

ಬೆಂಗಳೂರು: ಕನಸು ಕಾಣುವವರಲ್ಲಿ ಸಾಹಿತಿಗಳೇ ಹೆಚ್ಚು. ಆದರೆ ಕಂಡ ಕನಸನ್ನು ನನಸು ಮಾಡಿ ತೋರಿದ ಅಪರೂಪದ ಸಾಹಿತಿ ಡಾ.ಎಲ್.ಹನುಮಂತಯ್ಯ ಎಂದು ಹಿರಿಯ ಸಾಹಿತಿ ಡಾ.ಎಚ್.ಎಸ್.ಶಿವಪ್ರಕಾಶ್ ಅಭಿಪ್ರಾಯಿಸಿದ್ದಾರೆ. ಕನ್ನಡಭವನದ ನಯನ ಸಭಾಂಗಣದಲ್ಲಿ ‘ಭಾಗವತರು’ ಸಾಂಸ್ಕೃತಿಕ ಸಂಘಟನೆ ಭಾನುವಾರ ಆಯೋಜಿಸಿದ್ದ ಡಾ.ಎಲ್.ಹನುಮಂತಯ್ಯ- 65 ಬದುಕು ಮತ್ತು ಬರಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕನಸು ಕಾಣುವುದು ಸಾಮಾನ್ಯ, ಅದರಲ್ಲೂ ಸಾಹಿತಿಗಳಲ್ಲಿ ಸರ್ವೇಸಾಮಾನ್ಯ. ಆದರೆ ಕಂಡ ಕನಸನ್ನು ನನಸಾಗಿಸುವುದು ಅಪರೂಪ. ಆದರೆ ಹನುಮಂತಯ್ಯನವರು ಈ ಮಾತಿಗೆ ಭಿನ್ನವಾಗಿ ನಡೆದುಕೊಂಡವರು. ಸಾಹಿತಿಯಾಗಿ, ಹೋರಾಟಗಾರರಾಗಿ, ರಾಜಕಾರಣಿಯಾಗಿ ಅವರು ನಡೆದು ಬಂದ ದಾರಿ ವಿಭಿನ್ನ. ಸಾಹಿತ್ಯದಲ್ಲಿ ರಾಜಕೀಯವನ್ನಾಗಲಿ, ರಾಜಕೀಯದಲ್ಲಿ ಸಾಹಿತ್ಯವನ್ನಾಗಲಿ ಬೆರೆಸದೆ ಎರಡೂ ಕಡೆ ಶೋಷಿತರ ಪರವಾದ ಧ್ವನಿಯನ್ನು ಎತ್ತಿದ ಅಪರೂಪದ ವ್ಯಕ್ತಿ ಎಲ್.ಎಚ್.ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ದೂರದರ್ಶನ ಕೇಂದ್ರದ ಹಿರಿಯ ಕಾರ್ಯಕ್ರಮ ನಿರ್ವಾಹಕಿ ಎಚ್.ಎನ್.ಆರತಿ ಮಾತನಾಡಿ, ಹನುಮಂತಯ್ಯ ಅವರು ಬ್ಯಾಂಕ್ ನೌಕರರಾಗಿ ಬ್ಯಾಂಕ್‌ಗಳ ಇಂಗ್ಲಿಷ್‌ಮಯ ವಾತಾವರಣವನ್ನು ತಮ್ಮ ಹೋರಾಟದ ಮೂಲಕ ಕನ್ನಡಮಯವಾಗಿಸಿದ್ದನ್ನು ನೆನಪಿಸಿಕೊಂಡರು.
ಇದೇ ಸಂದರ್ಭದಲ್ಲಿ ಡಾ.ಎಲ್.ಹನುಮಂತಯ್ಯ ಅವರ ಮೂಲಮುಖಿ ಹಾಗೂ ಆಕಾಶಕ್ಕೆ ಏಣಿ ಹಾಕು ಕೃತಿಗಳು ಲೋಕಾರ್ಪಣೆಗೊಂಡವು. ನಂತರ ಡಾ.ಎಲ್.ಎಚ್ ಅವರ ಬದುಕು ಮತ್ತು ಬರಹ ಕುರಿತು ವಿವಿಧ ವಿಚಾರಗೋಷ್ಠಿ, ಗಾಯನ, ರಂಗಗೌರವ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್, ಭಾಗವತರು ಸಾಂಸ್ಕೃತಿಕ ಸಂಘಟನೆಯ ಕೆ.ರೇವಣ್ಣ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ ಇನ್ನಿತರರಿದ್ದರು.
ಡಾ. ಎಲ್.ಹನುಮಂತಯ್ಯ ಅವರು ದಲಿತ ಮತ್ತು ಬಂಡಾಯ ಸಾಹಿತ್ಯದ ನಡುವಿನ ಕೊಂಡಿಯಾಗಿ ಕೆಲಸ ನಿರ್ವಹಿಸಿದ್ದು, ಇವರು ಇಲ್ಲದೆ ಹೋಗಿದ್ದರೆ ಎರಡೂ ಸಾಹಿತ್ಯದ ನಡುವಿನ ಅಂತರ ಹೆಚ್ಚಾಗುತ್ತಿತ್ತು ಎಂದು ಬೆಂಗಳೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ರಾಜಪ್ಪ ದಳವಾಯಿ ಹೇಳಿದರು. ಡಾ.ಎಲ್.ಎಚ್ ಸಾಹಿತ್ಯದ ಕುರಿತು ನಡೆದ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹನುಮಂತಯ್ಯನವರ ದಲಿತ ಸಾಹಿತ್ಯ ಹೊಸ ಬೆಳಕಿನ ಕಿಡಿಗಳಾಗಿದ್ದು, ದಲಿತರ ಬದುಕು ಮತ್ತು ಭವಣೆಯ ಅಂತಃಸತ್ವವನ್ನು ಪ್ರತಿಪಾದಿಸಿವೆ. ಅವರ 50 ಕ್ಕೂ ಹೆಚ್ಚಿನ ಲೇಖನಗಳು ಸಮಕಾಲೀನ ಸಮಸ್ಯೆಗಳು, ಸಂಘಟನೆಯ ಸಂಕಷ್ಟಗಳನ್ನು ಅನಾವರಣ ಮಾಡಿವೆ ಎಂದು ವಿವರಿಸಿದರು. ಗೋಷ್ಠಿಯಲ್ಲಿ ಸಾಹಿತಿಗಳಾದ ಎಚ್.ಎಲ್.ಪುಷ್ಪ, ಷರೀಫಾ ಮತ್ತಿತರರಿದ್ದರು.