

ದಾವಣಗೆರೆ: ಪತಿಯನ್ನು ಕೊಲೆ ಮಾಡಿದ್ದ ಪತ್ನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು, 15 ಸಾವಿರ ರೂಪಾಯಿ ದಂಡವನ್ನೂ ತೆರುವಂತೆ ಆದೇಶಿಸಿದೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮ ನಿವಾಸಿ ರೇಣುಕಾ (29) ಎಂಬಾಕೆ ತನ್ನ ಪತಿ ಬಂಗಿ ನರಸಿಂಹಪ್ಪನನ್ನು ಕೊಲೆ ಮಾಡಿದ್ದು, ಪ್ರಕರಣ ಸಂಬಂಧ ಇಂದು ತೀರ್ಪು ನೀಡಿದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ಈ ಆದೇಶವನ್ನಿತ್ತಿದೆ. ನ್ಯಾಯಾಧೀಶೆ ಕೆ.ಬಿ. ಗೀತಾ ಈ ಆದೇಶವನ್ನು ಹೊರಡಿಸಿದ್ದಾರೆ.
ಪತಿ ನರಸಿಂಹಪ್ಪ ಮದ್ಯವ್ಯಸನಿಯಾಗಿದ್ದು, ಆಗಾಗ ಕುಡಿದು ಬರುತ್ತಿದ್ದುದಲ್ಲದೇ ಪತ್ನಿಯನ್ನು ಪೀಡಿಸುತ್ತಿದ್ದ. ಪತಿಯ ದೌರ್ಜನ್ಯದಿಂದ ಬೇಸತ್ತಿದ್ದ ರೇಣುಕಾ, 2018ರ ಏಪ್ರಿಲ್ 8ರಂದು ಕುಡುಗೋಲಿನಿಂದ ಪತಿಯ ಕುತ್ತಿಗೆ ಕತ್ತರಿಸಿ ಕೊಲೆ ಮಾಡಿದ್ದಳು. ಬಳಿಕ ಯಾರಿಗೂ ತಿಳಿಯಬಾರದು ಎಂದು ಶವವನ್ನು ಶೌಚದ ಗುಂಡಿಯಲ್ಲಿ ಹಾಕಿ ಮುಚ್ಚಿದ್ದಳು. ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಸರ್ಕಾರಿ ಅಭಿಯೋಜಕ ಎಸ್.ವಿ. ಪಾಟೀಲ್ ವಾದ ಮಂಡಿಸಿದ್ದು, ವಿಚಾರಣೆ ನಡೆದು ಇದೀಗ ಅಪರಾಧ ಸಾಬೀತಾಗಿದೆ.