ಧರ್ಮಸ್ಥಳ ಪ್ರಕರಣ ಸಂಬಂಧ ಸಿಜೆಐಗೆ ಪತ್ರ : ನಿವೃತ್ತ ನ್ಯಾಯಾಧೀಶರ ತನಿಖೆಗೆ ಸುಪ್ರೀಂ ಕೋರ್ಟ್ ವಕೀಲರಿಂದ ಆಗ್ರಹ

Published on

ನವದೆಹಲಿ: ಧರ್ಮಸ್ಥಳದ ಸುತ್ತಮುತ್ತಲೂ ನೂರಾರು ಶವಗಳನ್ನು ಹೂತಿರುವ ಬಗ್ಗೆ ಚಿನ್ನಯ್ಯ ಎಂಬ ವ್ಯಕ್ತಿ ನೀಡಿರುವ ದೂರಿನನ್ವಯ ಕರ್ನಾಟಕ ರಾಜ್ಯ ಸರ್ಕಾರ ಎಸ್ ಐ ಟಿ ರಚಿಸಿ ತನಿಖೆ ನಡೆಸಿರುವುದು ಮೇಲ್ನೋಟಕ್ಕೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಸತ್ಯಾಸತ್ಯತೆ ತಿಳಿಯಲು ಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ನಿವೃತ್ತ ನ್ಯಾಯಾಧೀಶರ ನೇತ್ರತ್ವದಲ್ಲಿ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಹಿರಿಯ ವಕೀಲ ರೋಹಿತ್ ಪಾಂಡೆ, ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರಿಗೆ ಏಳು ಪುಟಗಳ ಪತ್ರ ಬರೆದಿರುವ ರೋಹಿತ್ ಪಾಂಡೆ, ಧರ್ಮಸ್ಥಳ ಪ್ರಕರಣದ ಬಗ್ಗೆ ವಿವರಣೆ ನೀಡಿದ್ದು, ಹಲವು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಚಿನ್ನಯ್ಯ ಎಂಬ ವ್ಯಕ್ತಿ ಧರ್ಮಸ್ಥಳ ಸುತ್ತ ಮುತ್ತಲೂ ಹಲವಾರು ಶವಗಳನ್ನು ಹೂತಿರುವುದಾಗಿ ಜುಲೈ 3ರಂದು ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬಳಿಕ ಜುಲೈ 11ರಂದು ನ್ಯಾಯಾಧೀಶರ ಮುಂದೆಯೂ ಇದೇ ಹೇಳಿಕೆ ನೀಡಿರುತ್ತಾರೆ. ಈ ಸಂಬಂಧ ರಾಜ್ಯ ಸರ್ಕಾರ, ಈ ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಿರುತ್ತದೆ. ಚಿನ್ನಯ್ಯ, ತಾನು ಹೂತಿದ್ದ ಶವಗಳ ಜಾಗಗಳನ್ನು ತೋರಿಸಿದ್ದ ಆಧಾರದ ಮೇರೆಗೆ ಪೊಲೀಸರು ತನಿಖೆ ನಡೆಸಿದಾಗ ಕೆಲ ಸ್ಥಳಗಳಲ್ಲಿ ಅಸ್ತಿ ಪಂಜರದ ಕೆಲ ಭಾಗ, ಬುರುಡೆ, ಬಟ್ಟೆ ಹಾಗೂ ಇನ್ನಿತರ ವಸ್ತುಗಳ ಪತ್ತೆಯಾಗಿದ್ದು, ಇವುಗಳನ್ನು ಅಧಿಕಾರಿಗಳು ಸಾಕ್ಷಿಗಳು ಎಂದು ಪರಿಗಣಿಸಿದ್ದಾರೆ.

ಧರ್ಮಸ್ಥಳ ಪ್ರಕರಣ ಸಂಬಂಧ ರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಸಹ ವರದಿಯಾಗಿದ್ದು, ಮೇಲ್ನೋಟಕ್ಕೆ ರಾಜ್ಯ ಸರ್ಕಾರ ರಚಿಸಿರುವ ಎಸ್ ಐ ಟಿ ಅಧಿಕಾರಿಗಳ ಮೇಲೂ ಸಹ ಸರ್ಕಾರದಿಂದಲೇ ಒತ್ತಡ ಹೇರಿದಂತೆ ಗೋಚರಿಸುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ಧರ್ಮಸ್ಥಳ ಪ್ರಕರಣದಲ್ಲಿ ಪಾರದರ್ಶಕತೆಯಿಂದ ತನಿಖೆ ನಡೆಯಲು ಹಾಗೂ ಸತ್ಯಾಂಶ ತಿಳಿಯಲು ನಿವೃತ್ತ ನ್ಯಾಯಾಧೀಶರ ನೇತ್ರತ್ವದಲ್ಲಿ ತನಿಖೆ ನಡೆಸುವ ಅವಶ್ಯಕತೆಯಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net