ರಾತ್ರಿ ಹೊತ್ತು ಬೇಗ ನಿದ್ರಿಸಬೇಕಾ? ಹಾಗಿದ್ರೆ ಈ 3 ವಿಷಯವನ್ನು ತಪ್ಪದೇ ಅನುಸರಿಸಿ | Sleep

ವಿಜಯವಾಣಿ - 2025-01-27T102743.339
Published on

Sleep Problem: ಹಗಲಿನಲ್ಲಿ ಚೆನ್ನಾಗಿ ನಿದ್ರಿಸುವವರಿಗೆ ರಾತ್ರಿ ಹೊತ್ತು ನಿದ್ರೆ ಬರುವುದಿಲ್ಲ. ಇದೇ ಕಾರಣಕ್ಕೆ ಅನೇಕರು ನಮಗೆ ಸರಿಯಾಗಿ ನಿದ್ದೆ ಆಗ್ತಿಲ್ಲ. ಇದರ ಹಿಂದಿರುವ ಕಾರಣವೇನು? ಎಂದು ತಲೆಕೆಡಿಸಿಕೊಳ್ಳುತ್ತಾರೆ. ಅಸಲಿಗೆ ಇದು ಸಮಸ್ಯೆಯೇ ಅಲ್ಲ. ಸಮಸ್ಯೆ ಅನಿಸಿದರೂ ಅದಕ್ಕೆ ಕಾರಣ ನಿಮ್ಮ ಹಗಲಿನ ನಿದ್ರೆ. ಸೂರ್ಯ ಉದಯವಾದ ಸಮಯದಲ್ಲಿ ನಿದ್ರಿಸಿ, ರಾತ್ರಿ ಬರುತ್ತಿಲ್ಲ ಎನ್ನುವುದು ಅತೀ ಬುದ್ಧಿವಂತರ ಲಕ್ಷಣ ಎಂದೇ ಹೇಳಬಹುದು. ಇನ್ನೂ ಬೆಳಗ್ಗೆಯಿಂದ ದಣಿಯುವಷ್ಟು ಕೆಲಸ ಮಾಡಿ, ರಾತ್ರಿ ವೇಳೆ ಆರಾಮದಾಯಕವಾಗಿ ಕಣ್ಣು ಮುಚ್ಚಲು ಸಾಧ್ಯವಾಗದ ಪರಿಸ್ಥಿತಿ ಅನೇಕರದ್ದು. ಈ ಸಮಸ್ಯೆಗೆ ನಿಮ್ಮ ಸ್ಮಾರ್ಟ್​ಫೋನ್​ನಲ್ಲೇ ಉತ್ತರ ಇದೆ, ಸರಳ ಉಪಾಯವೂ ಇದೆ.

20ರ ದಶಕದಲ್ಲಿ ಕೇವಲ ಕೀಪ್ಯಾಡ್​ ಫೋನ್​​ಗಳು ಹೆಚ್ಚು ಚಾಲ್ತಿಯಲ್ಲಿತ್ತು. ಆದರೆ, ಇಂದು ಅದರ ಅಸ್ತಿತ್ವ ಕಣ್ಮರೆಯಾಗಿದೆ. ಅದರ ಬದಲಿಗೆ ಸ್ಮಾರ್ಟ್​ಫೋನ್​ಗಳು ರಾರಾಜಿಸುತ್ತಿವೆ. ಚಿಕ್ಕ ಮಕ್ಕಳ ಕೈಯಿಂದ ಹಿಡಿದು ವಯೋವೃದ್ಧರ ಅಂಗೈಯಲ್ಲಿಯೂ ಆರು ಇಂಚಿನ ಸ್ಮಾರ್ಟ್​ಫೋನ್​ ಕಾಣಸಿಗುತ್ತವೆ. ಬೆಳಗ್ಗೆ ಎದ್ದ ಕ್ಷಣದಿಂದ ಫೋನ್​ ನೋಡಲು ಶುರು ಮಾಡಿದ್ರೆ, ರಾತ್ರಿ ಮಲಗುವವರೆಗೂ ಬಹುತೇಕರು ಫೋನ್​ ಉಪಯೋಗಿಸುತ್ತಾರೆ. ಇದರಿಂದ ಕೇವಲ ಕಣ್ಣಿಗೆ ಮಾತ್ರ ತೊಂದರೆಯಾಗದೆ, ನಿದ್ರಾ ವ್ಯವಸ್ಥೆಗೂ ಅಡಚಣೆಯಾಗುತ್ತದೆ. ರಾತ್ರಿ ವೇಳೆ ಹೆಚ್ಚಿನ ಸಮಯ ಸ್ಮಾರ್ಟ್​ಫೋನ್​ನಲ್ಲಿ ಮುಳುಗುವುದರಿಂದ ನಿಮ್ಮ ನಿದ್ರೆ ಮತ್ತಷ್ಟು ಮುಂದಕ್ಕೆ ಹೋಗುತ್ತದೆಯೇ ವಿನಃ ನಿದ್ರಿಸಲು ಸಾಧ್ಯವಿಲ್ಲ.

