ಜೈಲಿನಲ್ಲಿ ರಿಯಾ ಏನ್​ ಮಾಡ್ತಿದ್ರಂತೆ ಗೊತ್ತಾ? ಅವರ ವಕೀಲರು ಹೇಳ್ತಾರೆ ಕೇಳಿ ...

Rhea Chakraborty-Final
Published on

ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್​ ಸಿಂಗ್​ ರಜಪೂತ್​ ಗೆಳತಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೋವಿಕ್​​ ಚಕ್ರವರ್ತಿಗೆ ಬುಧವಾರ ಷರತ್ತುಬದ್ಧ ಬೇಲ್​ ಸಿಕ್ಕಿದೆ. ಸುಮಾರು 28 ದಿನಗಳ ಕಾಲ ಬೈಕುಲಾ ಜೈಲಿನಲ್ಲಿದ್ದ ರಿಯಾ ಇದೀಗ ಮನೆಗೆ ವಾಪಸ್ಸಾಗಿದ್ದಾರೆ.

ಜೈಲಿನಲ್ಲಿದ್ದ 28 ದಿನಗಳ ಕಾಲ ರಿಯಾ ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಈ ವಿಷಯವಾಗಿ ರಿಯಾ ಚಕ್ರವರ್ತಿ ಅವರ ವಕೀಲರಾದ ಸತೀಶ್​ ಮಾನೆಶಿಂಧೆ ಮಾತನಾಡಿದ್ದಾರೆ. ರಿಯಾ ಚಕ್ರವರ್ತಿ ಜೈಲಿನಲ್ಲಿ ಏನೆಲ್ಲಾ ಮಾಡುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

ಈ ಕುರಿತು ಸುದ್ದಿವಾಹಿನಿಯೊಂದರ ಜತೆಗೆ ಮಾತನಾಡಿರುವ ಅವರು, 'ನಾನು ನನ್ನ ಕಕ್ಷಿದಾರರನ್ನು ಭೇಟಿ ಮಾಡುವುದಕ್ಕೆ ಸಾಮಾನ್ಯವಾಗಿ ಜೈಲಿಗೆ ಹೋಗುವುದಿಲ್ಲ. ಆದರೆ, ಬಹಳ ವರ್ಷಗಳ ನಂತರ ರಿಯಾ ಅವರನ್ನು ನೋಡುವುದಕ್ಕೆ ಹೋಗಿದ್ದೆ. ಏಕೆಂದರೆ, ಅವರು ಸಾಕಷ್ಟು ಕಿರುಕುಳಕ್ಕೊಳಗಾಗಿದ್ದರು. ಅಷ್ಟೆಲ್ಲಾ ಸಮಸ್ಯೆಗಳನ್ನು ಆಕೆ ಹೇಗೆ ಎದುರಿಸುತ್ತಿದ್ದಾರೆ ಎಂಬ ಕುತೂಹಲ ನನಗೆ ಸಹಜವಾಗಿಯೇ ಇತ್ತು. ಆದರೆ, ಬಹಳ ಖುಷಿಯಿಂದ ಇದ್ದಿದ್ದು ನಿಜಕ್ಕೂ ಆಶ್ಚರ್ಯವಾಯಿತು. ಸ್ವತಃ ಯೋಗ ಮಾಡುವುದರ ಜತೆಗೆ, ಬೇರೆಯವರಿಗೂ ಯೋಗ ಹೇಳಿಕೊಡುತ್ತಿದ್ದರು' ಎಂದು ಸತೀಶ್​ ಹೇಳಿದ್ದಾರೆ.

ಜೈಲಿನ ವಾತಾವಾರಣಕ್ಕೆ ರಿಯಾ ಚೆನ್ನಾಗಿ ಹೊಂದಿಕೊಂಡಿದ್ದರು ಎಂದು ಹೇಳಿರುವ ಸತೀಶ್​, 'ರಿಯಾ ಸಾಮಾನ್ಯರಂತೆ ಜೈಲಿನಲ್ಲಿದ್ದಳು. ಆರ್ಮಿ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಆಕೆಗೆ, ಎಂತಹ ಪರಿಸ್ಥಿತಿಯನ್ನಾದರೂ ಎದುರಿಸುವ ಮತ್ತು ಎಂತಹ ವಾತಾವರಣದಲ್ಲಿ ಬೇಕಾದರೂ ಬದುಕುವ ಸಾಮರ್ಥ್ಯವಿದೆ. ಆಕೆಗೆ ಯಾರನ್ನಾದರೂ ಎದುರಿಸುವ ಶಕ್ತಿ ಇದೆ. ಸುಶಾಂತ್​ ಅವರ ಇಡೀ ಕುಟುಂಬ ಆಕೆಯ ಬೆನ್ನು ಬಿದ್ದಿದೆ. ಆಕೆ ಸುಶಾಂತ್​ ಜತೆಗೆ ಲಿವ್​-ಇನ್​ ಸಂಬಂಧ ಇಟ್ಟುಕೊಂಡಿದ್ದರು ಎಂಬ ಒಂದೇ ಕಾರಣಕ್ಕೆ ಸುಶಾಂತ್​ ಕುಟುಂಬದವರು, ಎನ್​ಸಿಬಿ, ಸಿಬಿಐ ಮತ್ತು ಇಡಿ ಅವರ ಹಿಂದೆ ಬಿದ್ದಿದೆ' ಎಂದು ಹೇಳಿದ್ದಾರೆ.

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣದಲ್ಲಿ ರಿಯಾ ಅವರನ್ನು ವಿಚರಣೆ ಮಾಡಿದಾಗ, ಅವರಿಗೆ ಡ್ರಗ್ಸ್​ ನಂಟಿರುವುದು ಪತ್ತೆಯಾಗಿತ್ತು. ಈ ಸಂಬಂಧ ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ಅಧಿಕಾರಿಗಳು, ರಿಯಾ ಮತ್ತು ಶೋವಿಕ್​ ಅವರನ್ನು ಬಂಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net