

ನವದೆಹಲಿ: ವಿಚಾರ ಒಂದಕ್ಕೆ ವಕೀಲರ ಗುಂಪುಗಳ ನಡುವೆ ಜಗಳ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಗುಂಡಿನ ದಾಳಿ ನಡೆಸಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ತೀಸ್ ಹಜಾರಿ ನ್ಯಾಯಾಲಯದ ಆವರಣದಲ್ಲಿ ನಡೆದಿದೆ.
ವಕೀಲರ ಎರಡು ಗುಂಪುಗಳ ವಿಚಾರ ಒಂದಕ್ಕೆ ಗಲಾಟೆ ಶುರುವಾಗಿದ್ದು, ಈ ವೇಳೆ ಇಬ್ಬರು ವಕೀಲರು ಪರಸ್ಪರ ಗುಂಡಿನ ದಾಳಿ ಮೂಲಕ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಜಂಟಿ ಪೊಲೀಸ್ ಆಯುಕ್ತ ಪರಮಾದಿತ್ಯ ಎರಡು ವಕೀಲರ ಗುಂಪುಗಳ ನಡುವೆ ಗಲಾಟೆಯಾಗಿದ್ದು, ಈ ವೇಳೆ ಗುಂಡಿನ ದಾಳಿಯಾಗಿದೆ. ಪ್ರಕರಣ ಸಂಬಂಧ ಗನ್ಅನ್ನು ವಶಕ್ಕೆ ಪಡೆಯಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ತನಿಖೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಾರ್ ಕೌನ್ಸಿಲ್ ಚೇರ್ಮನ್ ಕೆ.ಕೆ. ಮನನ್ ಈ ಕುರಿತು ವಿಸ್ತೃತ ತನಿಖೆ ನಡೆಸಿ ಆದಷ್ಟು ಬೇಗ ವರದಿ ನೀಡುವಂತೆ ಆದೇಶಿಸಲಾಗಿದೆ. ವಶಪಡಿಸಿಕೊಂಡಿರುವ ಬಂದೂಕಿಗೆ ಲೈಸೆನ್ಸ್ ಇದೆಯಾ ಇಲ್ಲವಾ ಎಂಬುದುರ ಕುರಿತು ಸಹ ತಿಳಿದುಕೊಳ್ಳುವಂತೆ ಸೂಚಿಸಲಾಗಿದೆ.
ನ್ಯಾಯಾಲಯದ ಆವರಣದಲ್ಲಿ ವಕೀಲರು ಅಲ್ಲದೇ ಯಾರು ಸಹ ಈ ರೀತಿ ಬಂದೂಕುಗಳನ್ನು ಬಳಸುವಂತಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಅದು ಶಿಕ್ಷಾರ್ಹಾ ಅಪರಾಧ ಎಂದು ಬಾರ್ ಕೌನ್ಸಿಲ್ ಚೇರ್ಮನ್ ಕೆ.ಕೆ. ಮನನ್ ಹೇಳಿದ್ದಾರೆ.