

ಥೈಲಾಸಿನ್ ಅಥವಾ ಟಾಸ್ಮೇನಿಯನ್ ಹುಲಿ ಸಂತತಿ ಈಗ ಭೂಮಿಯ ಮೇಲಿಲ್ಲ. ಎಂಟು ದಶಕಗಳ ಹಿಂದೆ ಈ ಪ್ರಭೇದದ ಕೊನೆಯ ಪ್ರಾಣಿಯ ವಿಡಿಯೋ ಈಗ ವೈರಲ್ ಆಗಿದೆ. ಈ ಪ್ರಾಣಿಯನ್ನು ಬೆಂಜಮಿನ್ ಎಂದೂ ಕರೆಯಲಾಗುತ್ತದೆ. ನ್ಯಾಷನಲ್ ಫಿಲ್ಮ್ ಆ್ಯಂಡ್ ಸೌಂಡ್ ಅರ್ಕೈವ್ ಆಫ್ ಆಸ್ಟ್ರೇಲಿಯಾ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿದೆ.
ಈಗ ಅಳಿದುಹೋಗಿರುವ, ಥಿಯಾಸಿನ್ ಸ್ಥಳೀಯ ಅತಿದೊಡ್ಡ ಮಾಂಸಾಹಾರಿ ಪ್ರಾಣಿಗಳಲ್ಲಿ ಒಂದಾಗಿತ್ತು.
ಕಾಡುನಾಯಿಯನ್ನು ಹೋಲುವಂತಹ ಈ ಪ್ರಾಣಿಯ ಬೆನ್ನಿನ ಮೇಲೆ ಪಟ್ಟೆಗಳಿದ್ದುದರಿಂದ ಆಗ ಜನ ಇದನ್ನು ಟಾಸ್ಮೆನಿಯನ್ ಹುಲಿ ಎಂದು ಕರೆದಿರಬಹುದು.
1935ರಲ್ಲಿ ಟಾಸ್ಮೆನಿಯಾದ ಹಾರ್ಬರ್ಟ್‌ನಲ್ಲಿರುವ ಬ್ಯೂಮರೀಸ್ ಮೃಗಾಲಯದ ಆವರಣದಲ್ಲಿ ಬೆಂಜಮಿನ್ ಎಂಬ ಹೆಸರಿನ ಈ ಅಪರೂಪದ ಪ್ರಾಣಿಯ ಚಿತ್ರೀಕರಣ ಮಾಡಲಾಗಿತ್ತು.
21 ಸೆಕೆಂಡ್ಗಳ ದೃಶ್ಯಾವಳಿಯನ್ನು ಬೆಂಜಮಿನ್ ಸಾಯುವ ಸ್ವಲ್ಪ ಸಮಯದ ಮೊದಲು ಚಿತ್ರೀಕರಿಸಲಾಗಿತ್ತು. ಅದಾದ ನಂತರ ಸೆಪ್ಟೆಂಬರ್ 7 ರಂದು ಥಿಯಾಸಿನ್ ಸಾವಿಗೀಡಾಯಿತು. ಈಗ ಆ ದಿನವನ್ನು ಆಸ್ಟ್ರೇಲಿಯಾದಲ್ಲಿ ರಾಷ್ಟ್ರೀಯ ಅಳಿವಿನಂಚಿನಲ್ಲಿರುವ ಪ್ರಭೇದಗಳ ದಿನವನ್ನಾಗಿ ಆಚರಿಸಲಾಗುತ್ತದೆ.
ಸಂಪೂರ್ಣ ಅಳಿದು ಹೋಗಿರುವ ಈ ವಿಶಿಷ್ಟ ಪ್ರಾಣಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 1935ರಲ್ಲಿ ಸೆರೆ ಹಿಡಿಯಲಾದ ಈ ಅಪರೂಪದ ದೃಶ್ಯವನ್ನು ನೆಟ್ಟಿಗರು ತೀವ್ರ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.
ಬೆಂಜಮಿನ್ನ ಈ ದೃಶ್ಯಾವಳಿಗಳನ್ನು 1935ರಲ್ಲಿ ಟ್ಯಾಸ್ಮೆನಿಯಾ ದಿ ವಂಡರ್ ಲ್ಯಾಂಡ್ ಎಂಬ ಪ್ರವಾಸ ಕಥನದಿಂದ ತೆಗೆದುಕೊಳ್ಳಲಾಗಿದ್ದು, ಈಗ ಅದನ್ನು ಗುರುತಿಸಿ ಡಿಜಿಟಲ್ ರಿಸ್ಟೋರ್ ಮಾಡಲಾಗಿದೆ.
ಭರ್ತಿ 85 ವರ್ಷಗಳ ನಂತರ ಈ ಅಪರೂಪದ ಪ್ರಾಣಿಯ ವಿಡಿಯೋ ನೋಡುವ ಭಾಗ್ಯ ಸಿಕ್ಕಿದೆ. ಇದು ಈ ಪ್ರಭೇದದ ಕೊನೆಯ ಪ್ರಾಣಿಯಾಗಿದೆ.
ನ್ಯಾಷನಲ್ ಫಿಲ್ಮ್ ಅಂಡ್ ಸೌಂಡ್ ಆರ್ಕೈವ್ ಆಫ್ ಆಸ್ಟ್ರೇಲಿಯಾ (ಎನ್‌ಎಫ್‌ಎಸ್‌ಎ) ಈ ಹುಲಿಯ ಅಪರೂಪದ ದೃಶ್ಯವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ವಿಡಿಯೋ 80,000 ಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಪಟ್ಟಿದೆ.