

ಮುಂಬೈ: ಐಪಿಎಲ್ ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಲಲಿತ್ ಮೋದಿ(Lalit Modi) ಅವರ ಜೀವನದಲ್ಲಿ ಮತ್ತೊಂದು ಪ್ರೀತಿ ಹುಟ್ಟಿದೆ. ಪ್ರೇಮಿಗಳ ದಿನದಂದು(ಫೆಬ್ರವರಿ 14)ಅವರು ತಮ್ಮ ಪ್ರೇಯಸಿಯೊಂದಿಗಿನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಸುಶ್ಮಿತಾ ಸೇನ್ ಅವರೊಂದಿಗಿನ ತಮ್ಮ ಸಂಬಂಧ ಮುರಿದುಬಿದ್ದಿರುವುದನ್ನು ದೃಢಪಡಿಸಿದ್ದಾರೆ.
ಲಲಿತ್ ಮೋದಿ ತಮ್ಮ ಸಂಗಾತಿಯ ಹೆಸರನ್ನು ಬಹಿರಂಗಪಡಿಸದಿದ್ದರೂ ಅವರೊಂದಿಗಿನ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದು ಅವರ 25 ವರ್ಷಗಳ ಸ್ನೇಹವು ಸಂಬಂಧವಾಗಿ ಮಾರ್ಪಟ್ಟಿದೆ ಎಂದು ತೋರಿಸುತ್ತದೆ. ಲಲಿತ್ ಮೋದಿ ಈ ಹಿಂದೆ ಮಿನಾಲ್ ಮೋದಿ ಅವರನ್ನು ವಿವಾಹವಾಗಿದ್ದರು. ಈ ಜೋಡಿ 1991ರಲ್ಲಿ ವಿವಾಹವಾದರು ಮತ್ತು 2018ರಲ್ಲಿ ಕ್ಯಾನ್ಸರ್ನಿಂದಾಗಿ ಮಿನಾಲ್ ಮೃತಪಟ್ಟರು. ಆದಾದ ನಂತರ 2022ರಲ್ಲಿ ಸುಶ್ಮಿತಾ ಸೇನ್ ಲಲಿತ್ ಮೋದಿ ಅವರ ಜೀವನವನ್ನು ಪ್ರವೇಶಿಸಿದರು. ಬಹಳ ದಿನಗಳಿಂದ ಈ ಸಂಬಂಧ ಮುರಿದು ಬಿದ್ದಿದೆ ಎಂಬ ಊಹಾಪೋಹಳಗು ಹರಿದಾಡುತ್ತಿತ್ತು. ಸದ್ಯ ಲಲಿತ್ ಮೋದಿ ಹಂಚಿಕೊಂಡಿರುವ ವಿಡಿಯೋದಿಂದ ಈ ವಿಚಾರ ದೃಢಪಟ್ಟಿದೆ.
ಲಲಿತ್ ಮೋದಿ ತಮ್ಮ ಪ್ರೇಯಸಿ ಜತೆಗಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರೊಂದಿಗಿನ ಫೋಟೋಗಳಿವೆ. ಪೋಸ್ಟ್ ಹಂಚಿಕೊಳ್ಳುವಾಗ ಅವರು, ಒಮ್ಮೆ ಅದೃಷ್ಟವಂತ. ಹೌದು, ಆದರೆ ನಾನು ಎರಡು ಬಾರಿ ಅದೃಷ್ಟಶಾಲಿಯಾಗಿದ್ದೆ. 25 ವರ್ಷಗಳ ಸ್ನೇಹ ಪ್ರೀತಿಗೆ ತಿರುಗಿದಾಗ. ಇದು ಎರಡು ಬಾರಿ ಆಯಿತು. ಇದು ನಿಮ್ಮೆಲ್ಲರಿಗೂ ಕೂಡ ಆಗಲಿ ಎಂದು ಆಶಿಸುತ್ತೇನೆ. ನಿಮ್ಮೆಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು ಎಂದು ಬರೆದಿದ್ದಾರೆ. ಈ ವಿಡಿಯೋ ಕ್ಲಿಪ್ ಅವರಿಬ್ಬರು ಕಳೆದ ಅಮೂಲ್ಯ ಕ್ಷಣಗಳ ಒಂದು ನೋಟವನ್ನು ನೀಡುತ್ತದೆ. ಪೋಸ್ಟ್ ಹಂಚಿಕೊಂಡ ನಂತರ ಜನರು ಅವರನ್ನು ಅಭಿನಂದಿಸಲು ಪ್ರಾರಂಭಿಸಿದರು.
2022ರಲ್ಲಿ ಲಲಿತ್ ಮೋದಿ ಅವರು ಸುಶ್ಮಿತಾ ಸೇನ್ ಅವರೊಂದಿಗಿನ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದರು. ಅವರು ತಮ್ಮ ಮಾಲ್ಡೀವ್ಸ್ ರಜೆಯ ಚಿತ್ರಗಳನ್ನು ಹಂಚಿಕೊಂಡರು. ಇಷ್ಟು ಮಾತ್ರವಲ್ಲದೆ ಅವರು ತಮ್ಮ ಇನ್ಸ್ಟಾಗ್ರಾಮ್ ಬಯೋವನ್ನೂ ಬದಲಾಯಿಸಿದ್ದಾರೆ. ಲಲಿತ್ ಮೋದಿ ಜತೆಗಿನ ಸಂಬಂಧದ ನಂತರ ಜನರು ಸುಶ್ಮಿತಾ ಸೇನ್ ಅವರನ್ನು ಟೀಕಿಸಿದ್ದರು. ಆದರೆ ಅವರು ತಕ್ಕ ಉತ್ತರ ನೀಡುವ ಮೂಲಕ ಟ್ರೋಲ್ಗಳ ಬಾಯಿ ಮುಚ್ಚಿಸಿದ್ದರು.(ಏಜೆನ್ಸೀಸ್)