ಅಮೆರಿಕ ಹಾಗೂ ರಷ್ಯಾ ಪಡೆ ಗುಂಡಿನ ದಾಳಿ ಆರಂಭಿಸಿದಾಗ ಅದು ವಿಶ್ವಯುದ್ಧವಾಗುತ್ತದೆ: ಜೋ ಬೈಡೆನ್​

Biden
Published on

ವಾಷಿಂಗ್ಟನ್​: ಉಕ್ರೇನ್​ ವಿಚಾರವಾಗಿ ಅಮರಿಕ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಶೀತಲ ಸಮರ ಮತ್ತಷ್ಟು ಉಲ್ಬಣಗೊಂಡಿದ್ದು, ಉಕ್ರೇನ್​ನಲ್ಲಿರುವ ಅಮರಿಕನ್ನರಿಗೆ ಅಧ್ಯಕ್ಷ ಜೋ ಬೈಡೆನ್​ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬೈಡೆನ್​, ತಕ್ಷಣ ಅಮೆರಿಕನ್ನರು ಉಕ್ರೇನ್​ ಬಿಡುವಂತೆ ಕರೆ ನೀಡಿದ್ದಾರೆ. ರಷ್ಯಾ ಸೈನಿಕರ ಪಡೆ ಉಕ್ರೇನ್​ ಗಡಿಯಲ್ಲಿ ಬೀಡುಬಿಟ್ಟಿರುವುದರಿಂದ ಬೈಡೆನ್​ ಈ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ನಾವು ವಿಶ್ವದ ಅತಿದೊಡ್ಡ ಸೈನ್ಯದೊಂದಿಗೆ ವ್ಯವಹರಿಸುತ್ತಿದ್ದೇವೆ. ಇದು ತುಂಬಾ ವಿಭಿನ್ನವಾದ ಪರಿಸ್ಥಿತಿ ಮತ್ತು ವಿಷಯಗಳು ತ್ವರಿತವಾಗಿ ಬೆಳೆಯಬಹುದು ಎಂದು ಬೈಡೆನ್​ ಹೇಳಿದ್ದಾರೆ.

ಉಕ್ರೇನ್​ಗೆ ನಮ್ಮ ಸೇನಾ ಪಡೆಯನ್ನು ಕಳುಹಿಸುವ ಉದ್ದೇಶವಿಲ್ಲ. ಯಾವಾಗ ಅಮೆರಿಕನ್ನರ ಪಡೆ ಮತ್ತು ರಷ್ಯಾ ಪಡೆ ಗುಂಡಿನ ದಾಳಿ ಆರಂಭಿಸುತ್ತದೋ ಆವಾಗ ಅದು ವಿಶ್ವಯುದ್ಧವಾಗುತ್ತದೆ. ನಾವೀಗ ತುಂಬಾ ವಿಭಿನ್ನವಾದ ಪ್ರಪಂಚದಲ್ಲಿದ್ದೇವೆ ಎಂದು ಬೈಡೆನ್​ ಹೇಳಿದರು.

ರಷ್ಯಾ ಬೆಲರಸ್​ನಾದ್ಯಂತ ಟ್ಯಾಂಕರ್​ಗಳನ್ನು ಕಳುಹಿಸಿದ್ದು, ಭಾರಿ ಕ್ಷಿಪ್ಪಣಿಗಳು ಮತ್ತು ಸಾಕಷ್ಟು ಸೈನಿಕರನ್ನು ರಷ್ಯಾ ಉಕ್ರೇನ್​ ಗಡಿಯಲ್ಲಿ ಜಮಾವಣೆ ಮಾಡುತ್ತಿರುವುದು ತುಂಬಾ ಅಪಾಯಕಾರಿ ಬೆಳವಣಿಗೆ ಎಂದು ಅಮೆರಿಕದ ನ್ಯಾಟೋ ಪಡೆ ಹೇಳಿಕೆ ನೀಡಿದ ಬೆನ್ನಲ್ಲೇ ಬೈಡೆನ್​​ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಕ್ರೇನ್​ಗಾಗಿ ಅಮೆರಿಕ ಮತ್ತು ರಷ್ಯಾ ಹಠಕ್ಕೆ ಬಿದ್ದಿವೆ. ಇತ್ತ ಒಂದು ಹೆಜ್ಜೆ ಮುಂದಿಟ್ಟಿರುವ ರಷ್ಯಾ ಗಡಿಯಲ್ಲಿ ಸರ್ವಸನ್ನದ್ಧ ಸ್ಥಿತಿಯಲ್ಲಿರುವುದು ಆತಂಕಕಾರಿ ಬೆಳವಣಿಗೆ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net