ನ್ಯಾಯವಾದಿಗಳ ನ್ಯಾಯಯುತ ಬೇಡಿಕೆ; ವಕೀಲರ ರಕ್ಷಣೆಗೆ ಬೇಕು ಕಾಯ್ದೆ ಬಲ

lawyers
Published on

ಸುಪ್ರಸಿದ್ಧ ವಕೀಲರೂ ಆಗಿದ್ದ ದೇಶದ ಪ್ರಥಮ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರ ಜನ್ಮದಿನವನ್ನು ಭಾರತದಲ್ಲಿ ವಕೀಲರ ದಿನವೆಂದು ಆಚರಿಸಲಾಗುತ್ತದೆ. ಈ ನಿಮಿತ್ತ ವಿಜಯವಾಣಿ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ವಿಶೇಷ ಸಂವಾದದಲ್ಲಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್. ವಿವೇಕ್ ಸುಬ್ಬಾರೆಡ್ಡಿ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್​ಬಿಸಿ) ಸದಸ್ಯ, ಹಿರಿಯ ವಕೀಲ ಎಸ್. ಹರೀಶ್ ಪಾಲ್ಗೊಂಡು ವಕೀಲರ ಸಮುದಾಯಕ್ಕೆ ಸಿಗಬೇಕಾಗಿರುವ ಸೌಲಭ್ಯಗಳು ಸೇರಿ ಹತ್ತು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

 ನ್ಯಾಯದಾನ ಪ್ರಕ್ರಿಯೆಯಲ್ಲಿ ನ್ಯಾಯಮೂರ್ತಿಗಳಷ್ಟೇ ಮಹತ್ವದ ಪಾತ್ರವನ್ನು ನ್ಯಾಯವಾದಿಗಳು ಕೂಡ ನಿರ್ವಹಿಸುತ್ತಾರೆ. ಈ ನಿಟ್ಟಿನಲ್ಲಿ ವಕೀಲರಿಗೆ ಸೂಕ್ತ ರಕ್ಷಣೆ ಕಲ್ಪಿಸುವುದು ಅತ್ಯಗತ್ಯ. ಇದನ್ನಾಧರಿಸಿ ವಕೀಲರ ರಕ್ಷಣೆ ಕಾಯ್ದೆಯನ್ನು ತ್ವರಿತವಾಗಿ ಜಾರಿಗೊಳಿಸಬೇಕಾದ ಅಗತ್ಯ ಇದೆ ಎಂಬ ಪ್ರಬಲ ವಾದವನ್ನು ನ್ಯಾಯವಾದಿಗಳ ಸಮೂಹ ರಾಜ್ಯ ಸರ್ಕಾರದ ಮುಂದೆ ಮಂಡಿಸಿದೆ.

ವಕೀಲರ ರಕ್ಷಣೆ ಕಾಯ್ದೆ ಕರಡನ್ನು ಈಗಾಗಲೆ ಸಿದ್ಧಪಡಿಸಲಾಗಿದ್ದು ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆಗಾಗಿ ಮಂಡಿಸಲಾಗಿದೆ. ಸದ್ಯ ಬೆಳಗಾವಿಯಲ್ಲಿ ಸೋಮವಾರದಿಂದ (ಡಿ.4) ಆರಂಭವಾಗುತ್ತಿರುವ ವಿಧಾನಮಂಡಲದ ಅಧಿವೇಶನದಲ್ಲಿ ಈ ವಿಧೇಯಕವನ್ನು ಮಂಡಿಸಿ ಒಪ್ಪಿಗೆ ಪಡೆಯುವ ನಿರೀಕ್ಷೆ ಹೆಚ್ಚಿದೆ. ಕಾಯ್ದೆ ಜಾರಿಯಾದರೆ ವಕೀಲರು ನಿರ್ಭಯವಾಗಿ ಕಾರ್ಯ ನಿರ್ವಹಿಸಬಹುದಾಗಿದ್ದು, ಕಕ್ಷೀದಾರರಿಗೂ ಕೂಡ ತಮ್ಮ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಕಾಯ್ದೆ ಬಲ ಸಿಗಲಿದೆ.

