ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದೆ ಎಂಬ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ್ ರಾಯರೆಡ್ಡಿ ಅವರು ನೀಡಿದ ಹೇಳಿಕೆ ಆಕ್ಷೇಪಾರ್ಹವಾಗಿದೆ ಎಂಎಲ್ಸಿ ದಿನೇಶ್ ಗೂಳಿಗೌಡ ಹೇಳಿದರು.
ಇದನ್ನೂ ಓದಿ: ಕಳೆದ 3-4 ವರ್ಷಗಳಲ್ಲಿ 8 ಕೋಟಿ ಹೊಸ ಉದ್ಯೋಗ ಸೃಷ್ಟಿಯಾಗಿವೆ: ಪ್ರಧಾನಿ ಮೋದಿ
ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಶಾಸಕ ದಿನೇಶ್ ಗೂಳಿಗೌಡ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಳೆದ ಫೆಬ್ರವರಿಯಲ್ಲಿ ಮಂಡಿಸಿದ ಆಯವ್ಯಯವು 3 ಲಕ್ಷ 73 ಸಾವಿರ ಕೋಟಿ ರೂಪಾಯಿ ಇದೆ. ಇದರಲ್ಲಿ ಅಭಿವೃದ್ಧಿ ಕಾರ್ಯಗಳಿಗೆ 1 ಲಕ್ಷ 20 ಸಾವಿರ ಕೋಟಿ ರೂಪಾಯಿಯನ್ನು ಮೀಸಲಿಟ್ಟಿದೆ. ಇನ್ನು ಗ್ಯಾರಂಟಿ ಯೋಜನೆಗಳಿಗೆ 58,000 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. ಇನ್ನು ಸಾಮಾಜಿಕ ಪಿಂಚಣಿ, ಸರ್ಕಾರಿ ನೌಕರರ ವೇತನ, ವಿವಿಧ ಇಲಾಖೆಗಳಿಗೆ ಅನುದಾನ ಹಂಚಿಕೆಯು ಸಹ ಸಮರ್ಪಕವಾಗಿದೆ. ಹೀಗಾಗಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನು ಮೀಸಲಿಟ್ಟೇ ಎಲ್ಲ ಚಟುವಟಿಕೆಯನ್ನು ನಡೆಸಲಾಗುತ್ತಿದೆ ಎಂದು ಶಾಸಕ ದಿನೇಶ್ ಗೂಳಿಗೌಡ ಅವರು ತಿಳಿಸಿದ್ದಾರೆ.
ಸರಿಯಾದ ಮಾಹಿತಿ ಪಡೆದು ಬಸವರಾಜ ರಾಯರೆಡ್ಡಿ ಮಾತನಾಡಲಿ
ಇಷ್ಟು ಮಾತ್ರವಲ್ಲದೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವ ಮೊದಲು ಹೊರಡಿಸಿದ್ದ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಘೋಷಿಸಿದ್ದ 5 ಪ್ರಮುಖ ಗ್ಯಾರಂಟಿ ಯೋಜನೆಗಳ ಸಹಿತ ಇನ್ನಿತರ ಆಶ್ವಾಸನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಡೇರಿಸುತ್ತಾ ಬರುತ್ತಿದ್ದಾರೆ. ಹೀಗೆ ಅಭಿವೃದ್ಧಿ ಕಾರ್ಯಗಳ ಸಹಿತ ಗ್ಯಾರಂಟಿ ಯೋಜನೆಗಳನ್ನು ಸಹ ನಿಲ್ಲಿಸದೇ ರಾಜ್ಯದಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿಕೊಂಡು ಬರಲಾಗುತ್ತಿದೆ. ಹೀಗಿರುವಾಗ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಸರಿಯಾದ ಮಾಹಿತಿಯನ್ನು ಪಡೆದು ಮಾತನಾಡಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ನಡೆಯುತ್ತಿರಬೇಕಾದರೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಬಸವರಾಜ ರಾಯರೆಡ್ಡಿ ಅವರು ಇಂತಹ ಹೇಳಿಕೆಗಳನ್ನು ನೀಡಬಾರದು. ಈಗಾಗಲೇ ರಾಜ್ಯದಲ್ಲಿ 5 ಗ್ಯಾರಂಟಿಗಳಾದ ಗೃಹಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವ ನಿಧಿ ಫಲಾನುಭವಿಗಳಿದ್ದಾರೆ. ಅವರೆಲ್ಲರಿಗೂ ಗ್ಯಾರಂಟಿ ಯೋಜನೆಗಳಿಂದ ಸಂತುಷ್ಟರಾಗಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
4 ಕೋಟಿಗೂ ಅಧಿಕ ಜನರಿಗೆ ಲಾಭ: ಗೃಹಲಕ್ಷ್ಮೀ ಯೋಜನೆಯಲ್ಲಿ ಇದುವರೆಗೆ ಪ್ರತಿ ತಿಂಗಳು 1 ಕೋಟಿ, 21 ಲಕ್ಷ 56 ಸಾವಿರ ಕುಟುಂಬಗಳ ಯಜಮಾನಿಯರಿಗೆ ತಲಾ 2 ಸಾವಿರ ರೂ.ನಂತೆ ಈವರೆಗೆ 23 ಸಾವಿರ ಕೋಟಿ ರೂ.ಪಾವತಿಸಲಾಗಿದೆ ಎಂದರು. ಶಕ್ತಿ ಯೋಜನೆಯಡಿ ರಾಜ್ಯದಲ್ಲಿ ಮಹಿಳೆಯರು 247 ಕೋಟಿ ಬಾರಿಯ ಪ್ರಯಾಣದ ಉಚಿತ ಟಿಕೆಟ್ ಪಡೆದು ರಾಜ್ಯ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಪ್ರಯಾಣಿಸಿದ್ದಾರೆ. ಅದರ ಮೊತ್ತ 6005 ಕೋಟಿ ರೂ.ಗಳಾಗಿವೆ.
ಗೃಹ ಜ್ಯೋತಿ ಯೋಜನೆಯಡಿ 1 ಕೋಟಿ 62 ಲಕ್ಷ ಮನೆಗಳಿಗೆ ತಲಾ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗಿದೆ. ಪ್ರತಿ ತಿಂಗಳು ಸುಮಾರು 900 ಕೋಟಿಯಂತೆ ಇದುವರೆಗೆ 10500 ಕೋಟಿ ರೂ.ಗಳನ್ನು ಇದಕ್ಕಾಗಿ ವ್ಯಯಿಸಲಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ 4 ಕೋಟಿ ಜನರಿಗೆ ತಲಾ 5 ಕೆಜಿ ಅಕ್ಕಿಯ ಮೌಲ್ಯವನ್ನು ಹಣದ ರೂಪದಲ್ಲಿ ನೀಡಲಾಗುತ್ತಿದೆ. ಇದುವರೆಗೆ 6800 ಕೋಟಿ ರೂ.ಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ. ಯುವ ನಿಧಿ ಯೋಜನೆಯಡಿ ಪ್ರತಿ ತಿಂಗಳು 1 ಲಕ್ಷ 45 ಸಾವಿರ ಪದವಿ ಹಾಗೂ ಡಿಪ್ಲೊಮಾ ಮುಗಿಸಿದ ಅಭ್ಯರ್ಥಿಗಳಿಗೆ ಸಹಾಯಧನ ಮಂಜೂರು ಮಾಡಲಾಗುತ್ತಿದೆ ಎಂದು ದಿನೇಶ್ ಗೂಳಿಗೌಡ ಅವರು ವಿವರಿಸಿದ್ದಾರೆ.
ಹೇಳಿಕೆಗಳಿಗೆ ಕಡಿವಾಣ ಹಾಕಲಿ: ರಾಜ್ಯದ 223 ತಾಲೂಕುಗಳಲ್ಲಿ ತೀವ್ರತರದ ಬರ ಪರಿಸ್ಥಿತಿ ಇತ್ತು. ಆದರೆ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಬರೆದ ಬಿಸಿ ಅಷ್ಟಾಗಿ ತಟ್ಟಲಿಲ್ಲ. ಗ್ಯಾರಂಟಿ ಯೋಜನೆಗಳ ಬಗ್ಗೆ ರಾಜ್ಯದ ಜನತೆಯೇ ಕೊಂಡಾಡುತ್ತಿರುವಾಗ ಇಂತಹ ಗೊಂದಲಮಯ ಹೇಳಿಕೆಯನ್ನು ಯಾರೂ ಸಹ ನೀಡಬಾರದು. ಇಂತಹ ಹೇಳಿಕೆಗಳನ್ನು ಮುಂದೆ ಯಾರೂ ನೀಡದಂತೆ ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಮುಂಬೈನಲ್ಲಿ 29,400 ಕೋಟಿ ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ!