ಕಿರುವಾರ ಎಸ್.ಸುದರ್ಶನ್ ಕೋಲಾರ
ಜಿಲ್ಲೆಯಲ್ಲಿ ನಕಲಿ ಬಿತ್ತನೆ ಬೀಜಗಳ ಹಾವಳಿ ಹೆಚ್ಚಾಗಿದ್ದು, ಇದನ್ನು ತಡೆಗಟ್ಟಲು ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ಸಸ್ಯ ಬೆಳೆಸುವ ನರ್ಸರಿಗಳನ್ನು ಇಲಾಖೆ ವ್ಯಾಪ್ತಿಗೆ ತಂದು ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ.
ನರ್ಸರಿಗಳು ಯಾವುದೇ ಇಲಾಖೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಜತೆಗೆ ಯಾವುದೇ ರೀತಿಯ ಮಾನದಂಡ, ಕಾನೂನುಗಳೂ ಇಲ್ಲ. ಇದರ ನಡುವೆ ಜಿಲ್ಲೆಯಲ್ಲಿ ನಕಲಿ ಬಿತ್ತನೆ ಬೀಜಗಳ ಹಾವಳಿ ಹೆಚ್ಚಾಗಿದ್ದು. ಇದನ್ನು ತಡೆಯುವ ನಿಟ್ಟಿನಲ್ಲಿ ನರ್ಸರಿಗಳನ್ನು ಕಾನೂನು ವ್ಯಾಪ್ತಿಗೆ ತರಲು ಪ್ರಯತ್ನ ಆರಂಭವಾಗಿದೆ.
ಜಿಲ್ಲೆಯಲ್ಲಿ ಒಟ್ಟು 194 ನರ್ಸರಿಗಳಿದ್ದು, ಮಾಲೀಕರು ತರಕಾರಿ, ಹಣ್ಣುಗಳ ನಾರು ಉತ್ಪಾದನೆ ಮಾಡಿ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಪ್ರಮುಖವಾಗಿ ಟೊಮ್ಯಾಟೊ, ಗಡ್ಡೆಕೋಸು, ಎಲೆಕೋಸು, ಬಜ್ಜಿ, ಕ್ಯಾಪ್ಸಿಕಂ, ಪಪ್ಪಾಯ, ಜೋಳ, ಚೆಂಡು ಹೂವು… ಹೀಗೆ ಹಲವು ಬಗೆಯ ಸಸಿಗಳ ನಾರನ್ನು ಉತ್ಪಾದಿಸಿ ಮಾರಾಟ ಮಾಡಲಾಗುತ್ತಿದೆ.
ನಾಟಿ ಮಾಡಿ ಬೆಳೆದ ಬೆಳೆ ಸಲು ಬಿಡದೆ ಇದ್ದರೆ ರೈತರಿಗೆ ನಷ್ಟ ನಿಶ್ಚಿತವಾಗಿದೆ. ಆದ್ದರಿಂದ ಇದಕ್ಕೆ ಕಡಿವಾಣ ಹಾಕಲು ಜಿಲ್ಲೆಯ ಎಲ್ಲ ನರ್ಸರಿಗಳನ್ನು ಇಲಾಖೆ ವ್ಯಾಪ್ತಿಗೆ ತಂದು ನಂತರ ಸೂಕ್ತ ಕಾನೂನು ರೂಪಿಸಲು ಮುಂದಡಿ ಇಡಲಾಗಿದೆ.
ಸರ್ಕಾರದ ಕೈ ಸೇರಿದ ವರದಿ
ನಕಲಿ ಬಿತ್ತನೆ ಬೀಜ ಹಾವಳಿ ತಡೆಗೆ ಅಧಿಕಾರಿಗಳು ಕ್ರಮಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಅನಿಲ್ ಕುಮಾರ ಅವರ ಗಮನಕ್ಕೆ ರೈತರು ತಂದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜನಪ್ರತಿನಿಧಿಗಳು, ನರ್ಸರಿಗಳನ್ನು ಕಾನೂನಿನಡಿಗೆ ತರಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ ಕೆಡಿಪಿ ಸಭೆಗಳಲ್ಲೂ ಈ ಬಗ್ಗೆ ತೀವ್ರ ಚರ್ಚೆಯಾಗಿದ್ದು, ನರ್ಸರಿಗಳ ಬಗ್ಗೆ ಪರಿಶೀಲನೆ ಮಾಡಿ ವರದಿ ಸಲ್ಲಿಸಲು ತೋಟಗಾರಿಕೆ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬೆನ್ನಲ್ಲೇ ಅಧಿಕಾರಿಗಳು ಈಗಾಗಲೇ ವರದಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.