ಇಂಥದ್ದೊಂದು ವಕೀಲ ಹಾಗೂ ಕಕ್ಷೀದಾರ ಸ್ನೇಹಿ ಕಾಯ್ದೆಯನ್ನು ಅನುಷ್ಠಾನಕ್ಕೆ ತರುವಂತೆ ದಶಕದಿಂದ ಹೋರಾಟ ನಡೆದಿದೆ. ಇದೀಗ ಸರ್ಕಾರ ನ್ಯಾಯವಾದಿಗಳ ಅಹವಾಲನ್ನು ಕಾಯ್ದೆ ರೂಪದಲ್ಲಿ ತರಲು ಹೊರಟಿರುವುದು ಮೆಚ್ಚುವಂಥದ್ದು ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್. ವಿವೇಕ್ ರೆಡ್ಡಿ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್​ಬಿಸಿ) ಸದಸ್ಯ ಎಸ್.ಹರೀಶ್ ತಿಳಿಸಿದ್ದಾರೆ.

ಉದ್ದೇಶಿತ ಕಾಯ್ದೆಯಲ್ಲಿ ಕತ್ಯರ್ವಗಳನ್ನು ನಿರ್ವಹಿಸುವಾಗ ವಕೀಲರ ಮೇಲೆ ಬೆದರಿಕೆ ಅಥವಾ ದಾಳಿ ಮಾಡುವವರಿಗೆ ಕಠಿಣ ಶಿಕ್ಷೆ ನೀಡುವ ಅಂಶ ಒಳಗೊಂಡಿದೆ. (ವಕೀಲರ ಮೇಲಿನ ಹಲ್ಲೆ ಪ್ರಕರಣದ ಆರೋಪಿಗೆ 1 ಲಕ್ಷ ರೂ. ದಂಡ, ಕನಿಷ್ಠ 6 ತಿಂಗಳಿಂದ ಗರಿಷ್ಠ 3 ವರ್ಷ ಜೈಲುಶಿಕ್ಷೆ ವಿಧಿಸುವುದು ಸೇರಿ ಇತರ ಅಂಶಗಳಿವೆ) ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಇಡೀ ದೇಶ ಕಾತರದಿಂದ ನಿರೀಕ್ಷಿಸುತ್ತಿದೆ ಎಂದು ವಿವರಿಸಿದರು.

ಪ್ರತಿಭೆಯುಳ್ಳವರಿಗೆ ಅವಕಾಶ ಹೆಚ್ಚು: ಯಾರಲ್ಲಿ ಪ್ರತಿಭೆ ಇದೆಯೋ ಅಂತಹವರಿಗೆ ಖಂಡಿತಾ ಅವಕಾಶಗಳು ಅರಸಿ ಬರುತ್ತವೆ. ವಕೀಲರುವ ತಮ್ಮಲ್ಲಿರುವ ಪ್ರತಿಭೆಯನ್ನು ಕೋರ್ಟ್ ನಲ್ಲಿ ಸಾಕ್ಷೀಕರಿಸಿದ್ದೇ ಆದ್ದಲ್ಲಿ ಸರ್ಕಾರದ ಮಟ್ಟದಲ್ಲಿ ಹಾಗೂ ಕಾಪೋರೇಟ್ ವಲಯಗಳಲ್ಲಿಯೂ ವಿಫುಲ ಅವಕಾಶಗಳಿದ್ದು, ಯುವ ನ್ಯಾಯವಾದಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿವೇಕ್ ರೆಡ್ಡಿ ಸಲಹೆ ನೀಡಿದರು.

