

ನವದೆಹಲಿ: ದೀಪಾವಳಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಒಂದು ದಿನದ ನಂತರ ಗಾಳಿಯಲ್ಲಿ ಭಾರೀ ಹೊಗೆ ಕಾಣಿಸಿಕೊಂಡಿದ್ದು, ಸೋಮವಾರ ಬೆಳಗ್ಗೆ ಅಧಿಕ ವಾಯುಮಾಲಿನ್ಯಕ್ಕೀಡಾದ ವಿಶ್ವದ 10 ನಗರಗಳಲ್ಲಿ ನವದೆಹಲಿ ಜತೆಗೆ ಭಾರತದ ಇನ್ನೆರಡು ನಗರಗಳು ಸೇರಿಕೊಂಡಿವೆ.
ನವ ದೆಹಲಿಯು ಮತ್ತೆ ಅಗ್ರ ಸ್ಥಾನ ಪಡೆದುಕೊಂಡಿತು. ಸ್ವಿಸ್ ಗ್ರೂಪ್ ಐಕ್ಯೂಎಐಆರ್ ಪ್ರಕಾರ, ಇದು 420 ರ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಅಂಕಿಅಂಶವನ್ನು ಹೊಂದಿದ್ದು, 'ಅಪಾಯಕಾರಿ' ವರ್ಗವಾಗಿದೆ.
ಇದರ ಜತೆಗೆ 196 ರ ಎಕ್ಯೂಐ ಯೊಂದಿಗೆ ಕೋಲ್ಕತ್ತಾ ನಾಲ್ಕನೇ ಸ್ಥಾನದಲ್ಲಿದ್ದು ಅಗ್ರ 10 ರಲ್ಲಿ ಸೇರಿಕೊಂಡಿದೆ. ವಾಣಿಜ್ಯ ನಗರಿ ಮುಂಬೈ 163 ರ ಎಕ್ಯೂಐನೊಂದಿಗೆ ಎಂಟನೇ ಸ್ಥಾನದಲ್ಲಿದೆ.
ಭಾನುವಾರ ರಾತ್ರಿಯಿಂದ ಹೊಗೆಯ ದಪ್ಪನೆಯ ಪದರವು ನವದೆಹಲಿಯಲ್ಲಿ ಹರಡಲು ಪ್ರಾರಂಭಿಸಿತು, ಮಧ್ಯರಾತ್ರಿಯ ನಂತರ ಅದರ ಎಕ್ಯೂಐ ಆತಂಕಕಾರಿ ಎಂಬಂತೆ 680 ಎಕ್ಯೂಐಗೆ ತಲುಪಿತು.
ಶುಕ್ರವಾರದಂದು ಅಲ್ಪಾವಧಿ ಮಳೆಯಿಂದಾಗಿ ದೆಹಲಿಯಲ್ಲಿ ವಾಯು ಮಾಲಿನ್ಯ ಸ್ವಲ್ಪ ಮಟ್ಟಿಗೆ ಸುಧಾರಿಸಿತ್ತು. ಆದರೆ ಹಬ್ಬಕ್ಕೆ ಪಟಾಕಿ ಹಚ್ಚಿದ್ದರಿಂದ ಮತ್ತೆ ಮಾಲಿನ್ಯ ಹೆಚ್ಚಾಗಿ ವಿಶ್ವದ ವಾಯು ಮಾಲಿನ್ಯದ ನಗರಗಳ ಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನ ಪಡೆದುಕೊಂಡಿದೆ.
ಪ್ರತಿ ವರ್ಷ ಅಧಿಕಾರಿಗಳು ರಾಷ್ಟ್ರರಾಜಧಾನಿಯಲ್ಲಿ ಪಟಾಕಿಗಳ ಮೇಲೆ ನಿಷೇಧವನ್ನು ಹೇರುತ್ತಾರೆ, ಆದರೆ ಅಪರೂಪವಾಗಿ ಮಾತ್ರ ಆ ನಿಷೇಧಗಳು ಜಾರಿಯಾಗುತ್ತವೆ. ಭಾರತದಲ್ಲಿ ಗಾಳಿಯ ಗುಣಮಟ್ಟವು ಪ್ರತಿ ವರ್ಷ ಚಳಿಗಾಲದ ಸಂದರ್ಭಕ್ಕೆ ಹದಗೆಡುತ್ತದೆ. ಈ ಕಾಲದಲ್ಲಿ ಮಂಜು ಸುರಿಯುವುದರಿಂದ ವಾಹನಗಳು, ಕಾರ್ಕಾನೆಗಳು ಮತ್ತು ನಿರ್ಮಾಣಗಳ ಧೂಳು, ಕೃಷಿ ತ್ಯಾಜ್ಯ ಸುಡುವ ಹೊಗೆ ಸೇರಿ ಮಾಲಿನ್ಯ ಅಧಿಕವಾಗಗುತ್ತದೆ. ದೀಪಾವಳಿ ಸಂದರ್ಭಕ್ಕೆ ಪಟಾಕಿ ಸಿಡಿಸುವುದರಿಂದ ವಾತಾವರಣ ಮತ್ತಷ್ಟು ಹದಗೆಡುತ್ತದೆ.