

ಕೋಲಾರ: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ಕೆಟ್ಟ ಪರಿಸ್ಥಿತಿಯಲ್ಲಿದೆ. ಅಧಿಕಾರ ನಿರ್ವಹಿಸಲಾಗದೆ ಪರಿತಪ್ಪಿಸುತ್ತಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಜೆಡಿಎಸ್ನಿಂದ ಗುರುವಾರ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ, ಜನರೊಂದಿಗೆ ಜನತಾದಳ ಹಾಗೂ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.
ಸದಸ್ಯತ್ವ ಪ್ರವಾಸ ಆದನಂತರ ಮುಂದೇನು ಎಂಬುದರ ಬಗ್ಗೆ ಆಲೋಚಿಸಿದ್ದೇವೆ. ಪ್ರತಿ ಕ್ಷೇತ್ರದ ಮುಖಂಡರು ವಿಶ್ರಮಿಸದೆ ಸತತವಾಗಿ ಸಂಟನೆಗೆ ಒತ್ತು ನೀಡಬೇಕು ಎಂದು ತಿಳಿಸಿದರು. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಅಂತೆಯೇ, ವಿಶ್ವಾಸ, ನಂಬಿಕೆಯಿಂದ ನಡೆದುಕೊಂಡು ಹೋಗಲಾಗುತ್ತಿದೆ. ಮುಂದಿನ ಚುನಾವಣೆಗಳಲ್ಲಿ ಟಿಕೆಟ್ ಪಡೆದುಕೊಳ್ಳುವುದು ಸುಲಭವಲ್ಲ. ಪರಸ್ಪರ ವಿಶ್ವಾಸಬೇಕು. ಯಾವುದೇ ಕಾರಣಕ್ಕೂ ಸಂಟನೆ ಕುಗ್ಗಬಾರದು. ಮೂರು ವರ್ಷದಲ್ಲಿ ಜೆಡಿಎಸ್ಅನ್ನು ಅಧಿಕಾರಕ್ಕೆ ತರುವುದನ್ನು ನೋಡಬೇಕು ಎಂದು ದೇವೇಗೌಡರು ಹೇಳಿದ್ದಾರೆ. ಇದಕ್ಕೆ ನಾನು ಮಾತು ಕೊಟ್ಟಿದ್ದು, ನೀವು ಸಾಥ್ ನೀಡಬೇಕು ಎಂದು ಕೋರಿದರು.
ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಡಾ.ರೋಹಬ್ ಅಬ್ಬಾಸ್, ಎಂಎಲ್ಸಿ ಇಂಚರ ಗೋವಿಂದರಾಜು, ಮಾಜಿ ಸದಸ್ಯ ಆರ್.ಚೌಡರೆಡ್ಡಿ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿರಾಮೇಗೌಡ, ಟಿಎಪಿಸಿಎಂಸ್ ವಿ.ರಾಮು, ತಾಲೂಕು ಅಧ್ಯಕ್ಷ ಬಾಬು ಮೌಮಿ, ಕೋಮುಲ್ ನಿರ್ದೇಶಕರಾದ ಡಿ.ವಿ.ಹರೀಶ್, ಚಲುವನಹಳ್ಳಿ ನಾಗರಾಜ್, ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಮುತ್ತಪ್ಪ, ನಗರಸಭೆ ಸದಸ್ಯರಾದ ರಾಕೇಶ್, ರಮೇಶ್, ಮುಖಂಡರಾದ ನರೇಂದ್ರ ಬಾಬು, ಡಿ.ಕೆ.ರಮೇಶ್, ಡಾಬಾ ಶಂಕರ್, ಕಡಗಟ್ಟೂರು ವಿಜಯ್ ಕುಮಾರ್, ನಟರಾಜು, ನಾಗರಾಜ್, ಬಿ.ವಿ.ಶಿವಾರೆಡ್ಡಿ, ತಿರುಮಲೇಶ್ ಇದ್ದರು.
* ಇತಿಹಾಸ ಪುಟಗಳಲ್ಲಿ ದಾಖಲು
ರಾಜ್ಯದಲ್ಲಿನ ಇಂತಹ ಕೆಟ್ಟ ಸರ್ಕಾರ ಇತಿಹಾಸದ ಪುಟಗಳಲ್ಲಿ ಉಳಿಯಲಿದೆ ಎಂದು ಕಾಂಗ್ರೆಸ್ನ ಅನುಭವಿ ಶಾಸಕರೇ ಹೇಳುತ್ತಿದ್ದಾರೆ. 2 ವರ್ಷದಲ್ಲೇ ಜನ ಸರ್ಕಾರವನ್ನು ನಿಂದಿಸುತ್ತಿದ್ದು, ಇನ್ನೂ 3 ವರ್ಷಗಳಲ್ಲಿ ಹೇಗೆ ಇರಬಹಹುದು ಊಹಿಸಿಕೊಳ್ಳಿ. ಸಮಾಜದಲ್ಲಿ ಪರಿವರ್ತನೆ, ಕ್ರಾಂತಿಗಾಗಿ ಹೆಜ್ಜೆ ಇಡುವ ನಿಟ್ಟಿನಲ್ಲಿ ನಾವು ಹೋರಾಡೋಣ ಎಂದು ನಿಖಿಲ್ ಕುಮಾರಸ್ವಾಮಿ ಕರೆ ನೀಡಿದರು.