400 ಕೋಟಿ ರೂ. ಯೋಜನೆ: ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ಸಮಗ್ರ ಮೂಲಸೌಕರ್ಯವನ್ನು ಒದಗಿಸಲು 400 ಕೋಟಿ ರೂ. ಯೋಜನೆಯನ್ನು ರೂಪಿಸಲಾಗಿದೆ. ಇದರನ್ವಯ ಹಾಲಿ ಹೈಕೋರ್ಟ್ ನಲ್ಲಿರುವ ವಿಡಿಯೋ ಸಂವಾದ ವ್ಯವಸ್ಥೆ ಬಳಸುವ ಸಾಫ್ಟ್​ವೇರ್/ಹಾರ್ಡ್​ವೇರ್ ಮೇಲ್ದರ್ಜೆ ಸಹಿತ ಇತರ ಸೌಕರ್ಯ ಹಾಗೂ ಜಿಲ್ಲೆ, ತಾಲೂಕು ನ್ಯಾಯಾಲಯಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇದರ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಸದ್ಯದಲ್ಲಿಯೇ ಅಂತಿಮವಾಗುವ ಸಾಧ್ಯತೆ ಇದೆ. ಈ ಯೋಜನೆ ಜಾರಿಗೆ ಬಂದಲ್ಲಿ ಹಂತ ಹಂತವಾಗಿ ಎಲ್ಲ ನ್ಯಾಯಾಲಗಳಲ್ಲಿ ಅಗತ್ಯ ಸೌಕರ್ಯವು ದೊರೆಯಲಿದೆ ಎಂದು ವಿವೇಕ್ ರೆಡ್ಡಿ ತಿಳಿಸಿದರು.

ನಕಲಿ ಸರ್ಟಿಫಿಕೇಟ್ ಹಾವಳಿಗೆ ಬ್ರೇಕ್: ಕಾನೂನು ಪದವಿ ಪಡೆದಿರುವಂತೆ ನಕಲಿ ಸರ್ಟಿಫಿಕೇಟ್​ಗಳನ್ನು ತಂದು ಬಾರ್ ಕೌನ್ಸಿಲ್​ಗೆ ನೀಡಿ ಸದಸತ್ವ ಪಡೆದುಕೊಳ್ಳುವಂತಹ ಪ್ರಕರಣಗಳು ನಡೆದಿವೆ. ಇವುಗಳನ್ನು ತಡೆಗಟ್ಟಲು ಸೂಕ್ತವಾದ ವ್ಯವಸ್ಥೆ ನಮ್ಮಲ್ಲಿ ಇಲ್ಲ ಎಂದು ಹರೀಶ್ ಬೇಸರ ವ್ಯಕ್ತಪಡಿಸಿದರು.

ಸ್ಟೈಪೆಂಡ್ ಹೆಚ್ಚಳ ಅಗತ್ಯ: ವಕೀಲರ ವೃತ್ತಿ ಲಾಭದಾಯಕಲ್ಲ. ಕಾನೂನು ಪದವಿ ಪಡೆದವರು 4-5 ವರ್ಷ ಅವಧಿಯಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸಬೇಕಿದೆ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯುವ ವಕೀಲರ ನೆರವಿಗೆ ನಿಲ್ಲಬೇಕಿದೆ. ಕಾನೂನು ಪದವಿ ಪಡೆದವರು ಸುಮಾರು ಐದು ವರ್ಷ ಹಿರಿಯ ವಕೀಲರ ಬಳಿ ಉಚಿತವಾಗಿ ತರಬೇತಿ ಪಡೆಯಬೇಕಾಗುತ್ತದೆ. ಇಂತಹವರಿಗೆ ನೀಡುವ ಸ್ಟೈಪೆಂಡ್ ಜೀವನ ನಿರ್ವಹಣೆಗೆ ಅನುಕೂಲವಾಗುತ್ತದೆ. ಪ್ರಸ್ತುತ ಈ ಸೌಲಭ್ಯ ಸಾಮಾನ್ಯ ವರ್ಗಕ್ಕೆ 2 ಸಾವಿರ ರೂ. ಹಾಗೂ ಪರಿಶಿಷ್ಟರಿಗೆ 5 ಸಾವಿರ ರೂ. ನೀಡುತ್ತಿದ್ದು, ಈ ಮೊತ್ತವನ್ನು ಎಲ್ಲ ವರ್ಗದವರಿಗೂ ಸಮಾನವಾಗಿ ನೀಡಬೇಕಿದೆ. ವಕೀಲರಿಗೆ ಆರೋಗ್ಯ ವಿಮೆ, ಜೀವವಿಮೆ, ಗ್ರಂಥಾಲಯ, ಡಿಜಿಟಲ್ ಲೈಬ್ರರಿ ಒದಗಿಸಬೇಕು ಎಂದು ವಕೀಲರ ಸಂಘ ಹಾಗೂ ಪರಿಷತ್ ಸರ್ಕಾರಕ್ಕೆ ಮನವಿ ಮಾಡಿದೆ.

