

ದೆಹಲಿ:ಗಣರಾಜ್ಯೋತ್ಸವದ(Republic Day) ಪಥಸಂಚಲನದಲ್ಲಿ ಪ್ರತಿ ವರ್ಷ ಕರ್ನಾಟಕ ಪರವಾಗಿ ವಿಶೇಷವಾಗಿ ಸ್ತಬ್ಧಚಿತ್ರಗಳು ಪಾಲ್ಗೊಳ್ಳುತ್ತಿವೆ. ಅದರಂತೆ ಈ ಬಾರಿ ರಾಜ್ಯದ 'ಲಕ್ಕುಂಡಿ ಶಿಲ್ಪಕಲೆಯ ತೊಟ್ಟಿಲು' ಎಂಬ ಸ್ತಬ್ಧಚಿತ್ರ ಭಾಗವಹಿಸಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ತಿಳಿಸಿದ್ದಾರೆ.
ಕರ್ನಾಟಕಕ್ಕೆ ಈ ಬಾರಿಯ ಗಣರಾಜ್ಯೋತ್ಸವದ ಸ್ತಬ್ಧಚಿತ್ರವು ಅತ್ಯಂತ ಸ್ಮರಣೀಯವಾದುದು. ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವ ನಮ್ಮ ರಾಜ್ಯದಲ್ಲಿ ಎಲ್ಲಾ ಧರ್ಮಗಳ ದೇವಾಲಯಗಳಿವೆ. ಈ ಪೈಕಿ ಐತಿಹಾಸಿಕ ಪಟ್ಟಣವಾದ ಗದಗದ ಲಕ್ಕುಂಡಿಯು ಒಂದಾಗಿದೆ. ಅಹಿಂಸಾವಾದಿಯ ನೆಲೆಬೀಡು. ಶಿಲ್ಪಕಲೆಯ ತೊಟ್ಟಿಲಾದ ಲಕ್ಕುಂಡಿಯಲ್ಲಿ ಶೈವ, ಜೈನ ಮತ್ತು ವೈಷ್ಣವ ದೇವಾಲಯಗಳಿವೆ.
ಕಲಾತ್ಮಕತೆಯಿಂದ ಕಂಗೊಳಿಸುವ ಇಲ್ಲಿನ ದೇವಾಲಯಗಳು ಈ ಬಾರಿಯ ಸ್ತಬ್ಧಚಿತ್ರದಲ್ಲಿ ಅವುಗಳ ಪಡಿಯಚ್ಚಿನಂತೆ ಮೂಡಿಬಂದಿವೆ. ಜೊತೆಗೆ, ದೇವಾಲಯವೇ ಮರುಜೀವ ತಳೆದಂತಿದೆ. ರಾಜ್ಯವು ಪ್ರಸ್ತುತ ಪಡಿಸುತ್ತಿರುವ ಈ ಸ್ತಬ್ಧಚಿತ್ರವು ಇದೇ ಜ.26 ರಂದು ಎಲ್ಲರ ಮನಸೂರೆಗೊಳ್ಳಲಿದೆ ಎನ್ನುವ ವಿಶ್ವಾಸ ಇದೆ ಎಂದು ದೆಹಲಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದಹೆಲಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸುವ ಸ್ತಬ್ಧಚಿತ್ರಕ್ಕಾಗಿ ಇಲಾಖೆಯು ಲಕ್ಕುಂಡಿ ಶಿಲ್ಪಕಲೆಯ ತೊಟ್ಟಿಲು (Lakkundi - The Cradle of Stone Craft), ಮೆಕ್ಕೆಕಟ್ಟು ಮರಕೆತ್ತನೆಯ ದೈವ ನಿಧಿ (Mekkekattu – “Wood Carved Treasures of Divinity), ಕರ್ನಾಟಕದ ಸಮೃದ್ದಿಯ ಆಚರಣೆಗಳು (Rituals of Prosperity) ಮತ್ತು ಕರ್ನಾಟಕ ಒಂದು ರಾಜ್ಯ ಹಲವು ಜಗತ್ತು (Karnataka “One State. Many Worlds) ಎಂಬ ನಾಲ್ಕು ವಿಷಯಗಳನ್ನು ಆಯ್ಕೆ ಮಾಡಿಕಳುಹಿಸಿತ್ತು. ಮೊದಲ ಸಭೆಯಲ್ಲಿಯೇ ʼಲಕ್ಕುಂಡಿ ಶಿಲ್ಪಕಲೆಯ ತೊಟ್ಟಿಲುʼ ಎಂಬ ವಿಷಯವನ್ನು ಪರಿಣತರ ಸಮಿತಿಯು ಒಮ್ಮತದಿಂದ ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದರು.