಷ್ಟು ಪ್ರಮಾಣದಲ್ಲಿ ಇದರಲ್ಲಿ ಇದೆ.
ಥಿಯಾಮಿನ್, ರೈಬೊಫ್ಲೆವಿನ್, ನಿಯಾಸಿನ್, ಫೋಲೆಟ್ನಂತಹ ಬಿ ವಿಟಮಿನ್ಗಳು ಕೂಡ ಸಿಗುತ್ತವೆ. ಒಂದಿಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಂ, ಮೆಗ್ನೀಶಿಯಂ, ಕಬ್ಬಿಣ, ಫಾಸ್ಪರಸ್, ಜಿಂಕ್, ತಾಮ್ರ, ಸೆಲೇನಿಯಂ ಇದರಲ್ಲಿ ಇವೆ. ಒಟ್ಟಿನಲ್ಲಿ ತುಂಬಾ ಶುಭಕರವೆಂದು ಗುರುತಿಸಲ್ಪಟ್ಟ ಈ ವೀಳ್ಯದೆಲೆಯು ದೇಹದ ಒಳಗೆ ಕೂಡ ಶುಭವಾದ ಕೆಲಸಗಳನ್ನೇ ಮಾಡುತ್ತದೆ. ಆದರೆ ಇಂತಹ ಅದ್ಭುತ ಗುಣಕಾರೀ ವೀಳ್ಯದೆಲೆಯನ್ನು ಋಣಾತ್ಮಕ ಗುಣವನ್ನು ಹೊಂದಿರುವ ದ್ರವ್ಯದ ಜೊತೆಗೆ ಸೇವಿಸಿ ವೀಳ್ಯದೆಲೆಯ ಉತ್ತಮ ಗುಣಗಳನ್ನು ನಾಶಪಡಿಸಬಾರದು ಎಂಬುದನ್ನು ನೆನಪಿಟ್ಟುಕೊಳ್ಳಬೇಕು.