ಯುವ ವಕೀಲರಿಗೆ ತರಬೇತಿ: ಯುವ ವಕೀಲರಿಗೆ ವೃತ್ತಿಪರತೆ ಹೆಚ್ಚಿಸಲು ರಾಜ್ಯ ವಕೀಲ ಪರಿಷತ್ತು ವಿಡಿಯೋ ಕಾನ್ಪೆರೆನ್ಸ್ ಮೂಲಕ ತರಬೇತಿ ನೀಡಲಾಗುತ್ತಿದೆ. ಸರ್ಟಿಫಿಕೇಟ್ ಆಫ್ ಪ್ರಾಕ್ಟೀಸಿಂಗ್ (ಸಿಒಪಿ) ಅರ್ಜಿ ಸಲ್ಲಿಸದವರನ್ನು ನಾನ್ ಪ್ರಾಕ್ಟೀಸಿಂಗ್ ಅಡ್ವೋಕೇಟ್ಸ್ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಸಿಒಪಿ ಸಲ್ಲಿಸಲು ನ.15 ಕೊನೇ ದಿನ ನಿಗದಿಪಡಿಸಲಾಗಿತ್ತು. ಬೆಂಗಳೂರು ವಕೀಲರ ಸಂಘದ ಮನವಿ ಮೇರೆಗೆ ಡಿ.31ರವರೆಗೆ ವಿಸ್ತರಿಸಲಾಗಿದೆ ಎಂದು ಹರೀಶ್ ಮಾಹಿತಿ ನೀಡಿದರು.

ವಕೀಲರ ದಿನಾಚರಣೆ ಏಕೆ?: ಭಾರತದ ಮೊದಲ ರಾಷ್ಟ್ರಪತಿ ಮತ್ತು ಸ್ವತಃ ವಕೀಲರಾಗಿದ್ದ ಡಾ.ರಾಜೇಂದ್ರ ಪ್ರಸಾದ್ ಜನ್ಮದಿನವಾದ ಡಿ.3ರಂದು ವಕೀಲ ಸಮುದಾಯದಿಂದ ಭಾರತದಲ್ಲಿ ವಕೀಲರ ದಿನವನ್ನು ಆಚರಿಸಲಾಗುತ್ತದೆ. ಡಾ. ರಾಜೇಂದ್ರ ಪ್ರಸಾದ್(ಡಿ.3, 1884 - ಫೆ.28, 1963) ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿ. ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಮತ್ತು ಕಾಂಗ್ರೆಸ್ ಪಕ್ಷದ ನಾಯಕರಾಗಿ, ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು 1948 ರಿಂದ 1950 ರವರೆಗೆ ಗಣರಾಜ್ಯದ ಸಂವಿಧಾನವನ್ನು ರಚಿಸಿದ ಸಂವಿಧಾನ ಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರು ಸ್ವತಂತ್ರ ಭಾರತದ ಮೊದಲ ಸರ್ಕಾರದಲ್ಲಿ ಸಂಕ್ಷಿಪ್ತವಾಗಿ ಕ್ಯಾಬಿನೆಟ್ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು.

