'ಗೌರಮ್ಮ-ಕುಸುಮಾ ತಾಯಿ-ಮಗಳಂತೆ ಚೆನ್ನಾಗಿರಲಿ... ಅವರ ವಿರುದ್ಧ ನಮಗೆ ವ್ಯಕ್ತಿಗತ ಹೋರಾಟವಿಲ್ಲ'

dk ravi-kusuma-gowramma
Published on

ಚಿಕ್ಕಮಗಳೂರು: ಅತ್ತೆ ಸೊಸೆ, ತಾಯಿ ಮಗಳಂತೆ ಇರಲಿ. ಅತ್ತೆ-ಸೊಸೆ ಜಗಳವಾಡಲಿ ಎಂದು ನಾವು ಹೇಳಿಲ್ಲ, ಬಯಸುವುದೂ ಇಲ್ಲ. ಚುನಾವಣೆ ಮುಗಿದ ಮೇಲೂ ಅವರು ಚೆನ್ನಾಗಿರಲಿ. ಮುಖವನ್ನೇ ನೋಡುವುದಿಲ್ಲ ಎಂದವರು ನೋಡುವಂತಾಗಿರೋದು ಸಂತೋಷದ ಸಂಗತಿ...

ಹೀಗೆಂದು ಹೇಳಿದ್ದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ. ಡಿ.ಕೆ.ರವಿ ತಾಯಿ ಗೌರಮ್ಮ ಮತ್ತು ಅವರು ಪತ್ನಿ ಕುಸುಮಾ ಕುರಿತಾಗಿ. ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಸಿ.ಟಿ.ರವಿ, ಆರ್ ಆರ್ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಅತ್ತೆ ಗೌರಮ್ಮ ಕೊನೇ ಕ್ಷಣದಲ್ಲಿ ವಿಡಿಯೋ ಮೂಲಕ ಮತಯಾಚಿಸಿದ್ದ ವಿಡಿಯೋ ವೈರಲ್​ ಆಗಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಸಿ.ಟಿ.ರವಿ, ಡಿ.ಕೆ.ರವಿ ಅವರ ತಾಯಿ ನೀಡಿರುವ ಹೇಳಿಕೆ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅನ್ನಿಸುವುದಿಲ್ಲ. ನಮ್ಮದೇನಿದ್ದರೂ ಕಾಂಗ್ರೆಸ್, ಜೆಡಿಎಸ್ ಜತೆ ರಾಜಕೀಯವಾಗಿ ತಾತ್ವಿಕವಾದ ಹೋರಾಟ. ಕುಸುಮಾ ಅಥವಾ ಅವರ ಅತ್ತೆ ವಿರುದ್ಧ ವ್ಯಕ್ತಿಗತವಾಗಿ ಯಾವ ಹೋರಾಟವಿಲ್ಲ. ಯಾವುದೇ ಸುಸಂಸ್ಕೃತ ಮನೆತನದ ಹಿನ್ನೆಲೆಯವರು ಸದಾಕಾಲ ಚೆನ್ನಾಗಿರಬೇಕು ಎಂದರು.

ಉಪ ಚುನಾವಣೆಯಲ್ಲಿ ಜನರ ಮತ್ತು ನಮ್ಮ ಸಮೀಕ್ಷೆ ಬಿಜೆಪಿ ಪರ ಇದೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿಗೆ 40 ಸಾವಿರದಷ್ಟು ಲೀಡ್ ನೀಡುತ್ತಿದ್ದರು. ವಿಧಾನಸಭೆಯಲ್ಲಿ ಪಕ್ಷ ಹಿಂದಿರುವ ಬಗ್ಗೆ ಸಮೀಕ್ಷೆ ನಡೆಸಿದಾಗ ಮುನಿರತ್ನ ಅವರು ಕೆಲಸ ಮಾಡುತ್ತಾರೆಂಬ ವ್ಯಕ್ತಿಗತ ವರ್ಚಸ್ಸು ವೋಟಿಗೆ ಕಾರಣವಾಗುತ್ತಿತ್ತು. ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ತಮ್ಮ ತಿಳಿವಳಿಕೆಗೆ ಇರುವ ಎಲ್ಲ ತಂತ್ರ ರೂಪಿಸಿದ್ದಾರೆ. ಅವರ ಪಕ್ಷ ಗೆಲ್ಲಿಸಲು ಅದು ಸ್ವಾಭಾವಿಕ. ಆದರೆ ಅದ್ಯಾವುದೂ ಫಲ ನೀಡದೆ ಹತಾಶರಾಗಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net