ಪುತ್ತೂರು ಗ್ರಾಮಾಂತರ: ಬೆಳಗ್ಗಿನ ವೇಳೆ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗ ಹಾಗೂ ಇನ್ನಿತರ ಕಾರ್ಯಗಳಿಗಾಗಿ ತೆರಳುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈಶ್ವರಮಂಗಲದಿಂದ ಪುತ್ತೂರಿಗೆ ಬೆಳಗ್ಗೆ 8.30ಕ್ಕೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸೋಮವಾರ ಆರಂಭಗೊಂಡಿದೆ. ಬೆಳಗ್ಗೆ ಈಶ್ವರಮಂಗಲಕ್ಕೆ ಬಂದ ಬಸ್ಸನ್ನು ಈಶ್ವರಮಂಗಲ ಜಂಕ್ಷನ್ ಬಳಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸ್ವಾಗತಿಸಿ, ಸಂಭ್ರಮಾಚರಿಸಿದರು.
ಈಶ್ವರಮಂಗಲದಿಂದ ಬೆಳಗ್ಗಿನ ವೇಳೆ ಪುತ್ತೂರಿಗೆ ಹೋಗುವ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಸ್ಥಳಾವಕಾಶವಿಲ್ಲದೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿತ್ತು. ಈ ಕುರಿತು ಈಶ್ವರಮಂಗಲದ ಕಾಂಗ್ರೆಸ್ ಮುಖಂಡರು, ಜನಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಿ, ಹೊಸ ಬಸ್ ಸಂಚಾರದ ಬೇಡಿಕೆ ಮುಂದಿಟ್ಟಿದ್ದರು. ನೆಟ್ಟಣಿಗೆ ಮುಡ್ನೂರು ಗ್ರಾಮಸಭೆಯಲ್ಲೂ ಬಸ್ ಬೇಡಿಕೆಯ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು. ಬೇಡಿಕೆಗೆ ಸ್ಪಂದಿಸಿದ ಶಾಸಕರ ಸೂಚನೆಯಂತೆ ಸೋಮವಾರದಿಂದ ಬಸ್ ಸಂಚಾರ ಆರಂಭಗೊಂಡಿದೆ.
ಸೋಮವಾರ ಬೆಳಗ್ಗೆ 8.15ಕ್ಕೆ ಈಶ್ವರಮಂಗಲಕ್ಕೆ ಬಂದ ಕೆಎಸ್ಸಾರ್ಟಿಸಿ ಬಸ್ಸನ್ನು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ಉಪಾಧ್ಯಕ್ಷ ರಾಮ ಮೇನಾಲ ಈಶ್ವರಮಂಗಲ ಭಾಗದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಬೆಳಗ್ಗಿನ ವೇಳೆ ಬಸ್ ವ್ಯವಸ್ಥೆ ಇಲ್ಲದೆ ಬಹಳಷ್ಟು ಸಮಸ್ಯೆಯಾಗುತ್ತಿತ್ತು. ಶಾಸಕರು ಬೆಳಗ್ಗೆ ಈಶ್ವರಮಂಗಲದಿಂದ ಹೊರಡುವ ಬಸ್ ವ್ಯವಸ್ಥೆ ಕಲ್ಪಿಸಿಕೊಡುವ ಮೂಲಕ ಈ ಭಾಗದ ಜನತೆಯ ಬಹು ಸಮಯದ ಬೇಡಿಕೆಗೆ ಸ್ಪಂದಿಸಿದ್ದಾರೆ ಎಂದರು.
ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ, ಸದಸ್ಯ ಇಬ್ರಾಹಿಂ ಪಳ್ಳತ್ತೂರು, ನೆಟ್ಟಣಿಗೆ ಮುಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಎನ್.ಮೂಸನ್, ಕಾಂಗ್ರೆಸ್ ಮುಖಂಡರಾದ ಉದ್ಯಮಿ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ವಿಕ್ರಂ ರೈ ಸಾಂತ್ಯ, ಮೆನಾಲ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ಲಾ ಮೆಣಸಿನಕಾನ, ಗಿರೀಶ್ ರೈ ಮರಕ್ಕಡ,ಅಶ್ರಫ್ ನೇರೋಳ್ತಡ್ಕ, ಶ್ರೀಶಕುಮಾರ್ ರೈ ಮರಕ್ಕಡ ಮತ್ತಿತರರು ಇದ್ದರು.