

ಬೆಂಗಳೂರು: ಸತತ ವೈಫಲ್ಯದಿಂದ ತತ್ತರಿಸಿರುವ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು, ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆ ಮೊರೆ ಹೋಗಿದ್ದಾರೆ. ಪ್ರಕಾಶ್ ಪಡುಕೋಣೆ ಈಗ ಸಿಂಧು ಮೆಂಟರ್ ಆಗಿದ್ದು, ಬೆಂಗಳೂರಿನ ಅಕಾಡೆಮಿಯಲ್ಲಿ ಅವರ ಮಾರ್ಗದರ್ಶನದಲ್ಲೇ ಅಭ್ಯಾಸ ನಡೆಸಲಾರಂಭಿಸಿದ್ದಾರೆ.
ಏಷ್ಯನ್ ಗೇಮ್ಸ್ಗೆ ಮುನ್ನವೂ ಕೆಲದಿನಗಳ ಕಾಲ ಪಡುಕೋಣೆ ಗರಡಿಯಲ್ಲಿ ಅಭ್ಯಾಸ ನಡೆಸಿದ್ದ ಸಿಂಧು, ಇದೀಗ ಪೂರ್ಣಪ್ರಮಾಣದಲ್ಲಿ ಅವರಿಂದ ತರಬೇತಿ ಪಡೆಯಲಾರಂಭಿಸಿದ್ದಾರೆ. ಈ ವಿಷಯವನ್ನು ಎಕ್ಸ್ನಲ್ಲಿ ಸಿಂಧು ಖಚಿತಪಡಿಸಿದ್ದಾರೆ.
"ಪ್ರಕಾಶ್ ಸರ್ ಈಗ ನನ್ನ ಮೆಂಟರ್ ಆಗಿದ್ದಾರೆ. ಆಗಸ್ಟ್ ಅಂತ್ಯದಿಂದ ನಾನು ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದೇನೆ. ಅವರು ನನಗೆ ಮೆಂಟರ್ ಅಷ್ಟೇ ಅಲ್ಲ. ಗೈಡ್, ಗುರು ಮತ್ತು ಅದಕ್ಕಿಂತಲೂ ಮಿಗಿಲಾಗಿದ್ದಾರೆ. ಅವರೊಬ್ಬ ನಿಜವಾದ ಗೆಳೆಯ. ಅವರ ಮಾರ್ಗದರ್ಶನದಲ್ಲಿ ನನ್ನ ಶ್ರೇಷ್ಠ ನಿರ್ವಹಣೆ ತೋರುವ ವಿಶ್ವಾಸದಲ್ಲಿದ್ದೇನೆ. ನಾನು ಜಪಾನ್ನಲ್ಲಿದ್ದಾಗ ಕೇವಲ ಒಂದು ಕರೆಯಲ್ಲೇ ನನ್ನೊಂದಿಗೆ ಕಾರ್ಯನಿರ್ವಹಿಸಲು ಒಪ್ಪಿಕೊಂಡಿದ್ದಕ್ಕೆ ಧನ್ಯಳಾಗಿರುವೆ. ನಿಮ್ಮಿಂದ ತರಬೇತಿ ಪಡೆಯುವುದಕ್ಕೆ ಕಾತರದಿಂದಿರುವೆ' ಎಂದು ಸಿಂಧು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಹಾಲಿ ವರ್ಷ ಸಿಂಧು ಒಂದೂ ಪ್ರಶಸ್ತಿ ಗೆಲ್ಲದೆ ಪರದಾಡುತ್ತಿದ್ದಾರೆ. ಈ ನಡುವೆ ಗಾಯದ ಸಮಸ್ಯೆಯೂ ಅವರನ್ನು ಕಾಡಿದೆ.