

ಕಡಬ: ಶ್ರೀ ರಾಮಕುಂಜೇಶ್ವರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ‘ಸಂಸ್ಕಾರ ಕುಂಜ’ ಮಾಲಿಕೆ-3 ವಿಶೇಷ ಉಪನ್ಯಾಸ ಕಾರ್ಯಕ್ರಮ ಭಾನುವಾರ ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ನಂದೀಶ್ ವೈ.ಡಿ ಮಾತನಾಡಿ, ವಿದ್ಯಾರ್ಥಿಗಳೆಲ್ಲರೂ ಉಜ್ವಲ ಭವಿಷ್ಯ ರೂಪಿಸಲು ಉತ್ತಮ ಹವ್ಯಾಸದೊಂದಿಗೆ ಒಳ್ಳೆಯ ಗುಣ ಬೆಳೆಸಿಕೊಳ್ಳಬೇಕು. ಬಾಹ್ಯ ಆಕರ್ಷಣೆಗೆ ಒಳಗಾಗದೆ ಕ್ಷಣಿಕ ಸುಖಗಳನ್ನು ತ್ಯಜಿಸಿ ನಮ್ಮಲ್ಲಿರುವ ಶಕ್ತಿಯನ್ನು ಸದ್ಬಳಕೆ ಮಾಡಿ, ಆತ್ಮವಿಮರ್ಶೆಯೊಂದಿಗೆ ಬದುಕಬೇಕು ಎಂದರು.
ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಮಾತನಾಡಿ, ವಿದ್ಯಾರ್ಥಿಗಳೆಲ್ಲರೂ ನಿರ್ದಿಷ್ಟ ಧ್ಯೇಯವನ್ನಿಟ್ಟುಕೊಂಡು, ಒಳ್ಳೆಯ ಮೌಲ್ಯಗಳನ್ನು ಬೆಳೆಸಿಕೊಂಡಾಗ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಸಂಸ್ಥೆಯ ವ್ಯವಸ್ಥಾಪಕ ರಮೇಶ್ ರೈ, ಸಿಬಿಎಸ್‌ಸಿ ಪ್ರಾಂಶುಪಾಲ ಪ್ರವೀದ್ ಉಪಸ್ಥಿತರಿದ್ದರು. ಶಿಕ್ಷಕರಾದ ಕಿಶೋರ್ ಕುಮಾರ್ ಬಿ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.