ಕೋಲಾರ: ಹಣ ಪಡೆದು ಅಂಕ ಕೊಡಿಸುತ್ತಾರೆ ಎಂಬ ಆರೋಪ ವಿವಿಯ ಮೇಲೆ ಕೇಳಿ ಬಂದಿದೆ. ಇದಕ್ಕೆ ದಾಖಲೆ ಸಮೇತ ಸಾ ನೀಡಿದರೆ ತಪ್ಪಿತಸ್ಥರ ವಿರುದ್ಧ ಕ್ರಮವಹಿಸಲಾಗುವುದು. ವಿವಿಯಲ್ಲಿ ಶಿಕ್ಷಣ ಮಾರಾಟಕ್ಕಿಲ್ಲ ಎಂದು ವಿವಿಯ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಸ್ಪಷ್ಟಪಡಿಸಿದರು.
ತಾಲೂಕಿನ ಮಂಗಸಂದ್ರದ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಉತ್ತರೋತ್ತರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು ಉತ್ತರ ವಿವಿ ಘನತೆಗೆ ಕುತ್ತು ತರುವ ಕೆಲಸಕ್ಕೆ ಅವಕಾಶ ಕೊಡುವುದಿಲ್ಲ. ಉತ್ತರೋತ್ತರ ಪ್ರಶಸ್ತಿ ಪ್ರದಾನವು ಎರಡನೇ ವರ್ಷವೂ ಯಶಸ್ವಿಯಾಗಿದ್ದು, ಹೀಗೆಯೇ ನೂರಾರು ವರ್ಷ ಮುಂದುವರಿಯಬೇಕು. ವಿವಿಯ ಚರಿತ್ರೆಯಲ್ಲಿ ಒಳ್ಳೆಯ ಕಾರ್ಯಗಳು ದಾಖಲೆಯಾಗಬೇಕು ಎಂದು ಹೇಳಿದರು.
ಬೆಂಗಳೂರು ಉತ್ತರ ವಿವಿಯಲ್ಲಿ ಯಾರೋ ಗೋಪಾಲರೆಡ್ಡಿ, ಕೇಶವ ಎಂಬ ನೌಕರರು ದುಡ್ಡು ಪಡೆದು ಅಂಕ ಕೊಡಿಸುವುದಾಗಿ ಹೇಳಿದ್ದಾರೆ ಎಂದು ಇತ್ತೀಚೆಗೆ ಮಾಧ್ಯಮಗಳಲ್ಲಿನ ಆರೋಪಗಳಿಗೆ ಸ್ಪಷ್ಟೀಕರಣ ನೀಡಿದ ಕುಲಪತಿಗಳು, ಅಂತಹ ದೂರುಗಳಿದ್ದರೆ ಕೂಡಲೇ ನನ್ನ ಗಮನಕ್ಕೆ ತನ್ನಿ, ಪೊಲೀಸರಿಗೆ ದೂರು ನೀಡಿ ಕ್ರಮಕ್ಕೆ ಕೋರುವುದಾಗಿ ತಿಳಿಸಿದರಲ್ಲದೆ ಆ ಹೆಸರಿನ ಯಾವ ನೌಕರರೂ ನಮ್ಮ ವಿವಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂದೂ ಸ್ಪಷ್ಟಪಡಿಸಿದರು.
ಬೆಂಗಳೂರಿನ ವಿವಿ ನಿಮ್ಹಾನ್ಸ್ನ ಕುಲಸಚಿವ ಡಾ.ಶಂಕರ ನಾರಾಯಣರಾವ್ ಮಾತನಾಡಿ, ಶಿಕ್ಷಕರು ಮೊಬೈಲ್ಗೆ ದಾಸರಾಗದಿರಿ, ಮೊಬೈಲ್ ನೋಡಿ ಪಾಠ ಮಾಡುವುದು ಬೇಡ. ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ಅವರು ಉತ್ತರೋತ್ತರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ವಿವಿಗಳಲ್ಲಿನ ಶಿಕ್ಷಣ ಪದ್ಧತಿ ಬದಲಾಗಬೇಕು, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಚಿಂತನೆಗೆ ಪ್ರೇರಣೆ ನೀಡುವ ಶಿಕ್ಷಣ ಬೇಕು. ಈ ನೆಲದ ಸಂಸತಿ ಉಳಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಸಾಹಿತಿ ಕೋಟಗಾನಹಳ್ಳಿ ರಾಮಯ್ಯ, ಅಕೈ ಪದ್ಮಶಾಲಿ ಅವರಿಗೆ ವಿವಿಯಿಂದ ಉತ್ತರೋತ್ತರ ಪ್ರಶಸ್ತಿ ನೀಡಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯರಾದ ಗೋಪಾಲರೆಡ್ಡಿ, ಮುನಿನಾರಾಯಣಪ್ಪ, ವೆಂಕಟೇಶಪ್ಪ, ಉತ್ತರ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ.ತಿಪ್ಪೇಸ್ವಾಮಿ, ವಿವಿ ಆಡಳಿತದ ಪ್ರಭಾರ ಕುಲಸಚಿವೆ ಡಿ.ಕುಮುದಾ, ಉಪನ್ಯಾಸಕರಾದ ಸಿ.ಎಸ್.ಶ್ರೀಲತಾ, ಡಾ.ಗುಂಡಪ್ಪ, ಮಂಜುನಾಥ್, ಡಾ.ಶಿಲ್ಪಾ,ಡಾ.ಶ್ರೀನಿವಾಸ, ಡಾ.ನೇತ್ರಾವತಿ ಹಾಜರಿದ್ದರು.