

ರಾಮನಗರ: ಸರ್ಕಾರಿ ಕಾಲೇಜಿನ ಉಪನ್ಯಾಸಕರೊಬ್ಬರು ವಿದ್ಯಾರ್ಥಿಗೆ ಮನಬಂದಂತೆ ಥಳಿಸಿ ಬಾಸುಂಡೆ ಬರಿಸಿರುವ ಪ್ರಸಂಗ ನಡೆದಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತೀವ್ರ ಅಸಮಾಧಾನ ಮನೆಮಾಡಿದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಾಕಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಸಂಜಯ್ ಮೇಲೆ ಈ ಹಲ್ಲೆ ನಡೆದಿದೆ. ಇಂಗ್ಲಿಷ್ ಉಪನ್ಯಾಸಕ ಚಂದ್ರಶೇಖರ್ ಶಟಲ್ ಬ್ಯಾಟ್‌ನಿಂದ ಸಂಜಯ್ನನ್ನು ಥಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಕಾರಣವಿಲ್ಲದೆ ಏಕಾಏಕಿ ದೌರ್ಜನ್ಯ ಮಾಡಿದ್ದಾರೆ ಎನ್ನಲಾಗಿದೆ.
ವಿದ್ಯಾರ್ಥಿಯ ಕೈ, ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ಶಟಲ್ ಬ್ಯಾಟ್‌ನಿಂದ ಹಲ್ಲೆ ಮಾಡಿದ್ದು ಕೈ, ಭುಜ ಮತ್ತು ಬೆನ್ನಿನಲ್ಲಿ ರಕ್ತ ಬಂದಿದೆ. ಪಕ್ಕೆಯ ಭಾಗದಲ್ಲಿ ಬಾಸುಂಡೆ ಬಂದಿದೆ. ಹಲ್ಲೆಗೊಳಗಾದ ಸಂಜಯ್ನನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪನ್ಯಾಸಕ ಚಂದ್ರಶೇಖರ್ ಮೇಲೆ ವಿದ್ಯಾರ್ಥಿಗಳು ಹಾಗೂ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದು, ಎಂ.ಕೆ.ದೊಡ್ಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.