

ಕಡಬ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರ ಎಂಬ ವಿಷಯದ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಉಪನ್ಯಾಸ ನೀಡಿದ ಧಾರ್ಮಿಕ, ಸಾಮಾಜಿಕ ಮುಖಂಡ ಕಶೆಕೋಡಿ ಸೂರ್ಯನಾರಾಯಣ ಭಟ್, ಸಾರ್ಥಕ ಜೀವನದ ಸಾಕಾರವಾಗಬೇಕಾದರೆ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಾಧನೆಗಳನ್ನು ನಿರಂತರವಾಗಿ ಮಾಡುತ್ತಾ ಮಹತ್ತರವಾದದ್ದನ್ನು ಸಾಧಿಸಬೇಕು ಎಂದರು.
ಪ್ರಸಕ್ತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಕಲಿಯಲು ಮತ್ತು ಸಾಧಿಸಲು ಅನೇಕ ಅವಕಾಶಗಳಿವೆ. ಸಂದರ್ಭಗಳಿಗೆ ಯೋಗ್ಯವಾಗುವ ಧರಿಸು, ಉತ್ತಮ ಶಾರೀರಿಕ, ಮಾನಸಿಕ ಆರೋಗ್ಯ,ಉತ್ತಮ ಮಾತುಗಳು, ವಿದ್ಯೆ ಮತ್ತು ವಿನಯ ಎಂಬ 5 ಗುಣಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತವೆ. ಯುವಜನರು ರಾಷ್ಟ ನಿರ್ಮಾಣದ ಗುರುತರವಾದ ಜವಾಬ್ದಾರಿಯನ್ನು ಹೊತ್ತುಕೊಂಡು ಮುನ್ನಡೆಯಬೇಕು. ಆಗ ಭಾರತ ವಿಶ್ವಗುರುವಾಗಲು ಸಾಧ್ಯ ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಲಕ್ಷ್ಮೀನಾರಾಯಣ ರಾವ್ ಅತೂರು ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್.ಉಪಸ್ಥಿತರಿದ್ದರು. ಪ್ರಾಂಶುಪಾಲ ಚಂದ್ರಶೇಖರ್ ಕೆ ಸ್ವಾಗತಿಸಿದರು. ಪ್ರೌಢಶಾಲಾ ಹಿರಿಯ ಶಿಕ್ಷಕ ಪ್ರವೀಣ್ ಕುಮಾರ್ ವಂದಿಸಿದರು.