ಫೋನ್​ ಬಳಸದೆ ದಿಂಬಿನ ಕೆಳಗಿಟ್ಟು ಮಲಗಿದರೂ ನಿದ್ರೆ ಬರುತ್ತಿಲ್ಲ. ಇದಕ್ಕೆ ಏನು ಮಾಡೋದು ಎಂದು ಹಲವರು ಪ್ರಶ್ನಿಸುತ್ತಾರೆ. ರಾತ್ರಿ ವೇಳೆ ಸ್ಮಾರ್ಟ್​ಫೋನ್​ ಹೆಚ್ಚಾಗಿ ಬಳಸಿದ್ರೆ ನಿದ್ರೆ ಬರೋದಿಲ್ಲ ಎನ್ನುವುದು ಸರಿ. ಆದ್ರೆ, ಮೊಬೈಲ್​ ಪಕ್ಕಕ್ಕಿಟ್ಟು ನಿದ್ರಿಸಲು ಬಯಸಿದರೂ ಮಲಗಲು ಸಾಧ್ಯವಾಗಲ್ಲ. ಇದಕ್ಕೇನು ಮಾಡೋದು ಎಂಬ ಪ್ರಶ್ನೆಗೆ ನಿಮ್ಮ ಫೋನ್​ಗಳಲ್ಲೇ ಉತ್ತರವಿದೆ. ಹೇಗೆ ಅಂತೀರಾ? ಮುಂದೆ ಓದಿ.

ಮಲಗುವ ಸಮಯ

ಮೊಬೈಲ್​ ಪಕ್ಕಕ್ಕಿಟ್ಟು ಅಥವಾ ದಿಂಬಿನ ಕೆಳಗಿಟ್ಟು ಮಲಗಿದರೆ, ಮೆಸೇಜ್​ ನೋಟಿಫಿಕೇಶನ್​ ಶಬ್ದ ಮತ್ತು ರಿಂಗ್​ ಟೋನ್ ನಿಮ್ಮ ನಿದ್ದೆಯನ್ನು ಅಡ್ಡಿಪಡಿಸುತ್ತದೆ. ನಿದ್ರಿಸಲು ಬಿಡದೆ ಭಂಗ ಮಾಡುತ್ತದೆ. ಇದಕ್ಕೆ ಸರಳ ಮಾರ್ಗ, ನಿಮ್ಮ ಫೋನ್‌ನಲ್ಲಿರುವ 'ಡೋಂಟ್ ಡಿಸ್ಟರ್ಬ್' ಅಥವಾ 'ಸ್ಲೀಪ್' ಸೆಟ್ಟಿಂಗ್​ ಅನ್ನು ಮಲಗುವ ಸಮಯದಲ್ಲಿ ಆನ್​ ಮಾಡಿಕೊಳ್ಳಿ. ಇದರಿಂದ ಯಾವ ಮೆಸೇಜ್ ಅಥವಾ ಇನ್ನಿತರ ಶಬ್ದಗಳು ನಿಮ್ಮ ಮೊಬೈಲ್​ನಿಂದ ಹೊರಬರುವುದಿಲ್ಲ. ಈ ಮೂಲಕ ನೀವು ಆರಾಮದಾಯಕ ನಿದ್ರೆಯನ್ನು ಮಾಡಬಹುದು.

