3 ಗಂಟೆಯಲ್ಲಿ ಪಾಸ್‌ಪೋರ್ಟ್ ವಿತರಿಸಿ ದಾಖಲೆ ಬರೆದ ಲಾಲ್‌ಬಾಗ್ ರಸ್ತೆಯ ಸೇವಾ ಕೇಂದ್ರ

New Project (1)
Published on

ಬೆಂಗಳೂರು: ಲಾಲ್‌ಬಾಗ್ ಪಾಸ್‌ಪೋರ್ಟ್ ಸೇವಾ ಕೇಂದ್ರವು ಅರ್ಜಿ ಸಲ್ಲಿಸಿದ ಮೂರು ಗಂಟೆಗಳಲ್ಲಿ ಗೃಹಿಣಿಯೊಬ್ಬರಿಗೆ ಪಾಸ್‌ಪೋರ್ಟ್ ನೀಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಗೃಹಿಣಿ ಬೃಂದಾದೇವಿ ಎಂಬುವವರು ತಮ್ಮ ಪತಿಯ ತುರ್ತು ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಪತಿಯೊಂದಿಗೆ ಇರಲು ಗುರುವಾರ ತಡರಾತ್ರಿ ಬೆಂಗಳೂರಿನಿಂದ ಇಂಡೋನೇಷ್ಯಾದ ಜಕಾರ್ತಕ್ಕೆ ಹೋಗಬೇಕಿತ್ತು. ಆದರೆ ಹಿಂದಿನ ದಿನ ಪಾಸ್‌ಪೋರ್ಟ್ ಅವಧಿ ಮುಗಿದಿರುವುದು ಗೊತ್ತಾಯಿರು. ಇದಕ್ಕೆ ಲಾಲ್‌ಬಾಗ್‌ನ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಶೇಷ ಮತ್ತು ತುರ್ತು ಅವಶ್ಯಕತೆಯನ್ನು ಮನಗಂಡು ಅರ್ಜಿ ಸಲ್ಲಿಸಿದ ಮೂರು ಗಂಟೆಯಲ್ಲಿ ಪಾಸ್‌ಪೋರ್ಟ್ ವಿತರಿಸಲು ಅಧಿಕಾರಿಗಳು ಕ್ರಮಕೈಗೊಂಡಿರುವುದು ಹೊಸ ದಾಖಲೆಗೆ ಕಾರಣವಾಗಿದೆ.

ಜಕಾರ್ತದಲ್ಲಿ ಸ್ಪಿನ್ನಿಂಗ್ ಮಿಲ್‌ನ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ ನಿವಾಸಿ ಕುಮಾರೇಶನ್ (56) ಅವರು ಬುಧವಾರ ತಡರಾತ್ರಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ಅವರ ಸೋದರಳಿಯ ರಮೇಶ್ ಕುಮಾರ್ ತಿಳಿಸಿದಾಗ ತುರ್ತು ಟಿಕೆಟ್ ಮಾಡಲು ನೋಡುತ್ತಾರೆ. ಆದರೆ ಪಾಸ್‌ಪೋರ್ಟ್ ಅವಧಿ ಮುಗಿದಿದ್ದು ಆಗ ಗೊತ್ತಾಗುತ್ತದೆ. ಲಾಲ್ಬಾಗ್ ಸೇವಾ ಕೇಂದ್ರದಲ್ಲಿ ಆನ್‌ಲೈನ್ ಮುಖಾಂತರ ಅಪಾಯಿಂಟ್‌ಮೆಂಟ್ ಪಡೆದು, ಅಧಿಕಾರಿಗಳಿಗೆ ಪರಿಸ್ಥಿತಿಯ ವಿವರಿಸಿದಾಗ, ಅಧಿಕಾರಿಗಳು ಪ್ರಾದೇಶಿಕ ಕಚೇರಿಯ ಗಮನಕ್ಕೆ ತಂದು ಕೂಡಲೇ ಪಾಸ್‌ಪೋರ್ಟ್ ವಿತರಿಸಲು ಕ್ರಮಕೈಗೊಂಡರು.

ಮಧ್ಯಾಹ್ನ 1 ಗಂಟೆಗೆ ನೇರ ಸಂದರ್ಶನ ಮಾಡಿ, ದಾಖಲೆಗಳ ಪರಿಶೀಲನೆ ಮಾಡಲಾಯಿತು. ಪಾಸ್‌ಪೋರ್ಟ್‌ಗಳನ್ನು ಪ್ರಾದೇಶಿಕ ಕಚೇರಿಯಲ್ಲಿ ಮಾತ್ರ ಮುದ್ರಿಸುವುದರಿಂದ ಸಂಜೆ 4 ಗಂಟೆಗೆ ಪಾಸ್‌ಪೋರ್ಟ್ ಮುದ್ರಣವಾಗಿದ್ದು, ಕೋರಮಂಗಲದ ಪ್ರಧಾನ ಕಚೇರಿಗೆ ಬಂದು ಸ್ವೀಕರಿಸುವಂತೆ ಸಂದೇಶ ಬಂತು.

ಈ ಪ್ರಕರಣದಲ್ಲಿ ಪೊಲೀಸ್ ಪರಿಶೀಲನೆಯನ್ನು ನಂತರ ಮಾಡಲಾಗುವುದು ಎಂದು ಪಾಸ್‌ಪೋರ್ಟ್ ಕಚೇರಿ ಅಧಿಕಾರಿ ಕೃಷ್ಣ ತಿಳಿಸಿದ್ದಾರೆ. ಅಧಿಕಾರಿಗಳ ಈ ಸ್ಪಂದನೆಯಿಂದಾಗಿ ಬೃಂದಾ ಈಗಾಗಲೇ ಇಂಡೋನೇಷ್ಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net