ಯಲ್ಲಾಪುರ: ತಾಲೂಕಿನ ಕಳಚೆಯಲ್ಲಿ ಜೋರಾದ ಮಳೆಯಿಂದಾಗಿ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿಯುತ್ತಿದೆ. ಶುಕ್ರವಾರ ಸಂಜೆ ಕಳಚೆಯ ಶಂಬಡೆಮನೆ ಕೇರಿಗೆ ಹೋಗುವ ರಸ್ತೆ ಕುಸಿದ ಬೆನ್ನಲ್ಲೇ ಶನಿವಾರವೂ ಕೆಲವೆಡೆ ಮಣ್ಣು ಕುಸಿದ ಘಟನೆಗಳು ನಡೆದಿವೆ.
ಮಳೆ ಗಾಳಿಯ ಪರಿಣಾಮ ಕಳಚೆಯ ಬಹುತೇಕ ಎಲ್ಲ ರೈತರ ತೋಟಗಳಲ್ಲಿ ಅಡಕೆ ಮರಗಳು ಮುರಿದು ಹಾನಿಯಾಗಿದೆ. ಮೂರು ವರ್ಷಗಳ ಹಿಂದೆ ಭಾರಿ ಪ್ರಮಾಣದಲ್ಲಿ ಭೂ ಕುಸಿತ ಉಂಟಾದ ಪ್ರದೇಶದಲ್ಲಿ ಮತ್ತೆ ಸಣ್ಣ ಪ್ರಮಾಣದಲ್ಲಿ ಧರೆ ಕುಸಿದಿರುವುದು ಕಂಡು ಬಂದಿದೆ.
ಮಾನಿಗದ್ದೆ ಕುಂಬ್ರಿಯ ಜನಾರ್ದನ ಹೆಬ್ಬಾರ್ ಅವರ ತೋಟಕ್ಕೆ ಹಾನಿಯಾಗಿದೆ. ಅಂಬಡೆಕೇರಿ ಸೂರ್ಯನಾರಾಯಣ ಭಟ್ಟ ಅವರ ಮನೆ ಹಿಂದೆಯೂ ಧರೆಯ ಮಣ್ಣು ಕುಸಿದಿದೆ. ಇಟ್ಲಮನೆ ಜಿ.ಎಸ್. ಭಟ್ಟ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಹೆಬ್ಬಾರ ಕುಂಬ್ರಿಯ ಆರ್.ಪಿ. ಹೆಗಡೆ ಅವರ ಕೊಟ್ಟಿಗೆಯ ಗೋಡೆ ಕುಸಿದಿದೆ.