* ನಾಟಿಕೋಳಿ ಮೀಟಿಂಗ್
ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಹೇಗೆ ಆಡುತ್ತಿದೆ ಎನ್ನುವುದು ಗೊತ್ತಿದೆ. ನಕಲಿ ದಲಿತರು ಸೇರಿ ಕೆ.ಎಚ್.ಮುನಿಯಪ್ಪ, ಎಸ್.ಮುನಿಸ್ವಾಮಿ ಅವರನ್ನು ಓಡಿಸಿದ್ದಾರೆ. ಈಗ ಎಸ್.ಎನ್.ನಾರಾಯಣಸ್ವಾಮಿ ಮೇಲೆ ಕಣ್ಣು ಬಿದ್ದಿದೆ, ಮುಂದೆ ಇನ್ನೇನು ಕಾದಿದೆಯೋ. ಇತ್ತೀಚೆಗೆ ನಾಟಿಕೋಳಿ ಮೀಟಿಂಗ್ ಹೆಚ್ಚಾಗಿವೆ ಎಂದರು.
ನಿಯತ್ತಿನ ಬಗ್ಗೆ ಮಾತನಾಡುತ್ತಾರೆ, ಎಸ್.ಮುನಿಸ್ವಾಮಿ ಗೆಲ್ಲಿಸಿದ್ದು ಯಾರು. ಮನೆಯೊಂದು ನಾಲ್ಕು ಬಾಗಿಲಾಗಿದೆ. ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇರಬೇಕು ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು. ಎಲ್ಲರೂ ಸಂಘಟನೆಗೆ ಮುಂದಾದರೆ ಒಂದು ಆಟ ಆಡಬಹುದು. ನಾವೇನು ಎಂದು ತೋರಿಸಿಯೇ ಬಿಡೋಣ. ಸಭೆ ಸಮಾರಂಭ ಮಾಡೋದಲ್ಲ. ಪ್ರತಿ ಕಾರ್ಯಕರ್ತರ ನೋಂದಣಿಯಾಗಬೇಕೆನ್ನುವ ನಿಟ್ಟಿನಲ್ಲಿ ನಿಖಿಲ್ ಬಂದಿದ್ದು, ಅದನ್ನು ಉಳಿಸಿಕೊಳ್ಳೋಣ. ಮುಂದಿನ ದಿನಗಳಲ್ಲಿ ನಮ್ಮ ವಿರೋಧಿಗಳಿಗೆ ತಕ್ಕ ಉತ್ತರ ನೀಡೋಣ ಎಚ್ಚರಿಸಿದರು.
* ಕೆಲಸ ನೀಡಲು ಹಣ ಕೇಳ್ತಾರೆ
ವಿಧಾನಸೌಧಕ್ಕೆ ಹೋಗಿ ಕೆಲಸ ತೆಗೆದುಕೊಂಡು ಬರಬೇಕಾದರೆ ಸಚಿವರು, ಆಪ್ತರಿಗೆ ಹಣ ಕೊಡಬೇಕಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಆರೋಪಿಸಿದರು. ಕೆಲಸಕ್ಕಾಗಿ ಹಣ ಕೇಳುವ ಜಾಯಮಾನ ನನ್ನದಲ್ಲ. ಐದು ಬಾರಿ ಶಾಸಕನಾಗಿ ಆಯ್ಕೆಯಾಗಿರುವುದು ಸಾಮಾನ್ಯ ವಿಷಯವಲ್ಲ. ಕಾರ್ಯಕರ್ತರು ಭಿನ್ನಾಭಿಪ್ರಾಯ ಮರೆತು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
* ರಾಜ್ಯದಲ್ಲಿ ಕಾಂಗ್ರೆಸ್ ದಿವಾಳಿ
ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಕೋಲಾರದ ಜನತೆಯೊಂದಿಗೆ ಜನತಾದಳವಿದೆ. ದೇವೇಗೌಡರ ಕನಸಿನಂತೆ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದು ಸಮೃದ್ಧ ಕರ್ನಾಟಕ ಬೆಳೆಸಲು ನಿಖಿಲ್ ಕುಮಾರಸ್ವಾಮಿ ಪಣತೊಟ್ಟಿದ್ದು, ಅವರಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಿದೆ. ಇದರಿಂದ ತಾಪಂ, ಜಿಪಂ ಚುನಾವಣೆ ನಡೆಸಲು ಸರ್ಕಾರ ಹೆದರಿದೆ. ಹೀಗಾಗಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ತರಲು ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಕೋಟ್..
ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರ ಸಚಿವರೊಂದಿಗೆ ಚರ್ಚಿಸಿ ಕೆಲಸ ತರಲಾಗುತ್ತಿದೆ. 4 ರೈಲ್ವೆ ಮೇಲ್ಸೇತುವೆ ನಿಮಾರ್ಣಕ್ಕೆ ಟೆಂಡರ್ ಹಂತದಲ್ಲಿದೆ. ಸಾಧನೆ ಬಗ್ಗೆ ಈಗಾಗಲೇ ಮಾಹಿತಿ ನೀಡಲಾಗಿದೆ.
- ಎಂ.ಮಲ್ಲೇಶ್ ಬಾಬು, ಸಂಸದ