ಇಂತಹದ್ದೊಂದು ಪತ್ರ ಮನ್ಮಥ ಎಸ್. ಶೆಟ್ಟಿ ಹೆಸರಿನಲ್ಲಿ ಸಿಎಂಗೆ ಬರೆಯಲಾಗಿದೆ. ಪತ್ರದಲ್ಲಿ ಸ್ವವಿಳಾಸ, ಮೊಬೈಲ್ ನಂಬರ್ ಇದ್ದು, ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಅಜೆಕಾರ್ ಅಂಚೆ, ಮರ್ಣೆ ಗ್ರಾಮ, ಎಡಪುತ್ತೆ, ನೇಮೊಟ್ಟು ಮನೆಯ ಮನ್ಮಥ ಶೆಟ್ಟಿ ಎಂದಿದೆ. 2020ರ ಫೆಬ್ರವರಿ 13ರಂದು ಈ ಪತ್ರ ಬರೆದಿದ್ದರೂ ಅದು ಈಗ ವೈರಲ್ ಆಗಿದೆ. ತಾನೇ ಕಲ್ಕೀ ಅವತಾರ ಪುರುಷ, ಧರ್ಮಸ್ಥಳ ಅಣ್ಣಪ್ಪಸ್ವಾಮಿ ಎಂದು ಈ ಮನ್ಮಥ ಶೆಟ್ಟಿ ಹೇಳಿಕೊಂಡಿದ್ದಾನೆ! 'ನಾನು 1975ರ ಆಗಸ್ಟ್ನಿಂದ 1986ರ ಜೂನ್ವರೆಗೂ ಅಜೆಕಾರು ಪೇಟೆಯಲ್ಲಿ ವ್ಯಾಪಾರ ಮಾಡಿಕೊಂಡಿದ್ದೆ. ವ್ಯಾಪಾರ ಚೆನ್ನಾಗಿತ್ತು. ಇದರ ಮೇಲೆ ಅಸೂಯೆಗೊಂಡ ನನ್ನ ಮಾವ ಮತ್ತು ಚಿಕ್ಕಮ್ಮ ಮಾಟ ಮಂತ್ರ ಮಾಡಿಸಿ ನಷ್ಟ ಉಂಟಾಗುವಂತೆ ಮಾಡಿದರು. ಅಲ್ಲದೆ ಮನೆ ಇಲ್ಲದಂತೆಯೂ ಮಾಡಿ ಸಾಯಿಸಲು ಯತ್ನಿಸುತ್ತಿದ್ದಾರೆ. ನನ್ನನ್ನು ಕೊಲ್ಲಲು ಉಡುಪಿ ಮೂಲದ, ಮುಂಬೈನ ಹೋಟೆಲ್ ಮಾಲೀಕರೊಬ್ಬರು ನನ್ನ ಮಾವ-ಚಿಕ್ಕಮ್ಮನೊಂದಿಗೆ ಲಕ್ಷಗಟ್ಟಲೇ ಹಣ ಖರ್ಚು ಮಾಡುತ್ತಿದ್ದಾರೆ. ಪರಿಣಾಮ, ಲೋಕದಲ್ಲೇ ದೊಡ್ಡ ದೇವರಾದ ನಾನೀಗ ಭಿಕಾರಿ ಆಗಿದ್ದೇನೆ. ಧರ್ಮ ಸ್ಥಾಪನೆ ಮಾಡಿ ಲೋಕ ರಕ್ಷಣೆ ಮಾಡುವ ಜವಾಬ್ದಾರಿ ನನ್ನದು. ಆದರೆ ಶತ್ರುಗಳು ಮಾಟ ಮಂತ್ರ ಮಾಡಿಸಿದ್ದರಿಂದ ಲೋಕರಕ್ಷಣೆ ಮಾಡಲು ನನಗೆ ಸಾಧ್ಯವಾಗಲಿಲ್ಲ. ನನ್ನ ವೈರಿಗಳಾದ ಮಾವ-ಚಿಕ್ಕಮ್ಮ-ಮುಂಬೈನ ಹೋಟೆಲ್ ಮಾಲೀಕನನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು. ನನ್ನಿಂದ ಧರ್ಮ ಸ್ಥಾಪನೆ ಆಗಬೇಕು. ಇಲ್ಲವಾದಲ್ಲಿ ಇಡೀ ಲೋಕವೇ ನಾಶವಾಗುತ್ತೆ!' ಎಂದು ಪತ್ರದಲ್ಲಿ ವಿವರಿಸಿದ್ದಾನೆ!