

ಬೆಂಗಳೂರು: ಸೈಟ್ ಖರೀದಿಸಲು ಮುಂದಾದ ಸ್ಯಾಂಡಲ್ವುಡ್ನ ನಾಯಕನಟ ಮಯೂರ್ ಪಟೇಲ್ಗೆ ಕೊಲೆಬೆದರಿಕೆ ಎದುರಾಗಿದೆ. ಸೈಟ್ ನೋಡಲು ಸ್ನೇಹಿತನೊಂದಿಗೆ ಹೋಗಿದ್ದ ಮಯೂರ್ ಪಟೇಲ್ಗೆ ಅಪರಿಚಿತರು ಬೆದರಿಕೆ ಹಾಕಿದ್ದು, ಪ್ರಕರಣ ಸಂಬಂಧ ಎಚ್ಎಸ್ಆರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಬೇಗೂರ್ ಬಳಿಯ ಪರಂಗಿಪಾಳ್ಯದ ಬಿಬಿಎಂಪಿ ಖಾತೆ ನಂ. 275/16/18ರ ಸೈಟ್ ಖರೀದಿಸಲು ಮುಂದಾಗಿದ್ದ ಮಯೂರ್, ಎಂ.ಎಸ್. ಸುಬ್ರಹ್ಮಣ್ಯ ಎಂಬವರಿಂದ ಕರಾರು ಮಾಡಿಕೊಂಡಿದ್ದರು. ಹೀಗಾಗಿ ಜನವರಿ 22ರಂದು ಗೆಳೆಯನೊಂದಿಗೆ ಸೈಟ್ ನೋಡಲು ಪರಂಗಿಪಾಳ್ಯಕ್ಕೆ ಹೋಗಿದ್ದರು.
ಆದರೆ ಮಯೂರ್ ಪಟೇಲ್ ಕರಾರು ಮಾಡಿಕೊಂಡಿದ್ದ ಸೈಟ್ಗೆ ಯಾರೋ ಕಾಂಪೌಂಡ್ ಹಾಕಿದ್ದು, ಅಲ್ಲಿಗೆ ಭೇಟಿ ನೀಡಿದ್ದ ವೇಳೆ ಎದುರಾದ ಅಪರಿಚಿತರು, ಈ ಸೈಟ್ ಅನಂತರಾಮರೆಡ್ಡಿ ಹಾಗೂ ಗನ್ ಮಂಜಣ್ಣ ಎನ್ನುವವರಿಗೆ ಸೇರಿದೆ. ನೀವು ಇಲ್ಲಿಗೆ ಬಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಬೆದರಿಕೆ ಹಾಕಿದ್ದರು.
ಆಗ ಮಯೂರ್ ಪಟೇಲ್ ಅನಂತರಾಮರೆಡ್ಡಿ ಎಂಬಾತನನ್ನು ಸಂಪರ್ಕಿಸಿದ್ದರು. ಆಗ ಆ ಜಾಗ ನಾನು ನನ್ನ ಮಗನ ಹೆಸರಿಗೆ ದಾನಪತ್ರ ಮಾಡಿಕೊಟ್ಟಿದ್ದೇನೆ. ಅಲ್ಲಿಗೆ ಯಾರನ್ನೂ ಬಿಡುವುದಿಲ್ಲ. ನೀನು ಆ ಜಾಗಕ್ಕೆ ಬಾ, ಆಗ ನಾವು ಯಾರು ಎಂಬುದು ಗೊತ್ತಾಗುತ್ತದೆ ಎಂದು ಅನಂತರಾಮರೆಡ್ಡಿ ಬೆದರಿಕೆ ಹಾಕಿದ್ದಾಗಿ ಮಯೂರ್ ದೂರಿನಲ್ಲಿ ತಿಳಿಸಿರುತ್ತಾರೆ.
ನಾನು ಅಗ್ರಿಮೆಂಟ್ ಮಾಡಿಕೊಂಡಿರುವ ಸೈಟ್ಗೆ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿದ್ದಾರೆ. ನಕಲಿ ದಾಖಲಾತಿ ಸೃಷ್ಟಿಸಿಕೊಂಡು ಅನಂತರಾಮರೆಡ್ಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಅನಂತರಾಮರೆಡ್ಡಿ, ಆತನ ಪುತ್ರ ಮಂಜುನಾಥ ರೆಡ್ಡಿ ಹಾಗೂ ಇತರ ನಾಲ್ವರ ವಿರುದ್ಧ ಎಚ್ಎಸ್ಆರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.