ಎಲ್ಲದಕ್ಕೂ ನರ್ಸರಿಗಳತ್ತ ಬೊಟ್ಟು
ಸಸಿಗಳನ್ನು ಬೆಳೆದುಕೊಡುವ ನರ್ಸರಿ ಮಾಲೀಕರು ಬಹುತೇಕರು ರೈತರೇ ಆಗಿದ್ದು, ಅವರು ಸಹ ಅಂಗಡಿಗಳಿಂದ ಸಾವಿರಾರು ರೂ. ಕೊಟ್ಟು ಬಿತ್ತನೆ ಬೀಜ ತಂದು ಸಸಿ ಬೆಳೆಸುತ್ತಾರೆ. ರೈತರು, ನರ್ಸರಿಗಳಿಂದ ಖರೀದಿಸಿ ನಾಟಿ ಮಾಡಿ ಪೋಷಿಸುತ್ತಾರೆ. ಇಳುವರಿ ಸಮರ್ಪಕವಾಗಿ ಬಾರದಿದ್ದರೆ ನರ್ಸರಿಗಳತ್ತ ಬೊಟ್ಟು ಮಾಡುತ್ತಾರೆ. ಆದರೆ, ಇದರಲ್ಲಿ ಬಿತ್ತನೆ ಬೀಜದ ಸಮಸ್ಯೆಯೇ ಹೊರತು ನರ್ಸರಿಗಳ ತಪ್ಪೇನಿದೆ ಎಂದು ಹೆಸರು ಹೇಳಲಿಚ್ಛಿಸದ ನರ್ಸರಿ ಮಾಲೀಕರೊಬ್ಬರು ಪ್ರಶ್ನಿಸಿದ್ದಾರೆ.
ಕೆಲ ನರ್ಸರಿಗಳಿಗೆ ಆಂಧ್ರ, ತಮಿಳುನಾಡು ಸೇರಿ ವಿವಿಧ ರಾಜ್ಯಗಳಿಂದ ವಿವಿಧ ತಳಿಯ ಬಿತ್ತನೆ ಬೀಜಗಳು ಸರಬರಾಜು ಆಗುತ್ತವೆ. ಅಲ್ಲದೆ ಕಂಪನಿಗೊಬ್ಬರಂತೆ ಸೇಲ್ಸ್ಮನ್ಗಳಿದ್ದು, ನೇರವಾಗಿ ನರ್ಸರಿ ಮಾಲೀಕರನ್ನು ಸಂಪರ್ಕಿಸಿ, ಮಾರಾಟ ಮಾಡುತ್ತಾರೆ. ಆದ್ದರಿಂದ ಗುಣಮಟ್ಟದ ಬಿತ್ತನೆ ಬೀಜ ಪೂರೈಕೆಗೆ ಕಠಿಣ ಕ್ರಮದ ಅಗತ್ಯವಿದೆ ಎಂದರು.
ಬಿತ್ತನೆ ಬೀಜದ ಸಮಸ್ಯೆ
ಇಳುವರಿ ಕುಂಠಿತ ಹಾಗೂ ಫಸಲು ಬಿಡದೆ ಇರಲು ಕಾರಣ ಏನಿರಬಹುದು ಎಂದು ಟಮಕ ತೋಟಗಾರಿಕೆ ಮಹಾವಿದ್ಯಾಲಯದ ವಿಜ್ಞಾನಿಗಳು ರೈತರ ತಾಕುಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಮೇಲ್ನೊಟ್ಟಕ್ಕೆ ಬಿತ್ತನೆ ಬೀಜದ ಸಮಸ್ಯೆಯೇ ಕಾರಣ ಎಂಬ ಬಗ್ಗೆ ವರದಿ ತಯಾರಿಸಿದ್ದಾರೆ ಎನ್ನಲಾಗಿದೆ.
ಕೋಟ್…
ನರ್ಸರಿಗಳನ್ನು ಕಾನೂನು ವ್ಯಾಪ್ತಿಗೆ ಒಳಪಡಿಸುವುದು ಜಿಲ್ಲೆಯಿಂದಲೇ ಆರಂಭವಾಗಲಿ. ನಂತರ ರಾಜ್ಯಾದ್ಯಂತ ವಿಸ್ತರಣೆಯಾಗುತ್ತದೆ. ಸಚಿವರು, ಸಿಎಂ ಮಟ್ಟದಲ್ಲಿ ಸಭೆ ನಡೆಸಿ ಕಾನೂನು ರೂಪಿಸಲಾಗುವುದು.- ಬೈರತಿ ಸುರೇಶ್, ಜಿಲ್ಲಾ ಉಸ್ತುವಾರಿ ಸಚಿವ, ಕೋಲಾರ
ಕೋಟ್…
ನರ್ಸರಿಗಳನ್ನು ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ತರಲು ಸೂಚಿಸಿದ್ದು, ಜಿಲ್ಲೆಯಲ್ಲಿ ಇರುವ ನರ್ಸರಿಗಳ ಮಾಹಿತಿಯನ್ನು ಇಲಾಖೆಯ ಕೇಂದ್ರ ಕಚೇರಿಗೆ ಕಳುಹಿಸಿಕೊಡಲಾಗಿದೆ. ಕ್ರಮವಹಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕಿದೆ. – ಎಸ್.ಆರ್.ಕುಮಾರಸ್ವಾಮಿ, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಕೋಲಾರ.
ಪಟ್ಟಿ…
ತಾಲೂಕು ನರ್ಸರಿಗಳು
ಮುಳಬಾಗಿಲು 51
ಶ್ರೀನಿವಾಸಪುರ 30
ಬಂಗಾರಪೇಟೆ 41
ಕೋಲಾರ 50
ಮಾಲೂರು 22
ಒಟ್ಟು 194