ಸಂಘರ್ಷಕ್ಕೆ ಗೌರವವೇ ಮದ್ದು: ವಕೀಲರು-ಪೊಲೀಸರು ಹಾಗೂ ವಕೀಲರು-ಪತ್ರಕರ್ತರ ನಡುವೆ ಆಗಾಗ್ಗೆ ತಿಕ್ಕಾಟ ನಡೆಯುತ್ತಿರುತ್ತದೆ. ಹಿರಿಯ ಪೊಲೀಸ್ ಅಧಿಕಾರಿಗಳು ವಕೀಲರ ವೃತ್ತಿಗೆ ಗೌರವ ಕೊಡುವುದನ್ನು ಕೆಳ ಹಂತದ ಪೊಲೀಸ್ ಸಿಬ್ಬಂದಿಗೆ ತಿಳಿಸಿಕೊಡಬೇಕು. ಆದರೆ, ಕೆಲ ಕಿರಿಯ ಅಧಿಕಾರಿಗಳು ವಕೀಲರ ಗೌರವಕ್ಕೆ ಧಕ್ಕೆ ಆಗುವಂತೆ ವರ್ತಿಸುತ್ತಾರೆ. ಕೆಲವೊಮ್ಮೆ ವಕೀಲರು ಕೂಡ ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ಇದಕ್ಕೆ ಯಾವುದೇ ಶಿಷ್ಟಾಚಾರ ಇಲ್ಲದ ಕಾರಣ ಪೊಲೀಸರು ಹಾಗೂ ವಕೀಲರ ಮಧ್ಯೆ ಭಿನ್ನಾಭಿಪ್ರಾಯಗಳು ಏಳುತ್ತಿವೆ. ಇಬ್ಬರೂ ತಮ್ಮ ತಮ್ಮ ಕರ್ತವ್ಯವನ್ನು ಅರಿತು ವೃತ್ತಿಗೆ ಗೌರವವನ್ನು ನೀಡುವ ಮೂಲಕ ಇಂತಹ ಪ್ರಕರಣಗಳನ್ನು ತಾವಾಗಿಯೇ ನಿವಾರಿಸಿಕೊಳ್ಳಬೇಕು ಎಂದು ಎಸ್.ಹರೀಶ್ ಸಲಹೆ ನೀಡಿದರು.

ಪಿಐಎಲ್ ಸಲ್ಲಿಕೆ ನಿಯಮ ತಿದ್ದುಪಡಿ

  • ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಇರುವ ನಿಯಮಗಳ ಕುರಿತು ತಿದ್ದುಪಡಿ ಮಾಡಲಾಗಿದೆ. ಜತೆಗೆ ಕೆಲವೊಂದು ಕಠಿಣ ಕ್ರಮವನ್ನು ರೂಪಿಸಲಾಗಿದೆ. ಈ ಮೂಲಕ
  • ಇದರ ಸದುದ್ದೇಶ ಕಾಪಾಡಿಕೊಳ್ಳಬಹುದು ಮತ್ತು ಅವಕಾಶ ರ್ದಬಳಕೆ ತಡೆಯ
  • ಬಹುದು. ಅಲ್ಲದೆ ಒಮ್ಮೆ ಸಲ್ಲಿಕೆಯಾದ ಅರ್ಜಿಗಳು ಸುಲಭವಾಗಿ ಹಿಂಪಡೆಯಲು ಅಥವಾ ವಜಾ ಮಾಡಲು ಸಾಧ್ಯವಾಗದ ಕಾರಣ ಪಿಐಎಲ್​ಗಳು ಹೆಚ್ಚು ಮಾನ್ಯತೆ ಪಡೆದುಕೊಂಡಿವೆ ಎಂದು ಇಬ್ಬರೂ ನ್ಯಾಯವಾದಿಗಳು ಮಾಹಿತಿ ಹಂಚಿಕೊಂಡರು.

