

ಬೆಂಗಳೂರು: ನಬಾರ್ಡ್ ಹಂಚಿಕೆ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ಗುಜರಾತ್ಗೂ ಕಡಿಮೆಯಾಗಿದೆ. ಯಾವ ಕಾರಣಕ್ಕೆ ಎಂದು ಕೇಂದ್ರ ಹಣಕಾಸು ಮಂತ್ರಿ ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಹೇಳಿರಬೇಕು. ಅವರೇ ಜನತೆಗೆ ವಿವರಣೆ ನೀಡಲಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿ, ರಾಜ್ಯದವರು ಯಾರ ಹಿತ ಕಾಯುತ್ತಿದ್ದಾರೆ? ನಬಾರ್ಡ್ ಕರ್ನಾಟಕಕ್ಕೆ ಮಾತ್ರವಲ್ಲ, ಗುಜರಾತ್ಗೂ ಅನುದಾನ ಕಡಿಮೆ ಮಾಡಿದೆ. ಕೇಂದ್ರ ಹಣಕಾಸು ಸಚಿವರು ರಾಜ್ಯದ ಸಿಎಂಗೆ ನೀಡಿರುವ ಸ್ಪಷ್ಟನೆಯನ್ನು ಜನರ ಮುಂದೆ ಹೇಳಲಿ. ಇವರಿಬ್ಬರು ಏನು ಮಾತನಾಡಿದ್ದಾರೆಂದು ನನಗೆ ತಿಳಿದಿಲ್ಲ ಎಂದರು.
ಬಿಪಿಎಲ್ ಕಾರ್ಡ್ ರದ್ದತಿ ವಿಚಾರದ ಬಗ್ಗೆ ಮಾತನಾಡಿ, ಸರ್ಕಾರ ಪೂರ್ವ ನಿರ್ಧಾರ ಮತ್ತು ಸಿದ್ಧತೆ ಮಾಡಿಕೊಂಡಿಲ್ಲ. ಇದರಿಂದಾಗಿ ನಗೆಪಾಟಲಿಗೆ ಸರ್ಕಾರ ಈಡಾಗುತ್ತಿದೆ. ಇದುವೇ ವಿಪಕ್ಷಗಳಿಗೆ ಅಸ್ತ್ರವಾಗಿದೆ. ಬೀದಿಬದಿ ವ್ಯಾಪಾರಿ, ಕೂಲಿ ಕಾರ್ಮಿಕರ ಕಾರ್ಡ್ ರದ್ದಾಗಿದೆ. ಪ್ರಶ್ನಿಸಿದರೆ, ರಾಜಕೀಯ ಅಂತಾರೆ. ನೀವು ಮಾಡುತ್ತಿರೋದು ರಾಜಕೀಯ ಅಲ್ವಾ? ಜನರ ಅಕ್ಕಿ ಕಿತ್ತುಕೊಳ್ಳುತ್ತಿದ್ದೀರಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.