

ಪುತ್ತೂರು ಗ್ರಾಮಾಂತರ: ಮಳೆಯಿಂದಾಗಿ ನರಿಮೊಗ್ರು ಗ್ರಾ.ಪಂ. ವ್ಯಾಪ್ತಿಯ 30 ಕಡೆಗಳಲ್ಲಿ ಧರೆ ಕುಸಿದು ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ 7 ಮನೆಗಳಿಗೆ ತೀವ್ರ ಹಾನಿಯಾಗಿದೆ. ನರಿಮೊಗರು ಗ್ರಾಪಂ ಸದಸ್ಯರಿಬ್ಬರ ಮನೆಯ ಪಕ್ಕದ ಧರೆ ಕುಸಿದು ಮನೆಗೆ ಅಪಾಯದ ಸ್ಥಿತಿ ಎದುರಾಗಿದೆ.
ಬೊಳ್ಳೆಕ್ಕು ನಿವಾಸಿ ಸಚೀಂದ್ರ ಎಂಬುವರ ಮನೆಯ ಹಿಂಬದಿಯ ಧರೆಯ ಮಣ್ಣು ಕುಸಿದು ಮನೆಯ ಮೇಲೆ ಬಿದ್ದಿದೆ. ತಾರಸಿ ಮನೆಯ ಹಿಂಬದಿಯ ಗೋಡೆ ಕುಸಿತಕ್ಕೊಳಗಾಗಿದ್ದು, ಧರೆಯ ಮಣ್ಣು ಮನೆಯೊಳಗೆ ತುಂಬಿಕೊಂಡಿದೆ. ದೊಡ್ಡ ಪ್ರಮಾಣದಲ್ಲಿ ಮನೆಗೆ ಹಾನಿಯಾಗಿದೆ.
ಕೈಂದಾಡಿ ನಿವಾಸಿ ಜತ್ತಪ್ಪ ಗೌಡ ಮನೆಯ ಪಕ್ಕದ ಧರೆ ಕುಸಿದಿದ್ದು, ಮನೆ ಅಪಾಯದ ಸ್ಥಿತಿಗೆ ತಲುಪಿದೆ. ಮನೆ ಮಂದಿಯ ವಾಸ್ತವ್ಯವನ್ನು ಸ್ಥಳೀಯ ಮನೆಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.
ವೀರಮಂಗಲ ಗುತ್ತು ನಿವಾಸಿ ನಾರ್ಣಪ್ಪ ಗೌಡ ಮನೆಯ ಬದಿಯ ಧರೆ ಕುಸಿದು ಮನೆಗೆ ಹೆಚ್ಚಿನ ಹಾನಿಯಾಗಿದ್ದು, ಮನೆ ಮಂದಿಯ ವಾಸ್ತವ್ಯವನ್ನು ಸ್ಥಳಾಂತರಿಸಲಾಗಿದೆ.
ಕೈದ್ಕಾರು ನಿವಾಸಿ ಬಾಳಪ್ಪ ಗೌಡ, ಬಜಪ್ಪಳ ನಿವಾಸಿ ಸುಶೀಲಾ, ಬೊಳ್ಳಾರು ನಿವಾಸಿ ಆಶಾ ಮತ್ತು ನಡುವಾಲ್ ನಿವಾಸಿ ಸುಧಾಕರ್ ಕುಲಾಲ್ ಅವರ ಮನೆಯ ಪಕ್ಕದ ಧರೆಗಳು ಕುಸಿದು ಹಾನಿ ಸಂಭವಿಸಿದ್ದು, ಈ ಮನೆಗಳಿಗೆ ಅಪಾಯದ ಸ್ಥಿತಿ ಎದುರಾಗಿದೆ.