ಫಿಲ್ಟರ್

ರಾತ್ರಿಯಲ್ಲಿ ಫೋನ್‌ ಉಪಯೋಗಿಸುತ್ತಿದ್ದರೆ ನಿಮ್ಮ ಕಣ್ಣುಗಳು ಒಂದು ಹಂತದಲ್ಲಿ ನೋವಿನಿಂದ ಕೂಗಲು ಶುರು ಮಾಡುತ್ತದೆ. ಇಂತಹ ನೋವನ್ನು ನೀವು ಗಮನಿಸಿರಬಹುದು. ಅದು ನಿಮ್ಮ ಫೋನ್‌ನ ಪರದೆಯಿಂದ ಹೊರಬರುವ ನೀಲಿ ಬೆಳಕಿನಿಂದಾಗಿರುತ್ತದೆ. ಈ ನೀಲಿ ಬೆಳಕು ನಿಜವಾಗಿಯೂ ನಿಮ್ಮ ನಿದ್ರೆಯನ್ನು ಹಾಳುಮಾಡುತ್ತದೆ. ಅದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಫೋನ್​ನಿಂದ ಹೂರಬರುವ ನೀಲಿ ಬೆಳಕನ್ನು ಫಿಲ್ಟರ್ ಮಾಡಲು ಸೆಟ್ಟಿಂಗ್ ಬದಲಿಸಿಕೊಳ್ಳಿ. ಮಲಗುವ ಸಮಯದಲ್ಲಿ ಫೋನ್​ನ ನೀಲಿ ಬೆಳಕಿನ ಫಿಲ್ಟರ್ ಆನ್ ಮಾಡಿಕೊಳ್ಳಿ. ಇದನ್ನು ಖಚಿತಪಡಿಸಿಕೊಳ್ಳಲು ಬೇಕಿದ್ರೆ ಟೈಮರ್ ಕೂಡ ಹೊಂದಿಸಿಕೊಳ್ಳಬಹುದು.

ಹೆಚ್ಚಿನ ಬೆಳಕು

ನಿಮ್ಮ ಮೊಬೈಲ್​ ಪರದೆಯಿಂದ ಹೊರ ಸೂಸುವ ನೀಲಿ ಬೆಳಕನ್ನು ಕಡಿಮೆ ಮಾಡಲು ಇನ್ನೊಂದು ಮಾರ್ಗವೆಂದರೆ ನಿಮ್ಮ ಸ್ಕ್ರೀನ್​ನ ಬ್ರೈಟ್ನೆಸ್​ ಅನ್ನು ಕಡಿಮೆ ಮಾಡಿಕೊಳ್ಳಿ. ಈ ಬೆಳಕು ಕೇವಲ ನಿಮ್ಮ ಕಣ್ಣಿಗೆ ಮಾತ್ರ ಹಾನಿ ಮಾಡೋದಿಲ್ಲ. ಬದಲಿಗೆ ನಿಮ್ಮ ನಿದ್ರೆಯ ಚಕ್ರವನ್ನು ಕೂಡ ಏರುಪೇರು ಮಾಡುತ್ತದೆ. ಇದರಿಂದ ಸರಿಯಾದ ನಿದ್ರೆ ಒದಗುವುದಿಲ್ಲ. ಬ್ರೈಟ್ನೆಸ್ ಸೆಟ್ಟಿಂಗ್​ನಲ್ಲಿ ಬೆಳಕಿನ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದರಿಂದ ಕಣ್ಣಿಗೆ, ನಿದ್ರೆಗೆ ಒಳ್ಳೆಯದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net