Lalbaugcha Raja | ಗಣೇಶನಿಗೆ ದಾನದ ರೂಪದಲ್ಲಿ ನೀಡಿದ್ದ ಬಿಸ್ಕತ್ತು 11 ಲಕ್ಷ ರೂಪಾಯಿಗೆ ಹರಾಜು!; ಮಂಡಳಿಯ ಒಟ್ಟು ಗಳಿಕೆ ಎಷ್ಟು ಕೋಟಿ..?

Lalbaugcha Raja (1)
Published on

Lalbaugcha Raja: ಮುಂಬೈನ ಪ್ರಸಿದ್ಧ ಗಣೇಶ ಮಂಟಪವಾದ ಲಾಲ್‌ಬಾಗ್ಚಾ ರಾಜಾ ತನ್ನ ವಿಶಿಷ್ಟ ಆಚರಣೆಯ ಮೂಲಕ ಇಲ್ಲಿನ ಗಣೇಶ ಚತುರ್ಥಿ ವಿಶ್ವಾದಾದ್ಯಂತ ಹೆಸರು ಮಾಡಿದೆ. ಅನೇಕ ರಾಜಕಾರಣಿಗಳು, ನಟ ನಟಿಯರು, ಉದ್ಯಮಿಗಳು ಇಲ್ಲಿನ ವಿನಾಯಕನ ದರ್ಶನ ಪಡೆದು ಪುನೀತರಾಗುತ್ತಾರೆ.

ಲಾಲ್‌ಬಾಗ್ಚಾ ರಾಜಾ ಮುಂಬೈನ ಅತಿದೊಡ್ಡ ಗಣೇಶೋತ್ಸವ ಪೆಂಡಾಲಾಗಿದ್ದು, ಈ ಸಾರ್ವಜನಿಕ ಗಣೇಶೋತ್ಸವ ಮಂಡಳಿಯು ಭಕ್ತರು ದಾನ ಮಾಡಿದ 108 ತರಹದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಇತರ ವಸ್ತುಗಳನ್ನು ಹರಾಜಿಟ್ಟು 1.65 ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎಂದು ವರದಿಯಾಗಿದೆ. ಪೆಂಡಲ್‌ಗೆ ಸುಮಾರು ಎರಡು ಕೆಜಿ ಚಿನ್ನ ಮತ್ತು 55 ಕೆಜಿ ಬೆಳ್ಳಿ ದಾನವಾಗಿ ಬಂದಿದ್ದು, ಇದರಲ್ಲಿ ಚಿನ್ನದ ಹಾರಗಳು, ಮೋದಕಗಳ ಬೆಳ್ಳಿ ಮಾದರಿ, ಮೂಷಿಕ, ಗದೆ ಮತ್ತು ಕ್ರಿಕೆಟ್ ಬ್ಯಾಟ್ ಸೇರಿವೆ ಎನ್ನಲಾಗಿದೆ.

ಈ ವಿಷಯವಾಗಿ ಮಾತನಾಡಿರುವ ಮಂಡಳಿಯ ಅಧ್ಯಕ್ಷ ಬಾಳಾಸಾಹೇಬ್ ಕಾಂಬ್ಳೆ, ಭಕ್ತರು ಅರ್ಪಿಸಿದ ಚಿನ್ನ ಮತ್ತು ಬೆಳ್ಳಿ ವಸ್ತುಗಳ ಬಹಿರಂಗ ಹರಾಜು ಗುರುವಾರ ಸಂಜೆ 5 ರಿಂದ ರಾತ್ರಿ 10 ರವರೆಗೆ ಲಾಲ್‌ಬೌಗ್ಚಾ ರಾಜಾ ವೇದಿಕೆಯಲ್ಲಿ ನಡೆಯಿತು. ಇದರಲ್ಲಿ ಒಂದು ಬಂಗಾರದ ಬಿಸ್ಕತ್ತು 11 ಲಕ್ಷ ರೂ.ಗಳಿಗೆ ಖರೀದಿಸಿದ್ದಾರೆ, ಇದು ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಭರಣ ಎಂದರು.

ಆದಾಯದಲ್ಲಿ ಇಳಿಕೆ

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹರಾಜಿನಿಂದ ಬಂದ ಹಣವು ಗಮನಾರ್ಹವಾಗಿ ಕಡಿಮೆಯಾಗಿದೆ, ಬಹುಶಃ ಇದಕ್ಕೆ ಬಂಗಾರದ ಬೆಲೆ ಏರಿಕೆಯ ಕಾರಣವಾಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಹಿಂದಿನ ವರ್ಷಗಳ ಗಳಿಕೆ

2024 ರಲ್ಲಿ, ಈ ಪೆಂಡಾಲ್‌ಗೆ 5.65 ಕೋಟಿ ರೂಪಾಯಿ ನಗದು ದೇಣಿಗೆ, 4.15 ಕೆಜಿ ಚಿನ್ನ ಮತ್ತು 64.32 ಕೆಜಿ ಬೆಳ್ಳಿ ಸಿಕ್ಕಿತು. 990.6 ಗ್ರಾಂ ತೂಕದ ಚಿನ್ನದ ಸರವನ್ನು 69.31 ಲಕ್ಷ ರೂಪಾಯಿಗಳಿಗೆ ಹರಾಜಿನಲ್ಲಿ ಮಾರಾಟ ಮಾಡಲಾಯಿತು.

92ನೇ ವರ್ಷವನ್ನು ಆಚರಿಸಿದ ಲಾಲ್‌ಬಾಗ್ಚಾ ರಾಜದಲ್ಲಿರುವ ಈ ವಿಗ್ರಹವನ್ನು ನವಸಾಚ ರಾಜ ಎಂದು ಕರೆಯಲಾಗುತ್ತದೆ, ಭಕ್ತರ ಆಶಯಗಳನ್ನು ಈಡೇರಿಸುತ್ತದೆ ಎಂದು ನಂಬಲಾಗಿದೆ, ಆದ್ದರಿಂದ ಇದನ್ನು ಬಹಳ ಭಕ್ತಿಯಿಂದ ಪೂಜಿಸಲಾಗುತ್ತದೆ. ಮಕ್ಕಳಿಲ್ಲದ ದಂಪತಿಗಳು ತಮ್ಮ ಆಸೆ ಈಡೇರಬೇಕೆಂದು ಪ್ರಾರ್ಥಿಸುವುದನ್ನು ಇಲ್ಲಿ ಕಾಣಬಹುದು. ತಮ್ಮ ಆಸೆ ಈಡೇರಿದ ನಂತರ, ಅವರು ಇಲ್ಲಿನ ಗಣೇಶನಿಗೆ ಬೆಳ್ಳಿಯ ತೊಟ್ಟಿಲನ್ನು ದಾನ ಮಾಡುತ್ತಾರೆ, ಅದನ್ನು ಇತರ ದಂಪತಿಗಳು ಪ್ರಸಾದದ ರೂಪವಾಗಿ ಸ್ವೀಕರಿಸುತ್ತಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net