ಮಹಿಳಾ ವಕೀಲರಿಗೆ ವಿಪುಲ ಅವಕಾಶ:ಪ್ರಸ್ತುತ ಕೌಟುಂಬಿಕ ನ್ಯಾಯಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ವಕೀಲರು ಕಾರ್ಯನಿರ್ವಹಿಸುತ್ತಿದ್ದಾರೆ. ಭವಿಷ್ಯದಲ್ಲಿ ಹೈಕೋರ್ಟ್ ಹಾಗೂ ಸುಪ್ರಿಂಕೋರ್ಟ್​ನಲ್ಲಿ ಮಹಿಳಾ ನ್ಯಾಯವಾದಿಗಳ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ. ಮಹಿಳಾ ವಕೀಲರು ಪ್ರತಿಭಾವಂತರಿದ್ದು, ಅವರಿಗೂ ಸಮಾನ ಅವಕಾಶಗಳು ಕಾನೂನಿನ ಅಡಿಯಲ್ಲಿ ದೊರೆಯುತ್ತಿವೆ. ಆದರೆ, ಕೆಲ ಕಾರಣಗಳಿಂದ ಹೆಚ್ಚಿನ ಅವಕಾಶವನ್ನು ಸದ್ಬಳಕೆ ಮಾಡಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೂ ಅವರ ಸಾಧನೆಗೆ ಪೂರಕವಾದ ಸಹಕಾರವನ್ನು ಕುಟುಂಬದವರು ಹಾಗೂ ಸಹೋದ್ಯೋಗಿಗಳು ನೀಡಬೇಕು ಎಂದು ಹರೀಶ್ ಅನಿಸಿಕೆ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್ ಸಿಜೆಗೆ ಪತ್ರ: ರಾಜ್ಯದಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದ ಹಲವಾರು ಪ್ರಕರಣಗಳಿವೆ. ಇವುಗಳನ್ನು ತ್ವರಿತವಾಗಿ ಬಗೆಹರಿಸಿ ನ್ಯಾಯದಾನ ವಿಳಂಬವಾಗದಂತೆ ಜಾಗ್ರತೆ ವಹಿಸಬೇಕು. ಕಾನೂನು ಅಡಿಯಲ್ಲಿ ಕೆಲಸ ಮಾಡುವವರು ಪಾರದರ್ಶಕತೆಗೆ ಹೆಚ್ಚು ಆದ್ಯತೆ ನೀಡಬೇಕು. ಈ ವಿಷಯದಲ್ಲಿ ಹೈಕೋರ್ಟ್​ಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಅವರು ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿ ಕೆಲ ಅಂಶಗಳಿರುವ ಮನವಿ ಪತ್ರವನ್ನು ಶೀಘ್ರದಲ್ಲೇ ಸಿಜೆಗೆ ಸಲ್ಲಿಸಲಾಗುವುದು. ಇದರಿಂದ ಕಕ್ಷಿದಾರರಿಗೆ ಉತ್ತಮ ರೀತಿಯಲ್ಲಿ ಸರಿಯಾದ ಸಮಯಕ್ಕೆ ನ್ಯಾಯ ಸಿಗುವ ಸ್ಥಿತಿ ನಿರ್ವಣವಾಗಬೇಕು ಎಂಬುದು ನಮ್ಮ ಉದ್ದೇಶ ಎಂದು ವಿವೇಕ್ ರೆಡ್ಡಿ ವಿವರಿಸಿದರು.

ಸರ್ಕಾರಕ್ಕೆ ವಕೀಲರ ಮನವಿಗಳಿವು

  • ವಕೀಲರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು
  • ವಕೀಲರಿಗೆ ಜೀವವಿಮೆ ಸೌಲಭ್ಯ ಒದಗಿಸಬೇಕು
  • ವಕೀಲರಿಗೆ (ಎಲ್ಲ ವರ್ಗದವರಿಗೂ) ಸ್ಟೈಪೆಂಡ್ ಮೊತ್ತ ಹೆಚ್ಚಿಸಬೇಕು
  • ಕೋರ್ಟ್​ಗಳಲ್ಲಿ ಗ್ರಂಥಾಲಯ, ಡಿಜಿಟಲ್ ಲೈಬ್ರರಿ ನಿರ್ವಿುಸಬೇಕು
  • ಹೈಕೋರ್ಟ್ ಸೇರಿ ಅಧೀನ ಕೋರ್ಟ್​ಗಳಲ್ಲಿ ಶೌಚಗೃಹ ಸಂಖ್ಯೆ ಹೆಚ್ಚಿಸುವುದು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net