

ಹೆಬ್ರಿ: ದೇವರ ಚಿಂತನೆ ಮಾಡಲು ವಿವಿಧ ಮಾರ್ಗಗಳಿವೆ. ಅದರಲ್ಲಿ ಜ್ಞಾನ ಮಾರ್ಗ ಶ್ರೇಷ್ಠವೆಂದು ವೇದ, ಪುರಾಣಗಳಲ್ಲಿ ಉಲ್ಲೇಖವಾಗಿದೆ. ಇಂದ್ರಿಯ ನಿಗ್ರಹದೊಂದಿಗೆ ಅಹಿಂಸಾ ಮಾರ್ಗ ಅನುಸರಿಸುತ್ತಾ ಪ್ರಾಮಾಣಿಕ ಪ್ರಯತ್ನದಿಂದ ಜೀವನ ಸಾಗಿಸಬೇಕು ಎಂದು ವೇದಾಂತ ವಿದ್ವಾನ್ ಇರ್ವತ್ತೂರು ವ್ಯಾಸರಾಜ ಆಚಾರ್ಯ ಹೇಳಿದರು.
ಮುದ್ರಾಡಿ ಗ್ರಾಮದ ಬಲ್ಲಾಡಿ ಮಠದ ವಿಠ್ಠಲ ದೇವರ ಸಾನ್ನಿಧ್ಯದಲ್ಲಿ ಲಕ್ಷ ತುಳಸಿ ಅರ್ಚನೆಯಲ್ಲಿ ಧಾರ್ಮಿಕ ಪ್ರವಚನ ನೀಡಿದರು. ಯಾವುದೇ ಕಾರ್ಯದಲ್ಲಿ ಭಗವಂತನ ಚಿಂತನೆ ಇದ್ದಲ್ಲಿ ಬದುಕಿನಲ್ಲಿ ಯಶಸ್ಸು ಸಾಧ್ಯ. ನಮ್ಮ ಶರೀರ ಇರುವುದೇ ಉತ್ತಮ ಕಾರ್ಯವೆಸಗಲು ಎನ್ನುವ ಅರಿವಿದ್ದಾಗ ಸಫಲತೆ ಕಂಡುಕೊಳ್ಳಬಹುದು. ವಿಷ್ಣು ದೇವರಿಗೆ ಪ್ರಿಯವಾದ ತುಳಸಿ ಅರ್ಚನೆಯಿಂದ ಸಕಲ ದುರಿತ ದೂರವಾಗಿ ಲೋಕಕ್ಕೆ ಕಲ್ಯಾಣವಾಗುತ್ತದೆ ಎಂದರು. ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿದರು.
ವಿದ್ವಾನ್ ಗಿಲ್ಲಾಳಿ ಪದ್ಮನಾಭ ಆಚಾರ್ಯ, ಎಂ.ರಾಘವೇಂದ್ರ ಅಡಿಗ ಬೆಳಗುಂಡಿ ಮತ್ತು ಅರ್ಚಕ ನಾರಾಯಣ ಭಟ್ ನೇತೃತ್ವದಲ್ಲಿ ತುಳಸಿ ಅರ್ಚನೆ ನಡೆಯಿತು. ಹೆಬ್ರಿ ಮತ್ತು ಕಾರ್ಕಳ ತಾಲೂಕಿನ ವಿಪ್ರ ಬಾಂಧವರ ಸಹಕಾರದಿಂದ ಕಾರ್ಯಕ್ರಮ ಸಂಪನ್ನಗೊಂಡಿತು. ವಿಪ್ರ ಮಹಿಳೆಯರಿಂದ ಲಕ್ಷ್ಮೀ ಶೋಭಾನೆ, ಭಜನಾ ಕಾರ್ಯಕ್ರಮ ಹಾಗೂ ಸ್ಯಾಕ್ಸೋಫೋನ್ ವಾದನ ನಡೆಯಿತು.